ಯೋಧ ಹುತಾತ್ಮ; ಕುಟುಂಬದ ಪ್ರತಿಭಟನೆ ಬೆನ್ನಲ್ಲೇ ತನಿಖೆ ಮತ್ತಷ್ಟು ಚುರುಕು

Untitled design - 2023-09-22T090232.648
Published on

ಪಶ್ಚಿಮ ಬಂಗಾಳ: ಕಳೆದ ವಾರ ಪಶ್ಚಿಮ ಬಂಗಾಳದಲ್ಲಿ ಹುತಾತ್ಮರಾದ ಯೋಧರೊಬ್ಬರ ಬಗ್ಗೆ ದುಃಖತಪ್ತ ಕುಟುಂಬವು, ಇದು ಹತ್ಯೆ ಎಂದು ಹೇಳಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಬೆನ್ನಲ್ಲೇ ಇದೀಗ ಸೇನೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.

ಜಮ್ಮುವಿನ ಅಖ್ನೂರ್ ಸೆಕ್ಟರ್‌ನ ನಿವಾಸಿ ರೈಫಲ್‌ಮ್ಯಾನ್ ಅಮಿತ್ ಸಿಂಗ್, ಪಶ್ಚಿಮ ಬಂಗಾಳದಲ್ಲಿ ನಿಯೋಜನೆಗೊಂಡಿದ್ದರು. ಸೆಪ್ಟೆಂಬರ್ 15 ರಂದು ಸಿಲಿಗುರಿ ಬಳಿಯ ಉತ್ತರ ಬಂಗಾಳದ ಸುಕ್ನಾದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂದು ಹೇಳಿದ್ದಾರೆ. ಆದ್ರೆ, ಇದನ್ನು ವಿರೋಧಿಸಿದ ಕುಟುಂಬಸ್ಥರು ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಘಟನೆಯ ಕುರಿತು ಶೀಘ್ರವೇ ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಯೋಧನ ಅಂತಿಮ ಸಂಸ್ಕಾರವನ್ನು ಭಾನುವಾರ ಅವರ ಜೂರಿಯನ್ ಗ್ರಾಮದಲ್ಲಿ ಸೇನಾ ಗೌರವಗಳೊಂದಿಗೆ ನೆರವೇರಿಸಲಾಯಿತು. ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕುಟುಂಬವು ಗುರುವಾರ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದೆ.

"ರೈಫಲ್‌ಮ್ಯಾನ್ ಅಮಿತ್ ಸಿಂಗ್ ಅವರ ದುರದೃಷ್ಟಕರ ನಿಧನಕ್ಕೆ ಭಾರತೀಯ ಸೇನೆಯು ವಿಷಾದಿಸಿದೆ. ಈ ದುಃಖದ ಸಮಯದಲ್ಲಿ ನಾವು ಸೈನಿಕನ ಕುಟುಂಬದೊಂದಿಗೆ ನಿಲ್ಲುತ್ತೇವೆ. ಭಾರತೀಯ ಸೇನೆ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ" ಎಂದು ಸಿಲಿಗುರಿ ಮೂಲದ ತ್ರಿಶಕ್ತಿ ಕಾರ್ಪ್ಸ್ ಭಾರತೀಯ ಸೇನೆ ಟ್ವಿಟರ್​ನಲ್ಲಿ ಬರೆದು ಪೋಸ್ಟ್​ ಮಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net