

ಕೋಲಾರ: ಸರ್ಕಾರಿ ಗೋಮಾಳ ಜಮೀನನ್ನು ಕಾನ್ಫಿಡೆಂಟ್ ಮಾಲೀಕರಿಗೆ ಮಂಜೂರು ಮಾಡಲು ಮುಂದಾಗಿರುವ ತಾಲೂಕು ಆಡಳಿತದ ರೈತ ವಿರೋಧಿ ಧೋರಣೆ ಖಂಡಿಸಿ ನ.8ರಂದು ಕೋಳಿ, ಮಡಕೆಗಳ ಸಮೇತ, ಹಂಚಾಳ ಗೇಟ್ನಲ್ಲಿ ರಸ್ತೆ ಬಂದ್ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.
ನಗರದ ಕುವೆಂಪು ಉದ್ಯಾನವನದಲ್ಲಿ ಬುಧವಾರ ರೈತ ಸಂದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡು ಭೂಮಿ ಕಬಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ವಿರುದ್ಧ ಜನಾಂದೋಲನ ಆಗದಿದ್ದರೆ ಭೂಮಿ ಮಾಯವಾಗುವುದು ಖಚಿತ ಎಂದರು.
ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ತಿಗಳನ್ನು ರೈತರೆ ಉಳಿಸಲು ಮುಂದಾಗಬೇಕು. ಇಲ್ಲದಿದ್ದರೆ ಭೂಗಳ್ಳರು ಜಿಲ್ಲೆಗೆ ಮತ್ತಷ್ಟು ಮಂದಿ ಪ್ರವೇಶ ಮಾಡುತ್ತಾರೆ ಎಂದು ಎಚ್ಚರಿಸಿದರು.
ಶ್ರೀಮಂತರ ಮೋಜು ಮಸ್ತಿಗಾಗಿ ನಿಮಾರ್ಣಗೊಂಡಿರುವ ಕಾನ್ಫಿಡೆಂಟ್ ಗ್ರೂಪ್ ಮಾಲೀಕತ್ವದ ಗಾಲ್ಫ್ ಸಂಸ್ಥೆಗೆ 7 ಎಕರೆ ಸರ್ಕಾರಿ ಬಿ ಖರಾಬು ಜಮೀನನ್ನು ಮಂಜೂರು ಮಾಡಲು ಜನಪ್ರತಿನಿಧಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ಮೇಲೆ ಒತ್ತಡ ಹಾಕಿ, ಅಧಿಕಾರಿಗಳಿಗೆ ಮಾನಸಿಕ ಹಿಂಸೆ ನೀಡಿ, ಬೇರೆ ಕಡೆ ವರ್ಗಾವಣೆ ಮಾಡುವ ದಂಧೆ ನಿರಂತರವಾಗಿ ನಡೆಯುತ್ತಿದೆ. ದಿವಂಗತ ಡಿ.ಕೆ.ರವಿ ಅವರ ಅವಧಿಯಿಂದಲೂ ಇದುವರೆಗೂ ನಡೆಯುತ್ತಲೇ ಬರುತ್ತಿದೆ. ಆದರೆ, ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಉಳಿಸುವ ಪ್ರಯತ್ನ ಪ್ರಗತಿಪರ ಸಂಘಟನೆಗಳಿಂದ ಆಗಬೇಕಾಗಿದೆ ಎಂದರು.
ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ ಗೌಡ ಮಾತನಾಡಿ, ಜಿಲ್ಲಾದ್ಯಂತ ಸಾವಿರಾರು ಎಕರೆ ಕೆರೆ, ಗೋಮಾಳ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರಭಾವಿ ರಾಜಕಾರಣಿಗಳು, ಅವರ ಹಿಂಬಾಲಕರ ವಿರುದ್ಧ ದಾಖಲೆಗಳ ಸಮೇತ ಲೋಕಾಯುಕ್ತ ಮತ್ತು ಭೂಕಬಳಿಕೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಈಕಂಬಳ್ಳಿ ಮಂಜುನಾಥ್, ಅಪ್ಪೋಜಿರಾವ್, ಮುನಿಕೃಷ್ಣ, ಚಾಂದ್ ಪಾಷ, ಕಿರಣ್, ತಿಮ್ಮಣ್ಣ, ಸುಪ್ರೀಂ ಚಲ, ಫಾರೂಖ್ ಪಾಷಾ, ವಿಜಯ ಪಾಲ್, ವಿಶ್ವ, ಜುಬೇರ್ ಪಾಷಾ, ಕೃಷ್ಣಪ್ಪ, ಶೈಲಜಾ, ಗೌರಮ್ಮ ಮತ್ತಿತರರು ಇದ್ದರು.