

ಉದ್ಯಾನದಲ್ಲಿ ಸ್ಪೋರ್ಟ್ಸ್ ಉಡುಗೆ ಧರಿಸಿ ಹುಲಾ ಹೂಪ್ ಪ್ರಾಕ್ಟಿಸ್ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದ್ದ ನಟಿ ಸಂಯುಕ್ತಾ ಹೆಗ್ಡೆ ಅವರ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ, ಎಲ್ಲರೂ ಸಂಯುಕ್ತಾ ಪರವಾಗಿ ನಿಂತಿದ್ದಾರೆ. ಇದೀಗ ಆ ದನಿಗೆ ಬಾಲಿವುಡ್ ನಟಿ ರಿಚಾ ಚಡ್ಡಾ ಸಹ ಕೈ ಜೋಡಿಸಿದ್ದಾರೆ. ಸಂಯುಕ್ತಾ ಟ್ವಿಟ್ ರೀಟ್ವಿಟ್ ಮಾಡಿಕೊಂಡು, ಕಾಂಗ್ರೆಸ್ ಮಹಿಳೆ ಕವಿತಾ ರೆಡ್ಡಿಯ ಚಳಿ ಬಿಡಿಸಿದ್ದಾರೆ.
‘ಆ ರೀತಿಯ ಬಟ್ಟೆ ಹಾಕಿದ್ದಾರೆಂದ ಮಾತ್ರಕ್ಕೆ ಅವರನ್ನು ನೀವು ಏನು ಬೇಕಾದರೂ ಮಾಡಬಹುದು, ಅವರ ಮೇಲೆ ಕೈ ಮಾಡಬಹುದು ಎಂಬುದು ತಪ್ಪು ಮತ್ತು ನಿಮಗೆ ಆ ಯಾವ ಹಕ್ಕೂ ಇಲ್ಲ. ಜಗತ್ತಿಗೆ ನೈತಿಕ ಪೊಲೀಸ್ಗಿರಿಯ ಅಗತ್ಯ ಇಲ್ಲ. ಅದರಲ್ಲೂ ನಿಮ್ಮಂತ ಆಂಟಿಗಳಿಂದ ಅಲ್ಲ. ಗೌರವ ಎರಡೂ ಕಡೆಯ ರಸ್ತೆಯಿದ್ದಂತೆ’ ಎಂದಿದ್ದಾರೆ.
ಈಗಷ್ಟೇ ನಟ ಜಗ್ಗೇಶ್ ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ್ದರು. ಇತ್ತೀಚೆಗೆ ಜಾಲತಾಣಗಳಲ್ಲಿ ಮೊಬೈಲ್ ರೆಕಾರ್ಡ್ ಶುರು ಮಾಡಿ, ಕಾಲುಕೆರೆದು ಬರುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ಇಂದು ಬಾಪ್ ಕಟ್, ಪ್ಯಾಂಟ್ ಶರ್ಟಿನ ಹೆಂಗಸು ಅನ್ಯಳ ಬಟ್ಟೆ ಬಗ್ಗೆ ಬುದ್ಧಿ ಹೇಳುವಂತೆ ಕೈಮಾಡಿ ರೆಕಾರ್ಡ್ ಮಾಡುತ್ತಾಳೆ. ನಾವು ನೋಡಿ ಪರವಿರೋಧ ಚರ್ಚೆ ಮಾಡುತ್ತೇವೆ. ಸಮಾಜದ ಡೊಂಕು ತಿದ್ದುವ ಮೊದಲು ನಾವು ಸರಿ ಇರಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಶುಕ್ರವಾರ ಸಂಜೆ ನಗರದ ಅಗರ ಕೆರೆ ಬಳಿ ಸಾರ್ವಜನಿಕರು ವಾಕಿಂಗ್ ಮಾಡುವ ಪಾರ್ಕ್‌ನಲ್ಲಿ ಸಂಯುಕ್ತಾ ಹೆಗ್ಡೆ ಮತ್ತವರ ಸ್ನೇಹಿತರು ಕ್ರೀಡಾ ಉಡುಗೆ ತೊಟ್ಟು ಹುಲಾ ಹೂಪ್ ಡಾನ್ಸ್ ಮಾಡಿದ್ದಾರೆ. ಹಾಗೆ ಬಟ್ಟೆ ತೊಟ್ಟು ನೃತ್ಯ ಮಾಡಿದ್ದಕ್ಕೆ ಸ್ಥಳೀಯರು ಗರಂ ಆಗಿ, ‘ಇದೇನು ಕ್ಯಾಬರೇನಾ? ಇಂಥ ಬಟ್ಟೆ ತೊಡಬೇಡಿ’ ಎಂದು ಸಂಯುಕ್ತಾ ಮತ್ತವರ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದರು. ನಟಿಯರ ವಿರುದ್ಧ ಧಿಕ್ಕಾರ ಕೂಗಿ, ಉದ್ಯಾನದ ಗೇಟ್ ಲಾಕ್ ಮಾಡಿ, ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು.
ಇತ್ತ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದ ಸಂಯುಕ್ತಾ ಪರಿಸ್ಥಿತಿ ವಿವರಿಸಿದ್ದಾರೆ. ನಮ್ಮದೇನು ತಪ್ಪಿಲ್ಲ, ಕ್ರೀಡೆಯ ಉಡುಗೆ ತೊಟ್ಟು ಹುಲಾ ಪ್ರಾಕ್ಟಿಸ್ ಮಾಡಿದ್ದೇ ತಪ್ಪಾ ಎಂದು ಕಣ್ಣೀರಿಟ್ಟಿದ್ದರು. ಬಳಿಕ ಪೊಲೀಸರ ಸಮ್ಮುಖದಲ್ಲಿ ಪರಿಸ್ಥಿತಿ ಶಾಂತಗೊಳಿಸಲಾಯಿತು.