ಡಿಜೆ ಹಳ್ಳಿ ಗಲಭೇಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹಿಸಿದ ದೇವೇಗೌಡ

hd devegowda
Published on

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ(ಮಂಗಳವಾರ) ರಾತ್ರಿ ದಾಂಧಲೆ ನಡೆಸಿದ ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗಲಭೆ ಪ್ರಕರಣ ತೀವ್ರ ಖಂಡನೀಯ. ಸಮಾಜದ ಸ್ವಾಸ್ಥ್ಯ ಕದಡುವುದರಿಂದ ಯಾರಿಗೂ ಉಪಯೋಗವಿಲ್ಲ, ಎಲ್ಲರಿಗೂ ನಷ್ಟ. ಪ್ರಚೋದನೆ ಮಾಡುವುದು ತಪ್ಪು, ಪ್ರಚೋದಿತರಾಗಿ ಸಾರ್ವಜನಿಕರು, ಪೊಲೀಸರು, ಪತ್ರಕರ್ತರು ಹೀಗೆ ಎಲ್ಲರ ಮೇಲೆ ಹಲ್ಲೆ ಮಾಡಿ ಗಲಾಟೆ ಮಾಡುವುದೂ ತಪ್ಪು ಎಂದಿರುವ ದೇವೇಗೌಡರು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಟ್ವೀಟ್​ ಮೂಲಕ ಮನವಿ ಮಾಡಿದ್ದಾರೆ.

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿ ನಿನ್ನೆ ರಾತ್ರಿಯಿಡೀ ಅಕ್ಷರಶಃ ರಂಣರಂಗವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಜಮಾಯಿಸಿದ

ಉದ್ರಿಕ್ತರು ಕಂಡಕಂಡ ವಾಹನಕ್ಕೆಲ್ಲ ಬೆಂಕಿ ಇಟ್ಟರು. ಪುಲಿಕೇಶಿನಗರದ ಶಾಸಕರ ಮನೆಯೂ ಗಲಭೆಕೋರರ ಆಕ್ರೋಶಕ್ಕೆ ಸುಟ್ಟುಕರಕಲಾಯ್ತು. ಹಿಂಸಾಚಾರ ಭುಗಿಲೆದ್ದಿತ್ತು. ಮಾರಕಾಸ್ತ್ರಗಳನ್ನು ಹಿಡಿದಿದ್ದ ಗಲಭೆಕೋರರರು ಅಕ್ಕಪಕ್ಕದ ಮನೆಗಳು, ಕಚೇರಿ, ಪೊಲೀಸ್​ ಠಾಣೆ, ಪತ್ರಕರ್ತರು, ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿ ಅಪಾರ ಪ್ರಮಾಣದ ಹಾನಿ ಉಂಟುಮಾಡಿದ್ದಾರೆ. ಈ ಗಲಭೆಯನ್ನು ಖಂಡಿಸಿರುವ ಮಾಜಿ ಪ್ರಧಾನಿ ದೇವೇಗೌಡರು, ತಪ್ಪಿತಸ್ಥರಿಗೆ ಕಾನೂನಿನ ಬಿಸಿ ಮುಟ್ಟಿಸುವಂತೆ ಆಗ್ರಹಿಸಿದ್ದಾರೆ.

ಇನ್ನು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಕೂಡ ಡಿ.ಜೆ.ಹಳ್ಳಿ ಗಲಭೆಯನ್ನು ಖಂಡಸಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂತಹವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net