

ಶಿವಮೊಗ್ಗ: ಡಿಸಿಸಿ (ಜಿಲ್ಲಾ ಸಹಕಾರ ಕೇಂದ್ರ) ಬ್ಯಾಂಕ್‌ಗೆ ಮತ್ತೆ ಆರ್.ಎಂ.ಮಂಜುನಾಥ ಗೌಡರ ಪ್ರವೇಶವಾಗಿದೆ. ಬ್ಯಾಂಕ್ ಆಡಳಿತ ಮಂಡಳಿಯ ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆರ್‌ಎಂಎಂ ಅವರನ್ನು ಶುಕ್ರವಾರ ಸರ್ಕಾರ ನೇಮಕ ಮಾಡಿದೆ.
ಇದುವರೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕೆ.ಪಿ.ದುಗ್ಗಪ್ಪ ಗೌಡ ರಾಜೀನಾಮೆಯಿಂದ ಆ ಸ್ಥಾನ ತೆರವಾಗಿತ್ತು. ದುಗ್ಗಪ್ಪಗೌಡರನ್ನು ಈಗ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಸರ್ಕಾರ ನೇಮಕ ಮಾಡಿದೆ. ಇದರೊಂದಿಗೆ ಮತ್ತೆ ಡಿಸಿಸಿ ಬ್ಯಾಂಕ್‌ನಲ್ಲಿ ಮಂಜುನಾಥ ಗೌಡ ಹಿಡಿತ ಸಾಧಿಸಿದಂತಾಗಿದೆ. ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದ್ದ ಹಗರಣವೊಂದಕ್ಕೆ ಸಂಬಂಧಿಸಿದಂತೆ ಆರ್.ಎಂ.ಮಂಜುನಾಥ ಗೌಡ ಅವರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಅವರು ಸುದೀರ್ಘ ಕಾನೂನು ಹೋರಾಟ ನಡೆಸಿ ಮತ್ತೆ ಬ್ಯಾಂಕ್ ನಿರ್ದೇಶಕ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.
ಮುಂದಿನ ವರ್ಷ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದ್ದು ಈಗ ವೇದಿಕೆ ಸಿದ್ಧವಾಗುತ್ತಿದೆ. ಎಂ.ಬಿ.ಚನ್ನವೀರಪ್ಪ ವಿರುದ್ಧ ಅವಿಶ್ವಾಸ ಮಂಡನೆಯಾಗಿ ಎಚ್.ಎಲ್.ಷಡಕ್ಷರಿ ಅಧ್ಯಕ್ಷರಾದ ಬಳಿಕ ಬ್ಯಾಂಕ್‌ನಲ್ಲಿ ಕ್ಷಿಪ್ರಕ್ರಾಂತಿ ರೂಪದಲ್ಲಿ ಬೆಳವಣಿಗೆಗಳು ನಡೆದಿವೆ.