ಹಿಂದಿ ‘ಬಿಗ್‌ಬಾಸ್’ ಸೇರಿ ಕೆಲ ಧಾರಾವಾಹಿಗಳಲ್ಲಿ ನಟಿಸಿರುವ ಪ್ರಿಯಾಂಕಾ ಚಹಾರ್ ಚೌದ್ರಿ ಹಂತ ಹಂತವಾಗಿ ಜನಪ್ರಿಯಗೊಳ್ಳುತ್ತಿದ್ದಾರೆ. ಈಗಾಗಲೇ ಕೆಲ ರಿಯಾಲಿಟಿ ಶೋ, ಅಲ್ಬಂ ಸಾಂಗ್ ಮೂಲಕ ಗುರುತಿಸಿಕೊಂಡಿರುವ ಅವರು ಇದೀಗ ಹಿಂದಿಯ ಪ್ರಸಿದ್ಧ ‘ನಾಗಿನ್ 7’ ಸರಣಿಯಲ್ಲಿ ಮೊದಲ ಬಾರಿಗೆ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಶೂಟಿಂಗ್ ಪೂರ್ಣಗೊಳಿಸಿರುವ ಅವರು ಮಿಂಚಲು ಸಿದ್ಧರಾಗಿದ್ದಾರೆ. ಈ ಮಧ್ಯೆ, ಮೊದಲ ಲೀಡ್ ಧಾರಾವಾಹಿಯ ಶೂಟಿಂಗ್ ಅನುಭವದ ಬಗ್ಗೆ ಹಂಚಿಕೊಂಡಿದ್ದು, ಈ ಪ್ರಾಜೆಕ್ಟ್‌ಗಾಗಿ ನಿರಂತರ 36 ಗಂಟೆಗಳ ಕಾಲ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ‘‘ಬಿಗ್‌ಬಾಸ್’ ಮನೆಯಲ್ಲಿರುವಾಗಲೇ ನನಗೆ ‘ನಾಗಿನ್’ ಅವಕಾಶ ಬಂದಿತ್ತು. ಅದರಲ್ಲಿ ನಾನು ತುಂಬಾ ವಿಭಿನ್ನವಾಗಿ ಕಾಣಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿಯೇ ಸಹಿ ಮಾಡಿದೆ. ಅದೇ ಸಮಯದಲ್ಲಿ ‘ಬ್ಯಾಟಲ್‌ಗ್ರೌಂಡ್’ ರಿಯಾಲಿಟಿ ಶೋ ಕೂಡ ಒಪ್ಪಿಕೊಂಡೆ. ರಾತ್ರಿ 10ರಿಂದ ಬೆಳಗ್ಗೆ 7ರವರೆಗೆ ‘ಬ್ಯಾಟಲ್‌ಗ್ರೌಂಡ್’ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಅದು ಮುಗಿದ ಬಳಿಕ ಮನೆಗೆ ಬಂದು ಮತ್ತೆ ಸಿದ್ಧಳಾಗಿ 9 ಗಂಟೆಯೊಳಗಡೆ ‘ನಾಗಿನ್’ ಸೆಟ್‌ನಲ್ಲಿರುತ್ತಿದೆ. ಹೀಗಾಗಿ ಸತತ 36 ಗಂಟೆ ನಾನು ಕೆಲಸ ಮಾಡುತ್ತಿದ್ದೆ. ಆ ಮಧ್ಯೆ 40 ನಿಮಿಷ ಮಾತ್ರ ನಿದ್ದೆ ಮಾಡಲು ಅವಕಾಶ ಸಿಗುತ್ತಿತ್ತು’ ಎಂದು ಪ್ರಿಯಾಂಕಾ ಚೌದ್ರಿ ಬಹಿರಂಗಪಡಿಸಿದ್ದಾರೆ. -ಏಜೆನ್ಸೀಸ್