

ಚಂಡೀಗಢ: ವೇಗವಾಗಿ ಬಂದು ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ನಾಲ್ವರು ಕಾನೂನು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಯು ಪಂಜಾಬ್ನ ಪಟಿಯಾಲದ ಭಡ್ಸನ್ ರಸ್ತೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಮೃತರನ್ನು ರೀತ್ ಕೌರ್ ವಿರ್ಕ್, ಇಶಾನ್ ಸೂದ್, ರಿಷಬ್ ಸೆಹಗಲ್ ಮತ್ತು ಕುಶಾಗ್ರ ಯಾದವ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಪಟಿಯಾಲದ ರಾಜೀವ್ ಗಾಂಧಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಲಾ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಇದರಲ್ಲಿ ನಾಲ್ವರು ಅಂತಿಮ ವರ್ಷದ ವಿದ್ಯಾರ್ಥಿಗಳು, ಉಳಿದ ಇಬ್ಬರು ಮೂರನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಆಗಿದ್ದಾರೆ. ರೀತ್ ಚಂಡೀಗಢ ಮೂಲದ ನಿವೃತ್ತ ಮೇಜರ್ ಒಬ್ಬರ ಮಗಳಾಗಿದ್ದಾರೆ. ಇಶಾನ್ ಚಂಡೀಗಢದ ಬಿಜೆಪಿ ನಾಯಕ ಮತ್ತು ಮಾಜಿ ಮೇಯರ್ ಅರುಣ್ ಸೂದ್ ಅವರ ಸೋದರಳಿಯ ಆಗಿದ್ದಾರೆ ಎಂದು ಹೇಳಲಾಗಿದೆ.
ಫೋರ್ಡ್ ಎಂಡೀವರ್ ಕಾರಿನಲ್ಲಿ ಒಟ್ಟು 6 ಜನರು ಪ್ರಯಾಣ ಮಾಡುತ್ತಿದ್ದರು. ಬೆಳಗಿನ ಜಾವ ಎರಡು ಗಂಟೆಗೆ, ಪಟಿಯಾಲ-ಭಡ್ಸನ್ ರಸ್ತೆಯಲ್ಲಿ ವಿಶ್ವವಿದ್ಯಾನಿಲಯದಿಂದ ಕೇವಲ 50 ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದಾಗ ಇಪ್ಪತ್ತರ ಹರೆಯದ ನಾಲ್ವರು ವಿದ್ಯಾರ್ಥಿಗಳು ಔತಣಕೂಟದಿಂದ ಹಿಂತಿರುಗುತ್ತಿದ್ದರು ಎಂದು ಪೊಲೀಸರು ವರದಿ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪಂಜಾಬ್ ಆರೋಗ್ಯ ಸಚಿವ ಡಾ. ಬಲ್ಬೀರ್ ಸಿಂಗ್ ವಿದ್ಯಾರ್ಥಿಗಳು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಂತೆ ಹೇಳಿದರು. ಇನ್ನು ನಾಲ್ವರು ವಿದ್ಯಾರ್ಥಿಗಳ ಮೃತದೇಹಗಳನ್ನು ಪೊಲೀಸರ ಸಮ್ಮುಖದಲ್ಲಿ ಅವರ ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಹೇಳಲಾಗಿದೆ.