

ಅವರಲ್ಲಿ ಪ್ರವಾದಿ(ಸ) ನಾಲ್ವರನ್ನು ಬಿಟ್ಟು ಉಳಿದವರಿಗೆ ವಿಚ್ಛೇದನ ನೀಡುವಂತೆ ಆಜ್ಞಾಪಿಸಿದರು. ಗೈಲಾನರು ಹ.ಉಮರ್ ಅವರ ಖಿಲಾಪತ್ ಕಾಲದಲ್ಲಿ ತಮ್ಮ ನಾಲ್ವರು ಪತ್ನಿಯರಿಗೂ ತಲಾಕ್ ನೀಡಿ, ತಮ್ಮ ಆಸ್ತಿಯನ್ನೆಲ್ಲ ತಮ್ಮ ಸಹೋದರರಿಗೆ ಹಂಚಿ ಬಿಟ್ಟರು. ಈ ವಿಚಾರ ಹ.ಉಮರ್ಗೆ ಮನವರಿಕೆ ಆದಾಗ, ಅವರು ಗೈಲಾನರನ್ನು ಕರೆದು ಹೀಗೆ ಹೇಳಿದರು: ‘ಪಿಶಾಚಿಯು ಮೇಲೆ ಹೋಗಿ ನಿಮ್ಮ ಸಾವಿನ ವಿಷಯವನ್ನು ಆಲಿಸಿದಂತಿದೆ. ನೀವು ಇನ್ನು ಕೆಲವೇ ದಿನ ಬದುಕಲಿ ದ್ದೀರಿ ಎಂದು ನುಡಿದಿರುವನೆಂದು ಭಾಸವಾಗುತ್ತಿದೆ. ಆದ್ದರಿಂದಲೇ ನೀವು ನಿಮ್ಮ ಪತ್ನಿಯರನ್ನು ವಾರೀಸು ಹಕ್ಕಿನಿಂದ ವಂಚನೆ ಮಾಡಲು ತಲಾಕ್ ನೀಡಿದ್ದೀರಿ. ಸ್ವತ್ತನ್ನು ಸಹೋದರರಲ್ಲಿ ಹಂಚಿದ್ದೀರಿ.
ನಾನು ಅಲ್ಲಾಹನ ಆಣೆ ಹಾಕಿ ಹೇಳುತ್ತೇನೆ, ನೀವು ನಿಮ್ಮ ಪತ್ನಿಯರನ್ನು ಮರಳಿ ಪಡೆಯಬೇಕು ಹಾಗೂ ಆಸ್ತಿಯನ್ನು ಮರಳಿ ಪಡೆಯಬೇಕು. ಇಲ್ಲದಿದ್ದರೆ ಇಸ್ಲಾಂ ಸಾಮ್ರಾಜ್ಯದ ಆಡಳಿತಗಾರನೆಂಬ ನೆಲೆಯಲ್ಲಿ ನಾನು, ನಿಮ್ಮ ಪತ್ನಿಯರನ್ನು ನಿಮ್ಮ ವಾರೀಸುದಾರರಾಗಿ ಮಾಡುವೆನು. ಮತ್ತು ನಿಮ್ಮ ಸಮಾಧಿಗೂ ಕಲ್ಲೆಸೆಯುವಂತೆ ಜನರಿಗೆ ಅಪ್ಪಣೆ ಕೊಡುವೆನು’. (ಶಾಪಕ್ಕೀಡಾದವರಿಗೆ ಕಲ್ಲೆಸೆಯುವ ಶಿಕ್ಷೆಯನ್ನು ಆ ಕಾಲದಲ್ಲಿ ನೀಡಲಾಗುತ್ತಿತ್ತು.) ವಾರೀಸುದಾರರನ್ನು ಅವರ ಹಕ್ಕಿನಿಂದ ವಂಚಿತಗೊಳಿಸುವುದು ಒಂದು ಶಾಪಕ್ಕೆ ಅರ್ಹವಾದ ಕ್ರಿಯೆ ಎಂದು ಈ ಹದೀಸ್(ವಚನ) ಸ್ಪಷ್ಟಪಡಿಸುತ್ತದೆ.
ಒಬ್ಬನು ತನ್ನ ಸಂಪೂರ್ಣ ಸ್ವತ್ತಿನ ಮೂರನೆಯ ಒಂದು ಅಂಶ ಮಾತ್ರ ವಕ್ಪ್ ಮಾಡಬಹುದು. ಅದನ್ನು ದಾನ ಕೊಡಬಹುದು. ಆದರೆ ತನ್ನ ಹತ್ತಿರದ ಸಂಬಂಧಿಕರ ಪೈಕಿ ಯಾರಿಗೆ ವಾರೀಸಿನಲ್ಲಿ ಹಕ್ಕಿಲ್ಲ, ಯಾರು ಸಹಾಯಕ್ಕೆ ಹೆಚ್ಚು ಅರ್ಹರು ಎಂಬುದನ್ನು ನೋಡಿ, ಅವರಿಗೆ ನೀಡುವುದು ಹೆಚ್ಚು ಪುಣ್ಯದಾಯಕ ಎಂದು ಇಸ್ಲಾಂ ಹೇಳುತ್ತದೆ.