

ಕೋಲಾರ: ರೈಸ್ ಪುಲ್ಲಿಂಗ್ ದಂಧೆಯಲ್ಲಿ ಚೆಂಬು ನೀಡುವುದಾಗಿ ಸಾರ್ವಜನಿಕರಿಗೆ ಕೋಟ್ಯಂತರ ರೂ. ವಂಚಿಸುತ್ತಿದ್ದ ಗ್ಯಾಂಗ್ ಅನ್ನು ಮಟ್ಟ ಹಾಕುವಲ್ಲಿ ಕೋಲಾರ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣ ಸಂಬಂಧ 8 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ ತಿಳಿಸಿದರು.
ನಗರದ ಹೊರವಲಯದ ಜಿಲ್ಲಾ ಪೊಲೀಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸತೀಶ್ ಕುಮಾರ್ ಎಂಬಾತ ತಂದೆ ವೆಂಕಟಾಚಲಪತಿ ಅವರನ್ನು ಅಪಹರಣ ಮಾಡಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪ್ರಕರಣ ಕೈಗೆತ್ತಿಕೊಂಡು ತನಿಖೆ ಬೆನ್ನತ್ತಿದಾಗ ರೈಸ್ಪುಲ್ಲಿಂಗ್ ದಂಧೆ ಆರೋಪಿಗಳು ಸಿಕ್ಕಿಬಿದ್ದರು ಎಂದು ತಿಳಿಸಿದರು.
ಕೋಲಾರ ತಾಲೂಕು ರಾಮಸಂದ್ರದ ಮುನಿರಾಜು ರೈಸ್ ಪುಲ್ಲಿಂಗ್ ದಂಧೆ ನಡೆಸುತ್ತಿದ್ದ. ಈತ ತಂಡವೊಂದನ್ನು ಮಾಡಿಕೊಂಡಿದ್ದು, "ನಮ್ಮದೊಂದು ಕಂಪನಿಯಿದೆ, ಮನೆಯಲ್ಲಿ ವಿಶೇಷವಾದ ಚೆಂಬಿದ್ದರೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ' ಎಂದೆಲ್ಲ ನಂಬಿಸಿ ಬಹಳಷ್ಟು ಜನರಿಗೆ ಕೋಟ್ಯಂತರ ರೂ.ವಂಚಿಸಿದ್ದ ಎಂದರು.
ಹಲವು ಕ್ರಿಮಿನಲ್ ಕೇಸ್ಗಳಲ್ಲಿ ಭಾಗಿಯಾಗಿರುವ ಮುನಿರಾಜು ರೌಡಿಶೀಟರ್ ಆಗಿದ್ದಾನೆ. ಆತನ ದಂಧೆಗೆ ಮತ್ತಿಬ್ಬರು ರೌಡಿಶೀಟರ್ಗಳಾದ ಶಿವರಾಜು, ಮತ್ತಿಬ್ಬರು ಕಚ್ಚಾಮಂಜು ಬೆಂಗಾವಲಾಗಿದ್ದರು. ಇವರೆಲ್ಲರ ವಿರುದ್ಧ ಗೂಂಡಾಕಾಯ್ದೆ ಬಳಸಲಾಗುತ್ತಿದೆ. ಕೋಲಾರದ ಬಂಗಾರಪೇಟೆ ಸರ್ಕಲ್ನ ಗಂಗಾ, ಅಗ್ನಿಹಳ್ಳಿ ದೇವರಾಜ್, ಕೀಲುಕೋಟೆಪ್ರಕಾಶ್, ಹಾರೋಹಳ್ಳಿ ಮೂರ್ತಿ, ಚಿಂತಾಮಣಿ ಮಂಜುನಾಥ್, ಚಿನ್ನಾಪುರಪ್ರಕಾಶ್ ದಂಧೆಯಲ್ಲಿ ಭಾಗಿಯಾಗಿದ್ದರು. ಮುನಿರಾಜು ಮೆಟಲಾಜಿಕಲ್ ಕಂಪನಿಯನ್ನು ನೋಂದಣಿ ಮಾಡಿಸಿಕೊಂಡು ಇಂಜಿನಿಯರ್ ಎಂದು ಬಿಂಬಿಸಿಕೊಂಡು ಸಹಚರನನ್ನು ವಿಜ್ಞಾನಿ ಎಂದು ನಂಬಿಸಿ ಜನರಿಗೆ ಮೋಸ ಮಾಡುತ್ತಿದ್ದ. ಹತ್ತಾರು ಮಂದಿಗೆ ಟೋಪಿ ಹಾಕಿ ಕೋಟ್ಯಂತರ ರೂ. ಆಸ್ತಿ ಮಾಡುವ ಮೂಲಕ ಐಷಾರಾಮಿ ಜೀವನ ನಡೆಸುತ್ತಿದ್ದ. ಅಂದಾಜು 2 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಜನರಿಂದ ಕಿತ್ತುಕೊಂಡಿದ್ದಾನೆ. ಆರೋಪಿ ಆಸ್ತಿ ವಶಪಡಿಸಿಕೊಳ್ಳಲಾಗುವುದು ಎಂದು ಎಸ್ಪಿ ದೇವರಾಜ್ ಮಾಹಿತಿ ನೀಡಿದರು.
8 ಆರೋಪಿಗಳ ಬಂಧನ: ಚಿಂತಾಮಣಿ ತಾಲೂಕು ಆನೂರು ಸತೀಶ್ ಕುಮಾರ್ ಮತ್ತು ತಂದೆ ವೆಂಕಟಾಚಲಪತಿ ಅವರನ್ನು ಅಪಹರಣ ಮಾಡಿ 70 ಸಾವಿರ ಕಿತ್ತುಕೊಂಡು 20 ಲಕ್ಷ ರೂ.ಗೆ ಬೇಡಿಕೆ ಇರಿಸಿದ್ದ ರಾಮಸಂದ್ರ ಮುನಿರಾಜು, ವಡಗೂರು ಪ್ರವಿಣ್ ಕುಮಾರ್, ಚನ್ನರಾಯಪುರ ನಾಗರಾಜ, ಕಾರಂಜಿಕಟ್ಟೆ ಮಂಜುನಾಥ, ಸಂತೇಗೇಟ್ ರಾಕೇಶ್, ಚಿಂತಾಮಣಿಯ ಮುನಗನಹಳ್ಳಿ ಆರೀಫ್ ಪಾಷ ಅವರನ್ನು ಬಂಧಿಸಲಾಗಿದೆ. ಮುನಿರಾಜು ಮೇಲೆ ಕೋಲಾರ ನಗರ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ಈ ಹಿಂದೆ ಹಲವರಿಗೆ ಮೋಸ ಮಾಡಿ ಆತ ಜೈಲು ಸೇರಿದ್ದ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಂಧ್ರಪ್ರದೇಶ ತೆಲಂಗಾಣ ಸೇರಿ ಹಲವೆಡೆ 2 ಕೋಟಿ ರೂ.ಗೂ ಹೆಚ್ಚಿನ ಹಣ ವಂಚಿಸಿರುವುದು ಬೆಳಕಿಗೆ ಬಂದಿತು ಎಂದು ಹೇಳಿದರು.
ಮೂವರ ವಿರುದ್ಧ ಗೂಂಡಾ ಕಾಯ್ದೆ: ಕೋಲಾರ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಕಚ್ಚಾಮಂಜ ಮುನಿರಾಜುಗೆ ರೈಸ್ ಪುಲ್ಲಿಂಗ್ ದಂಧೆಗೆ ಬೆಂಬಲವಾಗಿದ್ದ. ಇದೇ ರೀತಿ ಪ್ರಕರಣದ 2ನೇ ಆರೋಪಿ ಶಿವರಾಜ್ ಸಹ ದಂಧೆಗೆ ರಕ್ಷಣೆ ನೀಡುತ್ತಿದ್ದ. ಮೋಸಹೋದವರು ಹಣ ವಾಪಸ್ ಕೇಳಲು ಬಂದರೆ ಅವರಿಗೆ ಮಾರಕಾಸ್ತಗಳನ್ನು ತೋರಿಸಿ ಬೆದರಿಸುವುದು, ಹಲ್ಲೆ ಮಾಡುವುದು ಇವರ ಕೆಲಸವಾಗಿತ್ತು. ಹೀಗಾಗಿ ಇವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಹಿರಿಯ ಅಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಡಿ.ದೇವರಾಜ ತಿಳಿಸಿದರು.
ದೂರು ನೀಡಿದರೆ ಮಟ್ಟಹಾಕ್ತೇವೆ
ಜಿಲ್ಲೆಯಲ್ಲಿ ಮೂರು ವರ್ಷದಿಂದ ಹಲವರು ರೈಸ್ ಪುುಲ್ಲಿಂಗ್ ದಂಧೆಯಲ್ಲಿ ಸಕ್ರಿಯರಾಗಿದ್ದರು. ಸಾರ್ವಜನಿಕರು ಚೆಂಬು ನೀಡುವವರು ಬಂದರೆ ಎಚ್ಚರಿಕೆ ವಹಿಸಬೇಕು. ದೂರು ನೀಡಿದರೆ ಅಂತಹವರನ್ನು ಮಟ್ಟಹಾಕುತ್ತೇವೆ. ಆರೋಪಿಗಳು ವಂಚಿಸಿ ಮಾಡಿಕೊಂಡಿರುವ ಆಸ್ತಿಗಳನ್ನು ವಶಕ್ಕೆ ಪಡೆಯಲು ಅವಕಾಶವಿದೆ. ಕೇಂದ್ರ ವಲಯ ಐಜಿಪಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳೊಂದಿಗೆ ಪೊಲೀಸ್ ಸಿಬ್ಬಂದಿ ಭಾಗಿಯಾಗಿರುವುದು ಕಂಡು ಬಂದರೆ ಕೂಡಲೇ ಅವರನ್ನು ಕೆಲಸದಿಂದ ವಜಾಗೊಳಿಸಿ ಪ್ರಕರಣದಲ್ಲಿ ಫಿಕ್ಸ್ ಮಾಡಲಾಗುವುದು ಎಂದು ತಿಳಿಸಿದರು.
ಬೈರೇಗೌಡನಗರ ಡಕಾಯಿತಿ ಪ್ರಕರಣಕ್ಕೆ ಮುಕ್ತಿ
ಕೋಲಾರ ಪೊಲೀಸರಿಗೆ ಸವಾಲಾಗಿದ್ದ ಬೈರೇಗೌಡ ನಗರದ ಡಕಾಯಿತಿ ಕೇಸ್ ಪತ್ತೆ ಹಚ್ಚಲಾಗಿದ್ದು, ಅಂತಾರಾಜ್ಯ ಆರೋಪಿಗಳನ್ನು ಬಂಧಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಎಎಸ್ಐ ಮನೆ ಡಕಾಯಿತಿ ನಡೆಸಿದ್ದ ಆರೋಪಿಗಳೇ ಬೈರೇಗೌಡ ನಗರದಲ್ಲೂ ಕೈ ಚಳಕ ತೋರಿಸಿದ್ದು ಕಂಡುಬಂದಿದೆ. ಆಂಧ್ರದ ಕಡಪಾದ ವಾಹನದ ಆಧಾರದ ಮೇಲೆ ಇಡೀ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. ಪ್ರಮುಖ ಆರೋಪಿ ಪಥಾನ್ ಆರೀಫ್ಖಾನ್ ಪ್ರಸ್ತುತ ಡೆಹರಾಡೋನ್ ಜೈಲಿನಲ್ಲಿದ್ದು ಅವನನ್ನು ಬಾಡಿ ವಾರೆಂಟ್ ಆಧಾರದ ಮೇಲೆ ಕರೆತಂದು ಪ್ರಕರಣಕ್ಕೆ ತಾತ್ವಿಕ ಅಂತ್ಯ ನೀಡಲಾಗುತ್ತದೆ. ಉಳಿದಂತೆ ಐದರ್, ರಾಜೇಶ್, ಬಲಿಜಿತ್ ಸಿಂಗ್, ವೀರೇಂದ್ರ ಸಿಂಗ್ ಮುಂತಾದವರನ್ನು ಬಂಧಿಸಿ 6 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಪಥಾನ್ಆರೀಫ್ಖಾನ್ ಪೆರೋಲ್ ಮೇಲೆ ಜೈಲಿನಿಂದ ಹೊರಗೆ ಬಂದು ಕೋಲಾರದ ಬೈರೇಗೌಡನಗರದ ಮನೆಗೆ ನುಗ್ಗಿ ಸಿಬಿಐನ ಆದಾಯ ತೆರಿಗೆ ಅಧಿಕಾರಿಗಳೆಂದು ಹೇಳಿಕೊಂಡು ಮನೆಯಲ್ಲಿದ್ದವರನ್ನು ಕಟ್ಟಿಹಾಕಿ ನಗದು ಮತ್ತು ಚಿನ್ನಾಭರಣ ಲೂಟಿ ಮಾಡಿದ್ದರೆಂದು ಎಸ್ಪಿ ದೇವರಾಜ್ ವಿವರಣೆ ನೀಡಿದರು.