

ಬೆಂಗಳೂರು: ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾನೆ.
ದೊಡ್ಡಬಸ್ತಿಯ ಅಭಿಷೇಕ್(೧೯) ಮೃತ ಸವಾರ. ಸೋಮವಾರ ಮಧ್ಯರಾತ್ರಿ ೧೨ ಗಂಟೆ ಸುಮಾರಿಗೆ ಉಲ್ಲಾಳ ರಸ್ತೆಯ ವಿದ್ಯಾನಿಕೇತನ್ ಸರ್ಕಲ್ ಕಡೆಯಿಂದ ಅಮ್ಮಾ ಆಶ್ರಮದ ಕಡೆಗೆ ಬರುವಾಗ ಈ ಅಪಘಾತ ಸಂಭವಿಸಿದೆ.
ಮೃತ ಸವಾರ ಅಭಿಷೇಕ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಚಾರವಾಗಿ ಸೋಮವಾರ ರಾತ್ರಿ ಮನೆಯಲ್ಲಿ ತಾಯಿ ಮತ್ತು ತಮ್ಮನ ಜತೆಗೆ ಜಗಳವಾಗಿತ್ತು. ಬಳಿಕ ಅಭಿಷೇಕ್ ದ್ವಿಚಕ್ರ ವಾಹನದಲ್ಲಿ ಸಮೀಪದಲ್ಲೇ ಇದ್ದ ಚಿಕ್ಕಮ್ಮನ ಮನೆಗೆ ತೆರಳಿ ರಾತ್ರಿ ೧೦.೩೦ರ ಸುಮಾರಿಗೆ ಊಟ ಮಾಡಿ ಹೊರಗೆ ಬಂದಿದ್ದ. ಬಳಿಕ ಉಲ್ಲಾಳ ರಸ್ತೆಯಲ್ಲಿ ವಿದ್ಯಾನಿಕೇತನ್ ಸರ್ಕಲ್ ಕಡೆಯಿಂದ ಅಮ್ಮಾ ಆಶ್ರಮದ ಕಡೆಗೆ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬರುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿದ್ದಾನೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಅಭಿಷೇಕ್‌ಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಿಸದೆ ಮಂಗಳವಾರ ಮುಂಜಾನೆ ೪ ಗಂಟೆಗೆ ಮೃತಪಟ್ಟಿದ್ದಾನೆ. ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇನ್ನು ಅಭಿಷೇಕ್ ಮದ್ಯ ಸೇವಿಸಿದ್ದ ಬಗ್ಗೆ ಖಚಿತ ಮಾಹಿತಿ ಇಲ್ಲ. ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಖಚಿತವಾಗಲಿದೆ. ಈ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಸ್ವಯಂ ಅಪಘಾತ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.