ಅತಿವೃಷ್ಟಿಗೆ 437.3 ಕಿಮೀ ರಸ್ತೆ ಹಾಳು: ಸಂಚಾರ ದುಸ್ತರ, ಪೂರ್ಣ ಅಭಿವೃದ್ಧಿಗೆ ಬೇಕು 133.98 ಕೋಟಿ ರೂ.

25-klr-1
Published on

ಕೋಲಾರ: ಜಿಲ್ಲಾದ್ಯಂತ ಅತಿವೃಷ್ಟಿಯಿಂದ ನಗರ, ಗ್ರಾಮೀಣ ಭಾಗದಲ್ಲಿ 362.21 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳು ಹಾನಿಗೊಳಗಾಗಿದ್ದು, ಸಾರ್ವಜನಿಕರಿಗೆ ಸಂಚಾರ ದುಸ್ತರವಾಗಿ ಪರಿಣಮಿಸಿದೆ.

ಕೋಲಾರದಲ್ಲಿ 19.32 ಕಿಮೀ ರಾಜ್ಯ ಹೆದ್ದಾರಿ 252.23 ಜಿಲ್ಲಾ ಮುಖ್ಯರಸ್ತೆ, ಬಂಗಾರಪೇಟೆ, ಕೆಜಿಎಫ್‌ನಲ್ಲಿ ಒಟ್ಟು 77.05 ಕಿಮೀ ರಾಜ್ಯ ಹೆದ್ದಾರಿ, 200.63 ಜಿಲ್ಲಾ ಮುಖ್ಯರಸ್ತೆ, ಮಾಲೂರಿನಲ್ಲಿ 65.55 ಕಿಮೀ ರಾಜ್ಯ ಹೆದ್ದಾರಿ, 94.17 ಕಿಮೀ ಜಿಲ್ಲಾ ಮುಖ್ಯರಸ್ತೆ, ಮುಳಬಾಗಿಲಿನಲ್ಲಿ 354.02 ಕಿಮೀ ಜಿಲ್ಲಾ ಮುಖ್ಯರಸ್ತೆ, ಶ್ರೀನಿವಾಸಪುರದಲ್ಲಿ 17.60 ಕಿಮೀ ರಾಜ್ಯ ಹೆದ್ದಾರಿ ಹಾಗೂ 321.70 ಕಿಮೀ ಜಿಲ್ಲಾ ಮುಖ್ಯ ರಸ್ತೆ ಸೇರಿ ಒಟ್ಟು 305 ಕಿಮೀ ರಾಜ್ಯ ಹೆದ್ದಾರಿ, 1223.75 ಕಿಮೀ ಜಿಲ್ಲಾ ಮುಖ್ಯ ರಸ್ತೆಯನ್ನು ಹೊಂದಿವೆ.

ಅತಿವೃಷ್ಟಿಗೆ ಹಾನಿ: ಜಿಲ್ಲಾ ಕೇಂದ್ರ ಸ್ಥಾನ ಕೋಲಾರ ನಗರ ಸೇರಿ ಜಿಲ್ಲಾದ್ಯಂತ ರಸ್ತೆಗಳು ಅಧ್ವಾನಗೊಂಡು ಅನೇಕ ವರ್ಷಗಳೇ ಕಳೆದಿವೆೆ. ತೀರಾ ಹಳ್ಳಬಿದ್ದ ಕಡೆ ತೇಪೆ ಹಾಕುವ ಕೆಲಸ ನಡೆದುಕೊಂಡು ಬಂದಿತ್ತು. ಅನೇಕ ಕಡೆ ಪಿಡಬ್ಲ್ಯುಡಿಗೆ ಒಳಪಟ್ಟ ರಾಜ್ಯಹೆದ್ದಾರಿ ಅಥವಾ ಜಿಲ್ಲಾ ಮುಖ್ಯರಸ್ತೆಗಳ ನಿರ್ವಹಣೆ ಇಲ್ಲದೆ ಸಂಚಾರ ದುಸ್ತರವಾಗಿತ್ತು. ಹತ್ತು ದಿನಗಳ ಹಿಂದೆ ಬಿದ್ದ ವರ್ಷಧಾರೆಗೆ ಬಹುತೇಕ ಎಲ್ಲ ರಸ್ತೆಯನ್ನು ಮಳೆ ನುಂಗಿ ಹಾಕಿದೆ. ಕೆಲ ಭಾಗಗಳಲ್ಲಂತೂ ರಸ್ತೆಗಳಲ್ಲಿ ಎರಡು ಅಡಿಗೂ ಹೆಚ್ಚು ಹಳ್ಳ ಬಿದ್ದು ಮಿನಿ ಕೆರೆಯಂತಾಗಿ ಸಂಚಾರಕ್ಕೆ ತೀರಾ ಅನನುಕೂಲವಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ಅತಿವೃಷ್ಟಿಗೆ 93. 28 ಕಿಮೀ ರಾಜ್ಯ ಹೆದ್ದಾರಿ ಹಾಗೂ 344.02 ಕಿಮೀ ಜಿಲ್ಲಾ ಮುಖ್ಯರಸ್ತೆ ಸೇರಿ ಒಟ್ಟು 437.3 ಕಿಮೀ ರಸ್ತೆ ಹಾಳಾಗಿರುವುದಾಗಿ ಪಿಡಬ್ಲ್ಯುಡಿ ಇಲಾಖೆ ಲೆಕ್ಕ ಹಾಕಿದೆ. ಈ ಪೈಕಿ ಬಂಗಾರಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಹಾನಿಗೀಡಾದರೆ ಕೋಲಾರ ತಾಲೂಕಿನಲ್ಲಿ ಕಡಿಮೆ ಪ್ರಮಾಣದ ಹಾನಿ ಸಂಭವಿಸಿದೆ.

ಪ್ರಮುಖವಾಗಿ ಕೋಲಾರ ತಾಲೂಕಿನಲ್ಲಿ ಕೋಲಾರ-ಟೇಕಲ್ ರಸ್ತೆಯಲ್ಲಿ ಸಹ್ಯಾದ್ರಿ ಕಾಲೇಜು ಬಳಿ, ಮುದುವತ್ತಿ, ಮುದುವಾಡಿ ಕೆರೆ ಕೋಡಿ ಪ್ರದೇಶದಲ್ಲಿ ತೀವ್ರ ಹಾನಿಗೀಡಾಗಿದೆ. ಮಣಿಘಟ್ಟ-ಗಂಗರಸನಹಳ್ಳಿ, ತೊಟ್ಲಿ-ಮುದುವಾಡಿ ರಸ್ತೆ, ಬಂಗಾರಪೇಟೆಯಲ್ಲಿ ಬಲಮಂದೆ-ಕನುಮನಹಳ್ಳಿ ರಸ್ತೆ ತಮಿಳುನಾಡಿನ ಗಡಿಭಾಗ ಕೃಷ್ಣಗಿರಿಯವರೆಗೆ, ಬೂದಿಕೋಟೆ-ಬಲಮುಂದೆ, ಮರಾಠಹೊಸಹಳ್ಳಿ-ಪಾತರಾಮನಗುಳ್ಳ ರಸ್ತೆ, ಮುಳಬಾಗಿಲಿನಿಂದ ಸುವರ್ಣಹಳ್ಳಿ, ಮುಳಬಾಗಿಲು-ಕೆ. ಬೈಪಲ್ಲಿ, ಹರಪನಾಯಕನಹಳ್ಳಿ- ಕೊಲದೇವಿ-ಮಂಡಿಕಲ್ ರಸ್ತೆ ಹಾನಿಗೀಡಾಗಿದೆ.

ಶ್ರೀನಿವಾಸಪುರ-ಕೋಲಾರ ಮುಖ್ಯರಸ್ತೆಯೂ ಅಲ್ಲಲ್ಲಿ ಹಳ್ಳಬಿದ್ದಿದೆ. ಮಾಲೂರು-ಹೊಸೂರು ರಸ್ತೆ, ಚಿಕ್ಕತಿರುಪತಿ ರಸ್ತೆ, ಲಕ್ಕೂರು -ಚಿಕ್ಕತಿರುಪತಿ ಮಾರ್ಗ, ಮಾಲೂರು- ಡಿ.ಎನ್. ದೊಡ್ಡಿ, ಮಾಲೂರು-ಮಾಸ್ತಿ ಹೀಗೆ ಪಿಡಬ್ಲ್ಯುಡಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳು ಮಳೆಗೆ ಹಾನಿಯಾಗಿದೆ. ಭಾರಿ ವಾಹನಗಳಲ್ಲಿ ಕೆಲವು ಮಿತಿ ಮಿರಿದ ಭಾರ ಸಾಗಾಣಿಕೆ ಮಾಡುತ್ತಿರುವುದು ರಸ್ತೆ ಇನ್ನಷ್ಟು ಹಾಳಾಗಲು ಕಾರಣವಾಗಿದೆ.

ಬೇಕು ಕೋಟಿ ಕೋಟಿ: ಅತಿವೃಷ್ಟಿಗೆ ಹಾನಿಗೀಡಾದ ರಸ್ತೆ, ಸರ್ಕಾರಿ ಕಟ್ಟಡ, ಸೇತುವೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಬೇಕಾದಲ್ಲಿ 133.98 ಕೋಟಿ ರೂ. ಅವಶ್ಯಕತೆಯಿದೆ. ತಾತ್ಕಾಲಿಕ ದುರಸ್ತಿಗಾದರೂ 13.17 ಕೋಟಿ ರೂ. ಬೇಕಾಗಬಹುದೆಂದು ಪಿಡಬ್ಲ್ಯುಡಿ ಅಧಿಕಾರಿಗಳು ಅಂದಾಜುಪಟ್ಟಿ ಸಿದ್ಧಪಡಿಸಿದ್ದಾರೆ.

ಕಟ್ಟಡ, ಸೇತುವೆಗೆ ಹಾನಿ :  ಅತಿವೃಷ್ಟಿಯಿಂದ 14 ಸರ್ಕಾರಿ ಕಟ್ಟಡಗಳು ಹಾಗೂ 8 ಸೇತುವೆಗೆ ಹಾನಿಯಾಗಿವೆ. ಈ ಪೈಕಿ ಕೋಲಾರದಲ್ಲಿ 2, ಬಂಗಾರಪೇಟೆ 5, ಕೆಜಿಎಫ್ 1 ಕಟ್ಟಡ ಹಾನಿಗೀಡಾಗಿದ್ದು, ಶ್ರೀನಿವಾಸಪುರದಲ್ಲಿ 2 ರಾಜ್ಯ ಹೆದ್ದಾರಿ ಸೇತುವೆ, 3 ಜಿಲ್ಲಾ ಮುಖ್ಯರಸ್ತೆ ಸೇತುವೆ, ಮುಳಬಾಗಿಲಿನಲ್ಲಿ 1 ಸೇತುವೆ ಹಾನಿಗೀಡಾಗಿದೆ.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಇಲಾಖೆ ರಸ್ತೆ, ಸೇತುವೆ ಹಾಗೂ ಕಟ್ಟಡಗಳ ದುರಸ್ತಿ ಕಾಮಗಾರಿಗೆ ಅವಶ್ಯವಿರುವ ಅನುದಾನದ ಬಗ್ಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಹಣ ಬಿಡುಗಡೆಯಾದ ಕೂಡಲೆ ರಸ್ತೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

ಚಂದ್ರಶೇಖರ್, ಕಾರ್ಯಪಾಲಕ ಅಭಿಯಂತ, ಲೋಕೋಪಯೋಗಿ ಇಲಾಖೆ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net