ರಿಗ್ ವಾಹನ ನೋಂದಣಿ ದಂಧೆ; ಸಾಲಕ್ಕಾಗಿ ನಕಲಿ ದಾಖಲೆ ಸೃಷ್ಟಿ

borewell
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ಅಸ್ತಿತ್ವದಲ್ಲಿಲ್ಲದ ಬೋರ್​ವೆಲ್ ರಿಗ್​ಗಳನ್ನು ಹೊರರಾಜ್ಯಗಳಿಂದ ವರ್ಗಾಯಿಸುವ ಹೆಸರಲ್ಲಿ ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್​ಟಿಒ) ಮರುನೋಂದಣಿ ದಾಖಲಾತಿ ಸೃಷ್ಟಿಸಿ, ಬ್ಯಾಂಕ್​ಗಳಿಂದ ಕೋಟ್ಯಂತರ ರೂ. ಸಾಲ ಪಡೆದು ವಂಚಿಸುವ ಜಾಲ ಸಕ್ರಿಯವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇದೇ ವೇಳೆ ದಂಡದಿಂದ ತಪ್ಪಿಸಿಕೊಳ್ಳಲು ಅನಧಿಕೃತವಾಗಿ ಬೋರ್​ವೆಲ್ ವಾಹನದ ವ್ಹೀಲ್​ಬೇಸ್ ಜಾಸ್ತಿ ಮಾಡಿ ನೋಂದಣಿ ಮಾಡುವ ದಂಧೆಯೂ ಚಾಲ್ತಿಯಲ್ಲಿದೆ. ಇದರಲ್ಲಿ ಆರ್​ಟಿಒ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿರುವುದಕ್ಕೆ ನೋಂದಣಿ ದಾಖಲಾತಿಗಳ ಸಾಕ್ಷ್ಯ ಸಿಕ್ಕಿದೆ.

ಬೋರ್​ವೆಲ್ ರಿಗ್​ಗಳಿಗೆ ಬ್ಯಾಂಕ್​ಗಳಲ್ಲಿ 1 ಕೋಟಿ ರೂ.ವರೆಗೆ ಅನಾಯಾಸವಾಗಿ ಸಾಲ ಸಿಗುತ್ತದೆ. ವಂಚಕರು ಇದನ್ನೇ ಬಂಡವಾಳ ಮಾಡಿಕೊಂಡು ಸಕ್ರಿಯರಾಗಿದ್ದಾರೆ. ಅರುಣಾಚಲಪ್ರದೇಶ, ಮಣಿಪುರ, ನಾಗಾಲ್ಯಾಂಡ್ ಸೇರಿ ಇನ್ನಿತರ ರಾಜ್ಯಗಳಿಂದ ಮರುನೋಂದಣಿ ಮತ್ತು ವಿಳಾಸ ಬದಲಾವಣೆ (ವೆಹಿಕಲ್ ಟ್ರಾನ್ಸ್​ಪರ್) ಹೆಸರಲ್ಲಿ ರಾಜ್ಯದ ಆರ್​ಟಿಒಗಳಿಗೆ ಕಳುಹಿಸಿ, ದಾಖಲಾತಿಗಳನ್ನು ಸೃಷ್ಟಿಸಲಾಗುತ್ತಿದೆ.

ಇನ್ನೊಂದೆಡೆ ಬೋರ್​ವೆಲ್ ರಿಗ್​ನ ವ್ಹೀಲ್ ಬೇಸ್ 3900 ಮಿ.ಮೀ (3.9 ಮೀಟರ್) ಇರುತ್ತದೆ. ಇದನ್ನು 4900 ಮಿ.ಮೀ (4.9 ಮೀಟರ್) ಎಂದು ನೋಂದಣಿ ಮಾಡಿ, ಓವರ್​ಹಂಗ್​ಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ನಿಯಮದ ಪ್ರಕಾರ ವ್ಹೀಲ್ ಬೇಸ್​ಗಿಂತ ಹಿಂಭಾಗ (ಓವರ್​ಹಂಗ್) ಶೇ.60ಕ್ಕಿಂತ ಹೆಚ್ಚಿರುವಂತಿಲ್ಲ. ಒಂದು ವೇಳೆ ಹೆಚ್ಚಿದ್ದರೆ ನಿಯಮ ಉಲ್ಲಂಘನೆ ಆರೋಪದಲ್ಲಿ ದಂಡ ವಿಧಿಸಲಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಅಕ್ರಮವಾಗಿ ನೋಂದಣಿ ಮಾಡಲಾಗುತ್ತದೆ. ಇದಕ್ಕೆ 1 ಲಕ್ಷ ರೂ. ವರೆಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ಬೆಂಗಳೂರಿನ ಕೋರಮಂಗಲ (ಕೆಎ-01) ಕಚೇರಿ ಸೇರಿ ಕೆಲ ಕಚೇರಿಗಳಲ್ಲಿ ನೂರಾರು ವಾಹನಗಳು ಮರುನೋಂದಣಿ ಹಾಗೂ ವ್ಹೀಲ್ ಬೇಸ್ ಕಡಿಮೆ ಮಾಡಿ ನೋಂದಣಿ ಮಾಡಲಾಗಿದೆ. ದಂಧೆಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಪರಿಶೀಲನೆ ನಡೆಸಿ ದಾಖಲಾತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಸಮಗ್ರ ಮಾಹಿತಿ ಸಿಕ್ಕ ನಂತರ ವರದಿ ತಯಾರಿಸಿ ಸಾರಿಗೆ ಆಯುಕ್ತರು ಹಾಗೂ ಸಚಿವರಿಗೆ ಸಲ್ಲಿಸಲಿದ್ದಾರೆ.

50 ಸಾವಿರಕ್ಕೆ ರೀ ನಂಬರ್!

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನ ಮರುನೋಂದಣಿ ಮಾಡುವ ಮುನ್ನ ಬೋರ್​ವೆಲ್ ವಾಹನ ಹಾಗೂ ಅದರ ದಾಖಲೆ ಪತ್ರ ಪರಿಶೀಲಿಸಬೇಕಾಗುತ್ತದೆ. ಆದರೆ, ಆರ್​ಟಿಒ ಅಧಿಕಾರಿಗಳು, ಭೌತಿಕವಾಗಿ ವಾಹನ ಪರಿಶೀಲಿಸದೆಯೇ ಕರ್ನಾಟಕಕ್ಕೆ ವಾಹನಗಳನ್ನು ಮರುನೋಂದಣಿ ಮಾಡಿಸಿ, ಮೂಲ ಆರ್​ಸಿ ಕಾರ್ಡ್​ಗಳನ್ನು ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ತಲಾ 1 ವಾಹನಕ್ಕೆ 50 ಸಾವಿರ ರೂ.ವರೆಗೆ ಲಂಚ ಪಡೆಯಲಾಗುತ್ತದೆ ಎಂದು ಕೆಲ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಾರಿಗಳ ಮೇಲೆ ಕೋಟಿಕೋಟಿ ಸಾಲ!

2019-20ರಲ್ಲಿ 10 ಲಾರಿಗಳ ಮೇಲೆ ಕೋಟ್ಯಂತರ ರೂ. ಸಾಲ ಪಡೆದು ವಂಚಿಸಿರುವ ಬಗ್ಗೆ 11 ಜನರ ವಿರುದ್ಧ ಚೋಳಮಂಡಲಂ ಫೈನಾನ್ಸ್ ಕಂಪನಿ ಕೊಟ್ಟ ದೂರಿನ ಮೇರೆಗೆ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ತನಿಖೆ ವೇಳೆ ನಡೆಸಿದಾಗ ವಿವಿಧ ಆರ್​ಟಿಒ ಕಚೇರಿಗಳಲ್ಲಿ ಸಾಲ ಪಡೆಯಲು ಸಲ್ಲಿಸಿರುವ ದಾಖಲೆ ಸೃಷ್ಟಿಯಾಗಿರುವುದು ದೃಢಪಟ್ಟಿತ್ತು.

ಗುಜರಿ ಗಾಡಿಗೂ ನೋಂದಣಿ!

ನಾಗಾಲ್ಯಾಂಡ್, ಅರುಣಾಚಲ ಆರ್​ಟಿಒ ಕಚೇರಿಯಿಂದ ವಾಹನ ವರ್ಗಾವಣೆಗೆ ವಿತರಣೆಯಾದ ಎನ್​ಒಸಿ ಆಧರಿಸಿ ಕೋಲಾರ ಆರ್​ಟಿಒದಲ್ಲಿ ಲಾರಿ, ಬಸ್​ಗಳನ್ನು ನೋಂದಣಿ ಮಾಡಲಾಗಿತ್ತು. ಈ ಕುರಿತು ‘ಕದ್ದ ವಾಹನಕ್ಕೂ ನೋಂದಣಿ!’ ಶೀರ್ಷಿಕೆಯಡಿ 2023ರಲ್ಲಿ ಜೂ.30ರಂದು ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸುವ ಮೂಲಕ ದಂಧೆಯನ್ನು ವಿಜಯವಾಣಿ ಬಯಲಿಗೆಳೆದಿತ್ತು. ಇದರಲ್ಲಿ ಹಲವರನ್ನು ಬಂಧಿಸಲಾಗಿತ್ತು.

ಯಾರೆಲ್ಲ ಭಾಗಿ?: ಹೊರರಾಜ್ಯಗಳಲ್ಲಿ ವಂಚಕ ಜಾಲ ಸಕ್ರಿಯವಾಗಿದೆ. ಆ ಜಾಲಕ್ಕೆ ಇಲ್ಲಿನ ಮಧ್ಯವರ್ತಿಗಳಿಗೆ ಸಂಪರ್ಕವಿದೆ. ಮಧ್ಯವರ್ತಿಗಳು ಹೇಳುವ ವಾಹನಕ್ಕೆ ಆರ್​ಟಿಒ ಅಧಿಕಾರಿ ಮತ್ತು ಸಿಬ್ಬಂದಿ ಅಧಿಕೃತ ಮುದ್ರೆ ಒತ್ತುತ್ತಾರೆ. ಆರ್​ಟಿಒ ಅಧಿಕಾರಿ, ಕೇಸ್ ವರ್ಕರ್, ಸೂಪರಿಂಟೆಂಡೆಂಟ್, ಆಡಿಟ್ ಸೂಪರಿಂಟೆಂಡೆಂಟ್, ಬ್ರೇಕ್ ಇನ್​ಸ್ಪೆಕ್ಟರ್​ಗಳು, ಮಧ್ಯವರ್ತಿಗಳು ಭಾಗಿಯಾಗಿದ್ದಾರೆ. ಒಬ್ಬೊಬ್ಬರ ಹಂತದಲ್ಲೂ ಒಂದೊಂದು ರೇಟ್ ಫಿಕ್ಸ್ ಇರುತ್ತದೆ.

ಹೇಗೆ ನಡೆಯುತ್ತದೆ ಅವ್ಯವಹಾರ

* ಬೋರ್​ವೆಲ್ ರಿಗ್ ವಾಹನಗಳೆಂದು ನಕಲಿ ಆರ್​ಸಿ ಕಾರ್ಡ್, ದಾಖಲೆ ಸೃಷ್ಟಿ

* ಅರುಣಾಚಲ, ಮಣಿಪುರ, ನಾಗಾಲ್ಯಾಂಡ್ ಹೆಸರಲ್ಲಿ ದಾಖಲೆಗಳ ತಯಾರಿ

* ಕರ್ನಾಟಕಕ್ಕೆ ವಾಹನ ಮರುನೋಂದಣಿ, ವೆಹಿಕಲ್ ಟ್ರಾನ್ಸ್​ಫರ್​ಗಾಗಿ ಅರ್ಜಿ

* ಆನ್​ಲೈನ್ ಪೋರ್ಟಲ್​ನಲ್ಲೇ ದಾಖಲೆ ಬರುವುದರಿಂದ ಅಸಲಿಯತ್ತು ತಿಳಿಯಲ್ಲ

* ಮಧ್ಯವರ್ತಿ ತಿಳಿಸುವ ವಾಹನಕ್ಕೆ ಆರ್​ಟಿಒದಲ್ಲಿ ಒಂದೇ ದಿನದಲ್ಲಿ ರೀ ನಂಬರ್

* ಭೌತಿಕವಾಗಿ ವಾಹನ ಪರಿಶೀಲಿಸದೆ ಕರ್ನಾಟಕ ವಾಹನವೆಂದು ರೀ ನಂಬರ್

* ದಾಖಲೆಗಳನ್ನು ಬ್ಯಾಂಕ್​ಗಳಿಗೆ ಸಲ್ಲಿಸಿ, 1 ಕೋಟಿ ರೂ.ವರೆಗೂ ಸಾಲ ಸ್ವೀಕಾರ

* ಅನುಮಾನ ಬಾರದಂತೆ ಒಂದಷ್ಟು ತಿಂಗಳು ಬ್ಯಾಂಕ್ ಸಾಲಕ್ಕೆ ಇಎಂಐ ಪಾವತಿ

* 6 ತಿಂಗಳು, ವರ್ಷ ಆಗುತ್ತಿದ್ದಂತೆ ವಂಚಕರು ಇಎಂಐ ಕಟ್ಟದೆ ದಿಢೀರ್ ನಾಪತ್ತೆ

ನಿಯಮ ಏನು?

* ಮರು ನೋಂದಣಿಗೆ ಅರ್ಜಿ ಸಲ್ಲಿಸಿದಾಗ ಭೌತಿಕವಾಗಿ ವಾಹನ ಹಾಜರುಪಡಿಸಬೇಕು

* ಫಾಮ್ರ್ 28ರಲ್ಲಿ ವಾಹನದ ಚಾಸ್ಸಿ ನಂಬರ್ ಪ್ರಿಂಟ್ ತೆಗೆದುಕೊಳ್ಳುವುದು ಕಡ್ಡಾಯ

* ಆರ್​ಸಿ, ಇಂಜಿನ್, ಚಾಸ್ಸಿ ನಂಬರ್ ನೋಡಿ, ಸರಿಯಾಗಿದೆ ಎಂದು ವರದಿ ಕೊಡಬೇಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net