

ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆ ಬಲವರ್ಧನೆಗೆ ಸಂಬಂಧಿಸಿದಂತೆ ರಾಜಸ್ಥಾನ ಸ್ಪೀಕರ್ ಸಿ.ಪಿ.ಜೋಶಿ ಅಧ್ಯಕ್ಷತೆಯ ಸಮಿತಿ ವರದಿ ಸಲ್ಲಿಸಿದೆ. ಅಕ್ಟೋಬರ್ 26ರಿಂದ 28ರವರೆಗೆ ಶಿಮ್ಲಾದಲ್ಲಿ ನಡೆಯಲಿರುವ ಸ್ಪೀಕರ್ಗಳ ಸಮಾವೇಶನದಲ್ಲಿ ಈ ಕುರಿತು ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಶನಿವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ಕಾಯ್ದೆಯಡಿ ಸ್ಪೀಕರ್ಗಳ ಕಾರ್ಯವಿಧಾನದ ನಿಯಮಗಳಲ್ಲಿ ಸ್ಪಷ್ಟತೆ, ಸಂಬಂಧಿತ ವಿಷಯದಲ್ಲಿ ನಿರ್ಣಯಗಳಿಗೆ ಕಾಲಮಿತಿ ನಿಗದಿಪಡಿಸುವುದಕ್ಕೆ ಸ್ಪೀಕರ್ಗಳೇ ಕೋರಿದ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಈ ಸಮಿತಿ ರಚಿಸಲಾಗಿತ್ತು ಎಂದು ವಿವರಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯಿತಿಯಿಂದ ಪಾರ್ಲಿಮೆಂಟ್ವರೆಗಿನ ಸಂಸ್ಥೆಗಳು ಕಾರ್ಯಾಂಗದ ಮೇಲೆ ಪರಿಣಾಮಕಾರಿ ನಿಗಾ ವಹಿಸಬೇಕು. ಶಾಸನಸಭೆಗಳು ಉತ್ತರದಾಯಿತ್ವ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವುದು ಮುಖ್ಯವಾಗಿದೆ ಎಂದರು.
75 ಕಾರ್ಯಕ್ರಮಗಳು: ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ದೇಶಾದ್ಯಂತ 75 ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದ್ದು, ಜನಪ್ರತಿನಿಧಿಗಳ ಸಂಸ್ಥೆಗಳನ್ನು ಸಶಕ್ತಗೊಳಿಸಿ, ಜವಾಬ್ದಾರಿ ಹೆಚ್ಚಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು. ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಈ ವರ್ಷ 100 ವಸಂತಗಳನ್ನು ಪೂರೈಸಲಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 4, 5ರಂದು ಶತಮಾನೋತ್ಸವ ವರ್ಷ ಆಚರಿಸಲಿದ್ದು, ದೇಶದ ಸಾರ್ವಜನಿಕ ಪ್ರತಿನಿಧಿಗಳು ಮತ್ತು ಇತರ ಪ್ರಜಾಪ್ರಭುತ್ವ ರಾಷ್ಟ್ರಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಅಧ್ಯಕ್ಷರುಗಳ ಸಮ್ಮೇಳನದ ಶತಮಾನೋತ್ಸವ ವರ್ಷಾಚರಣೆ ನಿಮಿತ್ತ ಶಿಮ್ಲಾದಲ್ಲಿ ಸಮ್ಮೇಳನ ಸಂಘಟಿಸುತ್ತಿದ್ದು, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರರನ್ನು ಆಹ್ವಾನಿಸುವ ಉದ್ದೇಶವಿದೆ ಎಂದು ಓಂ ಬಿರ್ಲಾ ತಿಳಿಸಿದರು.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಗೌರವಯುತವಾಗಿ ನಡೆದುಕೊಳ್ಳಬೇಕಿತ್ತು. ಆದರೆ, ಸಿದ್ದರಾಮಯ್ಯ ಅವರೇ ನೇತೃತ್ವ ವಹಿಸಿ ಅಧಿವೇಶನ ಬಹಿಷ್ಕಾರ ಮಾಡುವ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ.
| ಬಿ.ಎಸ್. ಯಡಿಯೂರಪ್ಪ ಮಾಜಿ ಸಿಎಂ (ಶಿವಮೊಗ್ಗದಲ್ಲಿ)
ಸಂಸತ್ ಭವನ ಅಕ್ಟೋಬರ್ಗೆ ಪೂರ್ಣ: ನೂತನ ಸಂಸತ್ ಭವನದ ನಿರ್ಮಾಣ ಕಾಮಗಾರಿ 2022ರ ಅಕ್ಟೋಬರ್ಗೆ ಪೂರ್ಣಗೊಳ್ಳಲಿದ್ದು, ಮುಂದಿನ 100 ವರ್ಷಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ಸಂಖ್ಯೆ ವೃದ್ಧಿ ಲಕ್ಷ್ಯದಲ್ಲಿ ಇಟ್ಟುಕೊಂಡು ನಿರ್ವಿುಸಲಾಗುತ್ತಿದ್ದು, ನೂತನ ಭವನವು ದೇಶದ ವೈವಿಧ್ಯತೆ, ಭವ್ಯ ಪರಂಪರೆಯನ್ನು ಬಿಂಬಿಸಲಿದೆ ಎಂದು ಓಂ ಬಿರ್ಲಾ ಹೇಳಿದರು.
ಸಾಮೂಹಿಕ ಹೊಣೆಗಾರಿಕೆ: ಕಲಾಪ ಸಲಹೆ ಸಮಿತಿ ಸಭೆಗಳಲ್ಲಿ ರ್ಚಚಿಸಿದ ನಂತರ ಸದನದಲ್ಲಿ ಮಂಡಿಸಿದ ವಿಧೇಯಕಗಳು ಚರ್ಚೆಯಾಗದೆ ಅನುಮೋದನೆ ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅಲ್ಲದೆ ಶಿಸ್ತು, ಗುಣಮಟ್ಟ, ಚರ್ಚೆಯ ಸತ್ವ ಕುಸಿಯತ್ತಿರುವುದು ಚಿಂತಿತರನ್ನಾಗಿದ್ದು, ಈ ಪರಿಸ್ಥಿತಿಗೆ ಎಲ್ಲರೂ ಹೊಣೆಗಾರರು. ಜನರ ಭಾವನೆಗಳಿಗೆ ಸ್ಪಂದನೆ, ವಿಶ್ವಾಸಾರ್ಹತೆ ಸುಧಾರಿಸಲು, ಕಾರ್ಯಕ್ಷಮತೆ ಹೆಚ್ಚಿಸಲು, ಸಂಸದೀಯ ಪ್ರಜಾಪ್ರಭುತ್ವದ ವಿಶಿಷ್ಟತೆ ಬಲವರ್ಧನೆಗೆ ಅಧ್ಯಕ್ಷರ ಸಮ್ಮೇಳನದಲ್ಲಿ ಸಮಗ್ರ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಓಂ ಬಿರ್ಲಾ ತಿಳಿಸಿದರು. ‘ಒಂದು ದೇಶ ಒಂದು ಚುನಾವಣೆ’ ಕುರಿತು ಖಾಸಗಿ ವಿಧೇಯಕದಡಿ ಸಂಸತ್ತಿನಲ್ಲಿ ಚರ್ಚೆಯಾಗಿದ್ದು, ದೇಶವ್ಯಾಪಿ ಮತ್ತಷ್ಟು ಚರ್ಚೆಯಾಗಿ ಸ್ಪಷ್ಟ ಫಲಿತಾಂಶ ಹೊರಬರಬೇಕಾಗಿದೆ ಎಂದರು.
ಹೊಸದೇನಲ್ಲ: ಪತ್ರಕರ್ತರ ಪ್ರಶ್ನೆಗೆ ವಿಧಾನಸಭಾಧ್ಯಕ್ಷ ಪ್ರತಿಕ್ರಿಯಿಸಿ, ವಿಧಾನಸಭೆಯಲ್ಲಿ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಲೋಕಸಭಾ ಸ್ಪೀಕರ್ ಭಾಷಣೆ ಮಾಡುವುದು ಹೊಸದೇನಲ್ಲ ಎಂದು ಸ್ಪಷ್ಟಪಡಿಸಿದರು. ಗುಜರಾತ್ನಲ್ಲಿ ನಡೆದ ಸ್ಪೀಕರ್ಗಳ ಸಮ್ಮೇಳನದ ನಿರ್ಣಯದ ಭಾಗವಾಗಿ ಸಂಸದೀಯ ಮೌಲ್ಯಗಳ ಸುಧಾರಣೆ ಕುರಿತು ರಾಜ್ಯದಲ್ಲಿ ಚರ್ಚೆ ಆರಂಭಿಸಿದ್ದು, ಈಗಾಗಲೆ ವಿವಿಧ ಹಂತದಲ್ಲಿ ಕಾರ್ಯಕ್ರಮಗಳು ನಡೆದಿವೆ ಎಂದರು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ 2002ರ ಜೂನ್ನಲ್ಲಿ ಲೋಕಸಭಾ ಸ್ಪೀಕರ್ ಆಗಿದ್ದ ಮನೋಹರ ಜೋಶಿ ಭಾಷಣ ಮಾಡಿದ್ದರ ಬಗ್ಗೆ ಮಾಹಿತಿ ನೀಡಿ, ಓಂ ಬಿರ್ಲಾ ಭಾಷಣ ಮಾಡಿದ್ದನ್ನು ಸಮರ್ಥಿಸಿಕೊಂಡರು. ನಂತರ ಸ್ಪೀಕರ್ ಕಚೇರಿ ಮೂಲಗಳಿಂದ ಲಭ್ಯ ಫೋಟೊಗಳ ಪ್ರಕಾರ ಮನೋಹರ ಜೋಶಿ ಅವರು ವಿಧಾನಸಭೆಯಲ್ಲಿ ಪೀಠಾಸೀನ ಅಧಿಕಾರಿಗಳ ಸಮಾವೇಶದಲ್ಲಿ ಭಾಷಣ ಮಾಡಿದ್ದರು.
ಒಂದೇ ವೇದಿಕೆಯಲ್ಲಿ ಲಭ್ಯ: ಸಂಸತ್ತಿನ ಗ್ರಂಥಾಲಯವು ಈ ವರ್ಷ 100 ವರ್ಷಗಳನ್ನು ಪೂರೈಸಲಿದ್ದು, ಅಪರೂಪದ ಪುಸ್ತಕ ಮತ್ತು ದಾಖಲೆಗಳುಳ್ಳ ಸಮೃದ್ಧ ಜ್ಞಾನ ಮತ್ತು ಮಾಹಿತಿಯ ಭಂಡಾರವಾಗಿದೆ. ಹೊಸ ತಂತ್ರಜ್ಞಾನ ಬಳಸಿಕೊಂಡು ಲೋಕಸಭೆ, ರಾಜ್ಯಸಭೆ, ರಾಜ್ಯದ ವಿಧಾನ ಮಂಡಲಗಳ ಕಾರ್ಯಕಲಾಪಗಳ ಕುರಿತು ದತ್ತಾಂಶ ಸಂಗ್ರಹಿಸಿ ಒಂದೇ ವೇದಿಕೆಯಲ್ಲಿ ಶಾಸನಸಭೆ ಸದಸ್ಯರಿಗೆ ಒದಗಿಸಲಾಗುತ್ತದೆ. ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಈ ಮಾಹಿತಿ ಒದಗಿಸಲಿದ್ದು, ಯಾವುದೇ ವ್ಯಕ್ತಿಯ ಹೆಸರು ಅಥವಾ ವಿಷಯದ ಆಧಾರದಲ್ಲಿ ಡಿಜಿಟಲ್ನಲ್ಲಿ ಹುಡುಕಬಹುದು. ಜತೆಗೆ ರಾಜ್ಯಗಳ ಗ್ರಂಥಾಲಯಗಳ ಡಿಜಿಟಿಲೀಕರಣಕ್ಕೆ ತಾಂತ್ರಿಕ ನೆರವು ನೀಡಲಾಗುವುದು ಎಂದು ಓಂ ಬಿರ್ಲಾ ಹೇಳಿದರು. ಪ್ರಜಾಪ್ರಭುತ್ವದಲ್ಲಿ ಮಹಿಳೆಯರು ಮತ್ತು ಯುವಜನರ ಸಕ್ರಿಯ ಭಾಗವಹಿಸುವಿಕೆ ಉತ್ತೇಜನ, ಹೊಸ ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ತರಬೇತಿ, ಸದನಗಳು ಜನರ ನಿರೀಕ್ಷೆ ಮತ್ತು ಆಶಯಕ್ಕೆ ಪೂರಕ ಫಲಿತಾಂಶ ನೀಡಲು ಪ್ರಮಾಣಿತ ಕಾರ್ಯವಿಧಾನ (ಎಸ್ಒಪಿ) ನೀಡಲು ಪ್ರಯತ್ನಿಸುತ್ತೇವೆ ಎಂದರು.