

ನವದೆಹಲಿ: ದೇಶದ ಸಗಟು ದರ ಆಧಾರಿತ ಹಣದುಬ್ಬರ ಸೂಚ್ಯಂಕ ಡಬ್ಲ್ಯುಪಿಐ ಫೆಬ್ರವರಿ ತಿಂಗಳಲ್ಲಿ ಶೇ.13.11 ಇದ್ದದ್ದು, ಮಾರ್ಚ್ನಲ್ಲಿ ಶೇಕಡ 14.55ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ದತ್ತಾಂಶ ಹೇಳಿದೆ. ಇದು ನಾಲ್ಕು ತಿಂಗಳ ಅವಧಿಯ ಗರಿಷ್ಠ ಮಟ್ಟವಾಗಿದೆ. ರಷ್ಯಾ- ಯೂಕ್ರೇನ್ ಯುದ್ಧದ ಪರಿಣಾಮ ಜಾಗತಿಕ ಪೂರೈಕೆ ಸರಪಳಿ ಮೇಲೆ ಅಡ್ಡಿ ಉಂಟಾಗಿದ್ದು, ಕಚ್ಚಾ ತೈಲದರ ಮತ್ತು ಇತರೆ ಸರಕುಗಳ ದರ ಏರಿದ್ದು ಇದಕ್ಕೆ ಕಾರಣ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಡಬ್ಲ್ಯುಪಿಐ ಶೇಕಡ 7.89 ಇತ್ತು. 2021ರ ಏಪ್ರಿಲ್ ತಿಂಗಳ ನಂತರದಲ್ಲಿ ಸತತ 12ನೇ ತಿಂಗಳು ಡಬ್ಲ್ಯುಪಿಐ ಎರಡಂಕಿಯಲ್ಲೇ ಮುಂದುವರಿದಿದೆ. 2021ರ ನವೆಂಬರ್ನಲ್ಲಿ ಗರಿಷ್ಠ 14.87% ತಲುಪಿತ್ತು. ಡಬ್ಲ್ಯುಪಿಐ ಏರಿಕೆಗೆ ಕಚ್ಚಾ ತೈಲ ದರವೇ ಬಹುದೊಡ್ಡ ಕೊಡುಗೆ ನೀಡಿದೆ. ಆಹಾರ ಉತ್ಪನ್ನಗಳು, ತರಕಾರಿ, ಬೇಳೆ ಕಾಳು, ಗೋಧಿ, ಭತ್ತ, ಆಲೂಗಡ್ಡೆ, ಹಾಲು, ಮೊಟ್ಟೆ, ಮಾಂಸ, ಮೀನುಗಳ ದರಗಳಲ್ಲಿ ಸಾಧಾರಣ ಪ್ರಮಾಣದ ಹೆಚ್ಚಳವಾಗಿದೆ. ಆಹಾರ ಉತ್ಪನ್ನಗಳ ಹಣದುಬ್ಬರ ಪ್ರಮಾಣ ಫೆಬ್ರವರಿಯಲ್ಲಿ ಶೇಕಡ 8.19 ಇದ್ದದ್ದು, ಮಾರ್ಚ್ನಲ್ಲಿ ಶೇಕಡ 8.06ಕ್ಕೆ ಇಳಿದಿದೆ. ಇದೇ ರೀತಿ, ತರಕಾರಿ ಹಣದುಬ್ಬರ ಶೇಕಡ 26.93ರಿಂದ ಶೇಕಡ 19.88ಕ್ಕೆ ಇಳಿಕೆಯಾಗಿದೆ. ಉತ್ಪಾದಿತ ವಸ್ತುಗಳ ಹಣದುಬ್ಬರ ಪ್ರಮಾಣ ಶೇಕಡ 9.84ರಿಂದ ಶೇಕಡ 10.71ಕ್ಕೆ ಹೆಚ್ಚಳವಾಗಿದೆ. ಇಂಧನ ಮತ್ತು ವಿದ್ಯುತ್ ಹಣದುಬ್ಬರ ಪ್ರಮಾಣದ ಶೇಕಡ 31.50 ಯಿಂದ ಶೇಕಡ 34.52ಕ್ಕೇರಿದೆ. ಕಚ್ಚಾ ತೈಲದ ಹಣದುಬ್ಬರ ಶೇಕಡ 55.17 ರಿಂದ ಶೇಕಡ 83.56ಕ್ಕೆ ಏರಿದೆ.
ಚಿಲ್ಲರೆ ಹಣದುಬ್ಬರ ಶೇಕಡ 6.95: ದೇಶದಲ್ಲಿ ಗ್ರಾಹಕ ದರ ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣ ಮಾರ್ಚ್ನಲ್ಲಿ ಶೇಕಡ 6.95ಕ್ಕೆ ತಲುಪಿದೆ. ಆಹಾರ ಉತ್ಪನ್ನಗಳ ದರ ಏರಿಕೆ ಇದಕ್ಕೆ ಪ್ರಮುಖ ಕಾರಣ. ಫೆಬ್ರವರಿ ತಿಂಗಳಲ್ಲಿ ಇದು ಶೇಕಡ 6.07 ಇತ್ತು. ಆಹಾರದ ಹಣದುಬ್ಬರ ಪ್ರಮಾಣ ಫೆಬ್ರವರಿಯಲ್ಲಿ ಶೇಕಡ 5.85 ಇದ್ದದ್ದು ಮಾರ್ಚ್ನಲ್ಲಿ ಶೇಕಡ 7.68 ತಲುಪಿದೆ. ಸತತ ಮೂರನೇ ತಿಂಗಳು ಇದು ಶೇಕಡ 6ರ ಮೇಲಿದೆ. ಚಿಲ್ಲರೆ ಹಣದುಬ್ಬರದ ವಿಚಾರದಲ್ಲಿ ಶೇಕಡ 6 ಎಂಬುದು ಭಾರತದ ‘ಕಂಫರ್ಟ್ ಝೋನ್’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಭಾರತ ಸರ್ಕಾರ, ಹಣದುಬ್ಬರ ಪ್ರಮಾಣವನ್ನು ಶೇಕಡ 2 ಮತ್ತು ಶೇಕಡ 6ರ ನಡುವೆ ನಿರ್ವಹಿಸಬೇಕು ಎಂದು ಆರ್ಬಿಐಗೆ ಸೂಚಿಸಿತ್ತು.
ಎಂಸಿಎಲ್ಆರ್ ಏರಿಸಿದ ಎಸ್ಬಿಐ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಸಾಲದ ಮೇಲಿನ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್ಆರ್) ಅನ್ನು 10 ಮೂಲಾಂಶ (0.10%) ದಷ್ಟು ಏರಿಸಿದೆ. ಇದರಿಂದಾಗಿ ಸಾಲದ ಮೇಲಿನ ಎಂಸಿಎಲ್ಆರ್ ಶೇಕಡ 6.75ಕ್ಕೆ ಏರಿದೆ. ಇದು ಒಂದು, ಮೂರು (6.75%) ಮತ್ತು ಆರು (7.05%) ತಿಂಗಳಿಗೆ ಅನ್ವಯ. ಇದೆ ರೀತಿ ಒಂದು ವರ್ಷದ ಲೆಕ್ಕಾಚಾರದಲ್ಲಿ ಶೇಕಡ 7.10, ಎರಡು ವರ್ಷ ಶೇಕಡ 7.30 ಮತ್ತು ಮೂರು ವರ್ಷ ಶೇಕಡ 7.4.
ಚೀನಾ ಆರ್ಥಿಕ ಬೆಳವಣಿಗೆ 4.8%: ಚೀನಾದ ಆರ್ಥಿಕ ಬೆಳವಣಿಗೆ 2022ರ ಜನವರಿಯಿಂದ ಮಾರ್ಚ್ ತನಕ ಮೊದಲ ಮೂರು ತಿಂಗಳಲ್ಲಿ ಶೇಕಡ 4.8 ದಾಖಲಾಗಿದೆ. ಇಡೀ ವರ್ಷಕ್ಕೆ ಶೇಕಡ 5.5 ಜಿಡಿಪಿ ಬೆಳವಣಿಗೆಯನ್ನು ಚೀನಾ ಸರ್ಕಾರ ಗುರಿಯನ್ನಾಗಿ ಇಟ್ಟುಕೊಂಡಿದೆ. ನ್ಯಾಷನಲ್ ಬ್ಯೂರೋ ಆಫ್ ಸ್ಟಾ್ಯಟಿಸ್ಟಿಕ್ಸ್ ದತ್ತಾಂಶ ಪ್ರಕಾರ, ಕಳೆದ ವರ್ಷ ಕೊನೆಯ ತ್ರೖೆಮಾಸಿಕದಲ್ಲಿ ಜಿಡಿಪಿ ದರ ಶೇಕಡ 4 ಇತ್ತು.
ಚಿನ್ನ, ಬೆಳ್ಳಿ ದರ ಏರಿಕೆ: ದೆಹಲಿಯ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ದರ 10 ಗ್ರಾಮಿಗೆ 542 ರೂಪಾಯಿ ಏರಿ 53,461 ರೂಪಾಯಿ ಆಗಿದೆ. ಬೆಳ್ಳಿಯ ದರ ಕಿಲೋಗೆ -ಠಿ;993 ಹೆಚ್ಚಳವಾಗಿ 69,932 ರೂಪಾಯಿ ಆಗಿದೆ.
ಸೆನ್ಸೆಕ್ಸ್ ಪತನ, 3.39 ಲಕ್ಷ ಕೋಟಿ ರೂ. ನಷ್ಟ: ಏಷ್ಯನ್ ಮಾರುಕಟ್ಟೆಯ ದುರ್ಬಲ ಟ್ರೆಂಡ್ ಕಾರಣ ಭಾರತದ ಷೇರುಪೇಟೆಯಲ್ಲಿ ಸೋಮವಾರ ಬಿಎಸ್ಇ ಸೆನ್ಸೆಕ್ಸ್ 1,172.19 ಅಂಶ (2.01) ಕುಸಿತ ಕಂಡು 57,166.74 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ. ಹೂಡಿಕೆದಾರರು 3.39 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದರು. ಬಿಎಸ್ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳ 3,39,088.04 ಕೋಟಿ ರೂಪಾಯಿ ನಷ್ಟವಾಗಿ 2,68,63,975.53 ಕೋಟಿ ರೂಪಾಯಿಗೆ ಕುಸಿದಿದೆ. ಇಂಟ್ರಾ ಡೇ ವಹಿವಾಟಿನಲ್ಲಿ ಸೆನ್ಸೆಕ್ಸ್ 1,496.54 ಅಂಶ (2.56%) ಕುಸಿದು ಕನಿಷ್ಠ 56,842.39 ಅಂಶ ತಲುಪಿತ್ತು. ಇದೇ ರೀತಿ, ಎನ್ಎಸ್ಇ ನಿಫ್ಟಿ 302 ಅಂಶ (1.73%) ಕುಸಿದು 17,173.65ರಲ್ಲಿ ವಹಿವಾಟು ಮುಗಿಸಿದೆ.
ಇನ್ಪಿ ಷೇರು ಮೌಲ್ಯ 9% ಕುಸಿತ: ಭಾರತದ ಷೇರುಪೇಟೆಯ ಸೋಮವಾರ ಇಂಟ್ರಾ ಡೇ ವಹಿವಾಟಿನಲ್ಲಿ ಇನ್ಪೋಸಿಸ್ ಕಂಪನಿಯ ಷೇರು ಮೌಲ್ಯ ಶೇಕಡ 9 ಕುಸಿತ ದಾಖಲಿಸಿತು. ಪರಿಣಾಮ ಷೇರುಪೇಟೆಯ 48,000 ಕೋಟಿ ರೂಪಾಯಿ ಬಂಡವಾಳ ಕರಗಿತು. 2020ರ ಮಾರ್ಚ್ 23ರ ನಂತರದಲ್ಲಿ ಇನ್ಪಿ ಷೇರು ಮೌಲ್ಯ ಇದೇ ಮೊದಲ ಬಾರಿಗೆ ಇಷ್ಟು ಕುಸಿತ ಕಂಡಿದೆ. ಮಾರ್ಚ್ಗೆ ಮುಕ್ತಾಯವಾದ ತ್ರೖೆಮಾಸಿಕದಲ್ಲಿ ಅಂದಾಜಿಗಿಂತ ಕಡಿಮೆ ಮಾರ್ಜಿನ್ ಎಸ್ಟಿಮೇಟ್ ಅನ್ನು ಅನೇಕ ವಿಶ್ಲೇಷಕರು ಬಿಂಬಿಸಿದ್ದೇ ಈ ಕುಸಿತಕ್ಕೆ ಕಾರಣ.