ಹೊಗೇನ್‌ಕಲ್ ಫಾಲ್ಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಅಧ್ವಾನ

03 HANUR 2
ಹೊಗೇನಕಲ್ ಫಾಲ್ಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿ.
Published on

ಹನೂರು: ತಾಲೂಕಿನ ಗಡಿಯಂಚು ಪಾಲಾರ್ ಮೂಲಕ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್ಗೆ ಸಂಪರ್ಕ ಕಲ್ಪಿಸುವ ರಸ್ತೆಯು ತೀರಾ ಹದಗೆಟ್ಟಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ.

ತಾಲೂಕಿನ ಮಲೆಮಹದೇಶ್ವರ ಬೆಟ್ಟದಿಂದ 50 ಕಿ.ಮೀ ಅಂತರವನ್ನು ಹೊಂದಿರುವ ಹೊಗೇನಕಲ್ ಫಾಲ್ಸ್ಗೆ ಕಾವೇರಿ ವನ್ಯಜೀವಿ ಧಾಮದ ಗೋಪಿನಾಥಂ ಸಫಾರಿ ಕೇಂದ್ರದ ಮೂಲಕ ತೆರಳಬಹುದಾಗಿದೆ. ಇಲ್ಲಿಗೆ ರಾಜ್ಯದ ವಿವಿಧೆಡೆಯಿಂದ ಹಾಗೂ ತಮಿಳುನಾಡಿನಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಜತೆಗೆ ಗೋಪಿನಾಥಂ, ಆಲಂಬಾಡಿ, ಜಂಜುಕಪಟ್ಟಿ ಹಾಗೂ ಈ ಭಾಗದ ಇನ್ನಿತರ ಗ್ರಾಮದ ಜನರು ಸಹ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಈ ಮಾರ್ಗವು ಅರಣ್ಯ ಪ್ರದೇಶದ ಮೂಲಕ ಹಾದು ಹೋಗಿದ್ದು, ಮ.ಬೆಟ್ಟದಿಂದ ಪಾಲಾರ್‌ವರೆಗೆ ರಸ್ತೆ ಉತ್ತಮ ಸ್ಥಿತಿಯಲ್ಲಿದೆ. ಆದರೆ ಇಲ್ಲಿಂದ 23 ಕಿ.ಮೀ. ಅಂತರವನ್ನು ಹೊಂದಿರುವ ಹೊಗೇನಕಲ್ ಫಾಲ್ಸ್ತನಕ ರಸ್ತೆ ಹದಗೆಟ್ಟಿದೆ. ಈ ರಸ್ತೆಯನ್ನು ದಶಕದ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಆದರೆ ರಸ್ತೆಯು ಕಳೆದ 2 ವರ್ಷಗಳಿಂದ ತೀವ್ರ ಹದಗೆಟ್ಟಿರುವುದರಿಂದ ವಾಹನ ಸವಾರರು ಸಂಚರಿಸಲು ಹರ ಸಾಹಸಪಡಬೇಕಿದೆ. ಪ್ರವಾಸಿಗರಲ್ಲಿ ಬೇಸರವನ್ನು ತರಿಸುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿದಿದ್ದರೂ ಯಾವುದೇ ಕ್ರಮ ವಹಿಸದಿರುವುದು ನಿಜಕ್ಕೂ ವಿಪರ್ಯಾಸ.

ರಸ್ತೆ ಅಭಿವೃದ್ಧಿಗೆ ಒತ್ತಾಯ: ಈ ಮಾರ್ಗದಲ್ಲಿ ಹಲವು ಗ್ರಾಮಗಳಿದ್ದರೂ ಸಮರ್ಪಕ ಬಸ್ ಸೌಕರ್ಯ ಇಲ್ಲ. ಇದರಿಂದ ಇಲ್ಲಿನ ಜನರು ಸಂಚರಿಸಲು ಹೆಚ್ಚಾಗಿ ಬೈಕ್ ಹಾಗೂ ಖಾಸಗಿ ವಾಹನದ ಮೂಲಕ ಸಂಚರಿಸುತ್ತಿದ್ದಾರೆ. ಇನ್ನು ಪ್ರವಾಸಿಗರು ಬೈಕ್, ಕಾರು, ಟೆಂಪೋ ಟ್ರಾವೆಲ್ಲರ್ ಹಾಗೂ ಇನ್ನಿತರ ವಾಹನಗಳ ಮೂಲಕ ಆಗಮಿಸುತ್ತಾರೆ. ಆದರೆ ಈ ರಸ್ತೆಯ ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಜಲ್ಲಿಕಲ್ಲುಗಳು ಅಲ್ಲಲ್ಲಿ ಹರಡಿವೆ. ಕೆಲವು ಕಡೆಗಳಲ್ಲಿ ಡಾಂಬರು ಕಿತ್ತು ಬಂದಿದ್ದು, ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿದೆ. ಇದರಿಂದ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಸಂಚರಿಸಲು ಹರಸಾಹಸ ಪಡಬೇಕಿದೆ. ಗುಂಡಿಗಳನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ಸಹ ಜರುಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net