

ಹರಿಹರ: ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶಾಸಕ ಬಿ.ಪಿ. ಹರೀಶ್ ಸೂಚನೆ ನೀಡಿದರು.
ನಗರದ ಗುರುಭವನದಲ್ಲಿ ಪೊಲೀಸ್ ಇಲಾಖೆ ಮತ್ತು ನಗರಸಭೆ ವತಿಯಿಂದ ಶನಿವಾರ ಆಯೋಜಿಸಿದ್ದ ರಸ್ತೆ ಸುರಕ್ಷತೆ ಸಂಚಾರಿ ದಟ್ಟಣೆ ಸುಧಾರಣೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತ್ತೀಚೆಗೆ ಹರಿಹರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಆತಂಕ ಮೂಡಿಸುತ್ತಿದೆ. ಮನೆಗಳ್ಳತನ, ಸರಗಳ್ಳತನ, ವಾಹನ ಕಳ್ಳತನ ಪ್ರಕರಣ ಹೆಚ್ಚುತ್ತಿವೆ. ಪೊಲೀಸರು ನಗರ ಸಂಚಾರ ಮಾಡುತ್ತಿಲ್ಲ. ಆದಷ್ಟು ನಗರದಲ್ಲಿ ಬೀಟ್ ಸಂಚರಿಸುವ ಮೂಲಕ ಅಪರಾಧ ಕೃತ್ಯ ತಡೆಯಬೇಕೆಂದರು.
ನಗರಸಭೆ ಹಿರಿಯ ಸದಸ್ಯ ಶಂಕರ್ ಖಟಾವಕರ್ ಮಾತನಾಡಿ, ಹರಿಹರ ಜಂಕ್ಷನ್ ಪ್ರದೇಶವಾಗಿದ್ದು ಜನ ವಾಹನ ದಟ್ಟಣೆಯ ಹೆಚ್ಚಿನ ಸಂಚಾರ ಇರುತ್ತದೆ. ನಗರಸಭೆಯಿಂದ ಪೊಲೀಸ್ ಇಲಾಖೆಗೆ ಸಿಸಿ ಕ್ಯಾಮರಾ ಖರೀದಿಗೆ 30 ಲಕ್ಷ ರೂ. ನೀಡಲು ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ನಗರಸಭೆ ಸದಸ್ಯ ಆರ್.ಸಿ. ಜಾವಿದ್ ಮಾತನಾಡಿ, ಶಾಲಾ ಅವಧಿಯಲ್ಲಿ ವಾಹನದಟ್ಟಣೆ ನಿಯಂತ್ರಣ ಮಾಡಬೇಕೆಂದು ಹಲವು ವರ್ಷಗಳ ಬೇಡಿಕೆಯಾಗಿದ್ದರೂ ಇಂದಿಗೂ ಕ್ರಮ ವಹಿಸಿಲ್ಲ. ಹರಪನಹಳ್ಳಿ ರಸ್ತೆ ಹಾಗೂ ಇತರೆ ಶಾಲೆಗಳ ಇರುವಂತಹ ರಸ್ತೆಗಳಲ್ಲಿ ಶಾಲೆ ಆರಂಭ ಮತ್ತು ಬಿಡುವಿನ ವೇಳೆ ಬೃಹತ್ ಗಾತ್ರದ ವಾಹನಗಳ ಸಂಚಾರಕ್ಕೆ ತಡೆ ಹಾಕಬೇಕೆಂದರು.
ಹೆಚ್ಚುವರಿ ಎಸ್‌ಪಿ ರಾಮಗೊಂಡ ಬಸರಗಿ ಮಾತನಾಡಿ, ನಗರದ ರಸ್ತೆ ಸಂಚಾರ ಸುರಕ್ಷತೆಗೆ ಸಿಸಿ ಕ್ಯಾಮರಾ ಅಳವಡಿಸುವ ಅಗತ್ಯವಿದೆ. ಜತೆಗೆ ನಗರದಲ್ಲಿ ಸಂಚರಿಸುವ ವಾಹನದಟ್ಟಣೆ ನಿಯಂತ್ರಿಸಲು ರಸ್ತೆ ಸುರಕ್ಷತಾ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು.
ಡಿವೈಎಸ್ಪಿ ಬಸವರಾಜ್, ಸಿಪಿಐ ದೇವಾನಂದ್, ಸುರೇಶ್ ಸಂಗ್ರಿ, ತಹಸೀಲ್ದಾರ್ ಪೃಥ್ವಿ ಸಾನಿಕಂ, ಪೌರಾಯುಕ್ತ ಬಸವರಾಜ್ ಐಗೂರು, ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಾಪುರ, ಸದಸ್ಯರಾದ ಎಸ್.ಎಂ. ವಸಂತ್, ಜಂಬಣ್ಣ, ವಿಜಯ್ ಕುಮಾರ್, ಬಿ. ಅಲ್ತಾಫ್, ಮನ್ಸೂರ್, ದಾದಾಪೀರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಫೈರೋಜ್, ಅಮರಾವತಿ ಸಿದ್ದಣ್ಣ, ಟೆ.ಜೆ ಮುರುಗೇಶಪ್ಪ ಇತರರಿದ್ದರು.