

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ದೊಡ್ಡ ಸುದ್ದಿ ಮಾಡುತ್ತಿರುವಾಗಲೇ ಬೆಂಗಳೂರಿನ ರಸ್ತೆಗಳ ವೈಟ್ ಟಾಪಿಂಗ್, ರಸ್ತೆ ದುರವಸ್ತೆ, ಒಳಚರಂಡಿ ವ್ಯವಸ್ಥೆ, ಸಂಚಾರ ದಟ್ಟಣ, ದೂಳು ತುಂಬಿದ ವಾತಾವರಣ(Road chaos; Discontent over slow white-topping work) ಕುರಿತು ಮೇಲ್ಮನೆಯಲ್ಲಿ ವಿಷಯ ಪ್ರಸ್ತಾಪವಾಯಿತು.
ಬಿಜೆಪಿಯ ಕೆ.ಎಸ್.ನವೀನ್ ವಿಷಯ ಪ್ರಸ್ತಾಪ ಮಾಡಿ ಸರ್ಕಾರವನ್ನು ತರಾಟೆ ತೆಗೆದುಕೊಂಡರು.
ಬೆಂಗಳೂರು ವೈದ್ಯಕೀಯ ಆಸ್ಪತ್ರೆ ಮುಂಭಾಗದ ತೆರೆದ ಒಳಚರಂಡಿ ಸಮಸ್ಯೆಯನ್ನು ಉದಾಹರಿಸಿದ ಅವರು, ರಸ್ತೆಯಲ್ಲಿಯೇ ಮಣ್ಣಿನ ರಾಶಿ, ಅಲ್ಲಲ್ಲಿ ಬಿದ್ದಿರುವ ಬೃಹತ್ ಕೊಳವೆಗಳು, ರಸ್ತೆ ಮಧ್ಯೆಯೇ ಬ್ಯಾರಿಕೇಡ್ ಅಳವಡಿಕೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ವಾಹನಗಳ ಆಮೆ ವೇಗದಲ್ಲಿ ಸಂಚರಿಸುತ್ತಿವೆ.
ಈ ಭಾಗದಲ್ಲಿ ವ್ಯಾಪಾರಿಗಳು ಮುಖಗವುಸು ಧರಿಸಿ ವ್ಯಾಪಾರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಗಮನ ಸೆಳೆದರು.
ನಗರದ ಹೃದಯ ಭಾಗದಲ್ಲಿರುವ ಜೆ.ಸಿ.ರಸ್ತೆಯ ಚಿತ್ರಣ ಬಿಚ್ಚಿಟ್ಟರಲ್ಲದೆ, ಈ ರಸ್ತೆಯಲ್ಲಿ ನಾಲಾ ಜಂಕ್ಷನ್‌ನಿಂದ ಪುರಭವನ ಜಂಕ್ಷನ್ ವರೆಗೆ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಕಳೆದ ನವೆಂಬರ್‌ನಿಂದ ಪ್ರಾರಂಭವಾದ ಈ ಕಾಮಗಾರಿ ಕುಂಟುತ್ತ ಸಾಗಿದೆ. ಸದ್ಯ ಒಳಚರಂಡಿ ಕೊಳವೆ ಹಾಗೂ ಆಪ್ಟಿಕಲ್ ೈಬರ್ ಕೇಬಲ್ ಅಳವಡಿಕೆ ಕಾಮಗಾರಿ ನಡೆಯುತ್ತಿವೆ. ಈ ಕಾರಣಕ್ಕೆ ಹಲವೆಡೆ ರಸ್ತೆ ಅಗೆದು ಹಾಗೇ ಬಿಡಲಾಗಿದೆ. ಈ ರಸ್ತೆಯಲ್ಲಿ ಭಾಗಶಃ ರಸ್ತೆ ಸಂಚಾರ ನಿರ್ಬಂಧ ವಿಧಿಸಿರುವುದರಿಂದ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚುತ್ತಲೇ ಇದೆ. ಇನ್ನೊಂದೆಡೆ ಮಣ್ಣು ನಡು ರಸ್ತೆವರೆಗೂ ವ್ಯಾಪಿಸಿಕೊಂಡಿದ್ದು ಇಲ್ಲಿ ಸಂಚರಿಸುವವರಿಗೆ ದೂಳಿನ ಮಜ್ಜನವಾಗುತ್ತದೆ. ಪಾದಚಾರಿ ಮಾರ್ಗ ಕಣ್ಮರೆಯಾಗಿದೆ. ಅಗೆದ ಮಣ್ಣನ್ನು ಪಾದಚಾರಿ ಮಾರ್ಗದಲ್ಲೇ ಹಾಕಲಾಗಿದೆ. ಕೊಳವೆಗಳನ್ನೂ ಇರಿಸಲಾಗಿದೆ. ಹಾಗಾಗಿ ಪಾದಚಾರಿಗಳು ಮಣ್ಣಿನ ರಾಶಿಯ ನಡುವೆಯೇ ಸಾಹಸ ಮಾಡಿ ಸಾಗಬೇಕಿದೆ. ಇದರಿಂದ ಮಕ್ಕಳು ,ಮಹಿಳೆಯರು, ವೃದ್ಧರು ಸಮಸ್ಯೆ ಎದುರಿಸುತ್ತಿದ್ದಾಎ. ಸರ್ಕಾರ ಕೂಡಲೇ ಈ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೆ.ಎಸ್.ನವೀನ್ ಆಗ್ರಹಿಸಿದರು.
ಸಭಾನಾಯಕ ಎನ್.ಎಸ್.ಬೋಸರಾಜು ಈ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಉತ್ತರ ಕೊಡಿಸುವ ಭರವಸೆ ನೀಡಿದರು.