ರಕ್ಷಾ ಬಂಧನ ಪಾವಿತ್ರ್ಯದ ಆಚರಣೆ

RAKSHABANDHAN
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ದೇವಿ ಅವರು ರಂಭಾಪುರಿ ಜಗದ್ಗುರುಗಳಿಗೆ ರಕ್ಷೆ ಕಟ್ಟಿ ಆಶೀರ್ವಾದ ಪಡೆದರು.
Published on

ಬಾಳೆಹೊನ್ನೂರು: ರಕ್ಷಾ ಬಂಧನ ಹಬ್ಬದ ಆಚರಣೆ ಅತ್ಯಂತ ಪವಿತ್ರವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ರಂಭಾಪುರಿ ಪೀಠದಲ್ಲಿ ಬುಧವಾರ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಹಬ್ಬದ ಆಚರಣೆ ಅಂಗವಾಗಿ ಆಶೀರ್ವಚನ ನೀಡಿದರು.
ಅಣ್ಣ-ತಂಗಿಯ ಸಂಬಂಧದ ಪರಿಕಲ್ಪನೆಯೇ ರಕ್ಷಾ ಬಂಧನವಾಗಿದ್ದು, ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆ ದಿನ ಇದರ ಆಚರಣೆ ಅತ್ಯಂತ ಮಹತ್ವ ಹೊಂದಿದೆ. ತಂಗಿಯು ಅಣ್ಣನಿಗೆ ರಕ್ಷೆ ಕಟ್ಟಿ ಜೀವನವಿಡೀ ರಕ್ಷಿಸುವ ಜವಾಬ್ದಾರಿ ನೀಡುತ್ತಾಳೆ. ಪುರಾಣ ಕಾಲದಲ್ಲಿಯೂ ರಕ್ಷಾ ಬಂಧನ ಆಚರಣೆಯಲ್ಲಿತ್ತು. ಕೃಷ್ಣ-ದ್ರೌಪದಿ, ರಾಣಿ ಕರ್ಣವತಿ-ಹುಮಾಯೂನ್, ಯಮ-ಯಮುನಾ, ಗಣಪತಿ-ಮಾನಸ, ಲಕ್ಷ್ಮೀ-ಬಾಲಿ ಮುಂತಾದವರು ರಕ್ಷೆ ಕಟ್ಟಿಕೊಂಡು ಪವಿತ್ರ ಸಂಬಂಧ ಹೊಂದಿದ್ದರು ಎಂದು ತಿಳಿಸಿದರು.
ರಕ್ಷೆ ಕಟ್ಟಿಸಿಕೊಂಡ ಅಣ್ಣ ತಂಗಿಗೆ ಏನಾದರೂ ಉಡುಗೊರೆ ನೀಡಿ ಸುಮ್ಮನಿದ್ದರೆ ಸಾಲದು. ಅದರ ಹಿಂದಿರುವ ಭಾವನೆಗಳನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ನಡೆದುಕೊಳ್ಳಬೇಕು. ರಕ್ಷಾ ಬಂಧನ ಹಬ್ಬದಿಂದ ಸಹೋದರತ್ವ, ಸ್ನೇಹ, ಬಾಂಧವ್ಯ ಬೆಳೆಯಲಿದೆ. ಕಲಿಯುಗದಲ್ಲಿ ಅಣ್ಣ-ತಂಗಿಯರ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿ. ಇಂದಿನ ಯುವಕರು ಪ್ರತಿ ಎಲ್ಲ ಹೆಣ್ಣುಮಕ್ಕಳನ್ನು ಸಹೋದರಿ ಭಾವನೆಯಿಂದ ನೋಡಿಕೊಂಡು ಅವರ ರಕ್ಷಣೆಗೆ ಕಂಕಣಬದ್ಧರಾಬೇಕು ಎಂದು ತಿಳಿಸಿದರು.
ಈಶ್ವರೀಯ ವಿದ್ಯಾಲಯದ ಬಿ.ಕೆ.ದೇವಿ ಮಾತನಾಡಿ, ಪವಿತ್ರ ರಕ್ಷಾಬಂಧನ ದಿನದಂದು ರಂಭಾಪುರಿ ಜಗದ್ಗುರುಗಳಿಗೆ ರಕ್ಷೆ ಕಟ್ಟಿ ಆಶೀರ್ವಾದ ಹಾಗೂ ಅಭಯ ಪಡೆಯಲಾಗಿದೆ. ಇದೊಂದು ಅಪೂರ್ವ ಸಂಭ್ರಮದ ದಿನ ಎಂದರು.
ಬ್ರಹ್ಮಕುಮಾರೀಸ್ ವಿಶ್ವವಿದ್ಯಾಲಯದ ಚಂದ್ರೇಗೌಡ, ಸಂಜೀವ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net