ಎಡೆಬಿಡದೆ ಸುರಿಯುತ್ತಿರುವ ವರುಣ

hnl
Published on

ಹೊನ್ನಾಳಿ:ಬುಧವಾರ ಮಧ್ಯರಾತ್ರಿಯಿಂದ ಆರಂಭವಾದ ಮಳೆ ಗುರುವಾರ ರಾತ್ರಿವರೆಗೆ ಧಾರಾಕಾರವಾಗಿ ಸುರಿಯುತ್ತಿದೆ. ಇದರಿಂದ ಅವಳಿ ತಾಲೂಕಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಬೆಳಗ್ಗೆ ಶಾಲೆಗೆ ಹೋಗಲು ಮಕ್ಕಳು ಪರದಾಡಿದರೆ, ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರ ಸಂಖ್ಯೆ ಸಂಪೂರ್ಣ ಕ್ಷೀಣವಾಗಿತ್ತು.

ಕಳೆದ ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ತಾಲೂಕಿನ ಅರಬಗಟ್ಟೆ, ಹುಣಸಘಟ್ಟ, ಘಂಟ್ಯಾಪುರ, ಕುಳಗಟ್ಟೆ, ಏಕೆ ಕಾಲನಿ, ಹೊಸಹಳ್ಳಿ, ಕಮ್ಮಾಟಗಟ್ಟೆ ಹಾಗೂ ಕ್ಯಾಸಿನಕೆರೆ ಸೇರಿದಂತೆ ಒಟ್ಟು 14 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಗ್ರಾಮ ಲೆಕ್ಕಾಧಿಕಾರಿ ತಿಳಿಸಿದರು.

ನದಿಗಿಳಿಯಬೇಡಿ: ದಿನೇದಿನೆ ನದಿ ನೀರಿನಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರು, ಜಾನುವಾರುಗಳು ನದಿಗೆ ಇಳಿಯಬಾರದು. ನದಿಪಾತ್ರದ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಸೂಚಿಸಿದರು.

ತುಂಗಭದ್ರಾ ನದಿಪಾತ್ರದ ಬಾಲರಾಜ್‌ಘಾಟ್‌ನಲ್ಲಿ ವಾಸ ಮಾಡುತ್ತಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ತಹಸೀಲ್ದಾರ್ ತಿಳಿಸಿದ್ದು, ಕೆಲವರು ಸ್ಥಳಾಂತರಗೊಂಡಿದ್ದರೆ ಇನ್ನೂ ಕೆಲವರು ಅಲ್ಲಿಯೇ ವಾಸವಾಗಿದ್ದಾರೆ ಎನ್ನಲಾಗಿದೆ.
ನದಿ ನೀರಿನಮಟ್ಟ: ಇಲ್ಲಿನ ತುಂಗಭದ್ರಾ ನದಿ ನೀರಿನಮಟ್ಟ 10 ಮೀಟರ್‌ನಷ್ಟು ಇದೆ. ಆದರೆ, ಶಿವಮೊಗ್ಗದ ತುಂಗಾ ಜಲಾಶಯದಿಂದ 71.750 ಕ್ಯುಸೆಕ್ ನೀರು ಬಿಟ್ಟಿದ್ದು, ಅವಳಿ ತಾಲೂಕಿನಲ್ಲೂ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ನೀರು ತುಂಗಭದ್ರಾ ನದಿ ಸೇರುತ್ತಿರುವುದರಿಂದ ನದಿ ನೀರಿನಮಟ್ಟ ಮತ್ತಷ್ಟು ಏರಿಕೆಯಾಗಿದೆ.
ತಹಸೀಲ್ದಾರ್ ಭೇಟಿ: ತಹಸೀಲ್ದಾರ್ ಪಟ್ಟರಾಜಗೌಡ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಹಾಗೂ ಅಧಿಕಾರಿಗಳ ತಂಡ ನದಿಪಾತ್ರದ ಬಾಲ್‌ರಾಜ್‌ಘಾಟ್ ಹಾಗೂ ಮಳೆಮಾಪನ ಕೇಂದ್ರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net