

ಮುಂಬೈ: ಜಗತ್ತಿನ ಪ್ರಮುಖ ಕಂಪನಿಗಳಿಂದ ಭಾರಿ ಪ್ರಮಾಣದಲ್ಲಿ ಬಂಡವಾಳ ಆಕರ್ಷಿಸಿರುವ ರಿಲಾಯನ್ಸ್ ಇಂಡಸ್ಟ್ರೀಸ್ ಇದೀಗ ಫ್ಯೂಚರ್ ಗ್ರೂಪ್ ಸ್ವಾಧೀನ ಪ್ರಕ್ರಿಯೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ಈ ಹೊತ್ತಿಗಾಗಲೇ ಈ ವ್ಯವಹಾರ ಮುಗಿದು ಘೋಷಣೆಯಾಗುವ ನಿರೀಕ್ಷೆಯಿತ್ತು. ಇತ್ತೀಚೆಗೆ ನಡೆದ ರಿಲಾಯನ್ಸ್ನ ವಾರ್ಷಿಕ ಮಹಾಸಣೆಯಲ್ಲಿ ಇದರ ಘೋಷಣೆಯಾಗಬೇಕಿತ್ತು. ಆದರೆ, ಕೊಂಚ ವಿಳಂಬವಾಗಿದೆ. ಇ-ಕಾಮರ್ಸ್ ವಹಿವಾಟನ್ನು ವಿಸ್ತರಿಸುವ, ಅಮೆಜಾನ್, ಫ್ಲಿಪ್ಕಾರ್ಟ್ಗೆ ಠಕ್ಕರ್ ಕೊಡಲು ರಿಲಾಯನ್ಸ್ ಸಜ್ಜಾಗಿದೆ.
ಅಂದಾಜು 24,000 ದಿಂದ 27,000 ಕೋಟಿ ರೂ.ಗೆ ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ಗ್ರೂಪ್ನ ರಿಟೇಲ್ ವಹಿವಾಟನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ. ಫ್ಯೂಚರ್ ಗ್ರೂಪ್ನ ಎಲ್ಲ ಸಾಲಗಳನ್ನು ರಿಲಾಯನ್ಸ್ ವಹಿಸಿಕೊಳ್ಳಲಿದೆ.
ಫ್ಯೂಚರ್ ಗ್ರೂಪ್ನಲ್ಲೀಗ ಪ್ಯೂಚರ್ ರಿಟೇಲ್, ಫ್ಯೂಚರ್ ಕನ್ಸೂಮರ್, ಫ್ಯೂಚರ್ ಲೈಫ್ಸ್ಟೈಲ್ ಫ್ಯಾಷನ್ಸ್, ಫ್ಯೂಚರ್ ಸಪ್ಲೈ ಚೈನ್ಸ್ ಹಾಗೂ ಫ್ಯೂಚರ್ ಮಾರ್ಕೆಟ್ ನೆಟ್ವರ್ಕ್ಗಳಿವೆ. ಇವೆಲ್ಲವನ್ನೂ ಫ್ಯೂಚರ್ ಎಂಟರ್ಪ್ರೈಸಸ್ ಲಿಮಿಟೆಡ್ ಹೆಸರಿನಲ್ಲಿ ಒಂದುಗೂಡಿಸಿ ರಿಲಾಯನ್ಸ್ಗೆ ಹಸ್ತಾಂತರಿಸಲಾಗುತ್ತದೆ. ಇದು ಭಾರತದ ಅತಿ ದೊಡ್ಡ ರಿಟೇಲ್ ಜಾಲ ಎನಿಸಿಕೊಳ್ಳಲಿದೆ.
ಈ ಜಾಲದಲ್ಲಿ ಬಿಗ್ ಬಜಾರ್, ಫುಡ್ಹಾಲ್, ಎಫ್ಬಿಬಿ, ನೀಲಗಿರಿಸ್, ಸೆಂಟ್ರಲ್, ಹೆರಿಟೇಜ್ ಫುಡ್ಸ್ ಹಾಗೂ ಬ್ರ್ಯಾಂಡ್ ಫ್ಯಾಕ್ಟರಿ ಮೊದಲಾದ ಬ್ರ್ಯಾಂಡ್ಗಳ ರಿಲಯನ್ಸ್ ಅಧೀನಕ್ಕೆ ಬರಲಿವೆ. ಜತೆಗೆ 1,700 ಮಳಿಗೆಗಳನ್ನು ಹೊಂದಲಿದೆ.