ದೇವಸ್ಥಾನಗಳಲ್ಲಿ ರಿಯಾಜ್... ಜುಹೂ ಬೀಚ್​ನಲ್ಲಿ ನಿದ್ದೆ!

Untitled design (2)
Published on

ನನ್ನ ಸಂಗೀತಾಭ್ಯಾಸ ಆರಂಭವಾದುದು ನಮ್ಮ ಮನೆತನದಲ್ಲಿಯೇ. ತಂದೆಯವರಿಂದಲೇ ಮೊದಲ ಪಾಠ. ಆಗ ಧಾರವಾಡದಲ್ಲಿ ಮಹಾನ್ ವಿದ್ವಾಂಸರೂ ತಬಲಾ ವಾದಕರೂ ಆದ ಪಂಡಿತ್ ಬಸವರಾಜ ಬೆಂಡಿಗೇರಿ ಇದ್ದರು. ತಂದೆಯವರಲ್ಲಿ ಸಂಗೀತ ಕಲಿಯುತ್ತಿರುವ ಜತೆಜತೆಗೇ ಬೆಂಡಿಗೇರಿ ಅವರ ಹತ್ತಿರ ತುಂಬಾ ಸಣ್ಣ ವಯಸ್ಸಿನಲ್ಲಿಯೇ ತಬಲಾವನ್ನೂ ಕಲಿಯುತ್ತಿದ್ದೆ. ಆ ಕಲಿಕೆಯ ಸಂದರ್ಭದಲ್ಲಿ ಸಾಕಷ್ಟು ಅನುಭವಗಳಾದವು. ಆಗ ಏಕಾಗ್ರತೆ ಕೆಡಿಸುವಂಥ ಸಂಗತಿಗಳು ಕಡಿಮೆ ಇದ್ದವು. ಟಿವಿ, ಮೊಬೈಲ್, ಇನ್ಸ್​ಟಾ ಗ್ರಾಂ ಇವೆಲ್ಲ ಇರಲಿಲ್ಲ. ಆದ್ದರಿಂದ ಯಾವ ಸಂಗೀತ ಕೇಳಬೇಕೆಂದರೂ ಆಕಾಶವಾಣಿಯ ಮೊರೆಹೋಗುವುದು ಅನಿವಾರ್ಯವಾಗಿತ್ತು. ಇದರೊಂದಿಗೆ

ಗುರುಮುಖೇನ ಕುಳಿತು ಕಲಿಯುವ ಅವಕಾಶವಿತ್ತು. ನಮ್ಮ ಗುರುಗಳು ಬಹಳ ಸಮಾಧಾನಚಿತ್ತರಾಗಿದ್ದರು. ಬಹಳ ಪ್ರೀತಿಯಿಂದ ಕಲಿಸುತ್ತಿದ್ದರು ಕೂಡ. ತಂದೆಯವರೋ, ಸ್ವಲ್ಪ ಸಿಟ್ಟಿನ ಸ್ವಭಾವದವರು. ಹಾಗಾಗಿ ಅವರಿಗೆ ಹೆದರುತ್ತಿದ್ದೆವು. ಆದರೆ ತಂದೆಯವರು ತಮ್ಮ ಕೊನೆಯ ದಿನಗಳಲ್ಲಿ ನಮಗೆ ತುಂಬಾ ಪಾಠಗಳನ್ನು ಹೇಳಿದ್ದರು. ಸಂಗೀತದಲ್ಲಿ ಅಥವಾ ಯಾವುದೇ ಕಲಾಪ್ರಕಾರಗಳಲ್ಲಿ ನಾವು ಸಾಧಿಸಬೇಕೆಂದರೆ ಅಭ್ಯಾಸವೆನ್ನುವುದು ಬಹಳ ಮುಖ್ಯ. ಹೀಗಾಗಿ ನಿರಂತರ ರಿಯಾಜ್ ಇದ್ದೇ ಇರುತ್ತಿತ್ತು. ಜೊತೆಗೆ ಹಿರಿಯ ಕಲಾವಿದರ ಸಂಗೀತವನ್ನು ಕೇಳಿಸಿಕೊಳ್ಳುತ್ತಿದ್ದೆವು ಮತ್ತು ಅವರ ಪ್ರಸ್ತುತಿಯ ಕೆಲ ಅಂಶಗಳನ್ನು ಅಳವಡಿಸಿಕೊಳ್ಳುತ್ತಿದ್ದೆವು.

ದೇವಸ್ಥಾನದಲ್ಲಿ ಕುಳಿತು ಅಭ್ಯಾಸ: ನನ್ನ ತಂದೆಯವರ ಕಾಲಾನಂತರ ಜೀವನದಲ್ಲಿ ಕೆಲವು ಕಷ್ಟಗಳನ್ನು ನಾವು ಎದುರಿಸಬೇಕಾಯಿತು. ಒಂದು ಉದಾಹರಣೆ ಕೊಡಬೇಕೆಂದರೆ, ನಮಗೆ ಆಗ ವಾಸಿಸಲು ಸ್ವಂತ ಮನೆ ಇರಲಿಲ್ಲ. ಸಹಜವಾಗಿ ಸಂಗೀತದ ಅಭ್ಯಾಸಕ್ಕೆ ತೊಡಕಾಯಿತು. ಆಗ ನನ್ನ ಸಂಗೀತ ಅಭ್ಯಾಸಕ್ಕೆ ನೆರಳಾಗಿದ್ದು ದೇವಸ್ಥಾನಗಳು. ಧಾರವಾಡದಲ್ಲಿ ನನ್ನ ವಾಸಸ್ಥಳದ ಸಮೀಪದಲ್ಲೇ ರಾಯರ ಹನುಮ ದೇವರ ಗುಡಿ ಇತ್ತು. ಹಲವು ವರ್ಷಗಳ ಕಾಲ ನನ್ನ ಸಂಗೀತಾಭ್ಯಾಸಕ್ಕೆ ಅದು ನೆಲೆಯಾಯಿತು. ನಂತರ ಮಂಗಳವಾರಪೇಟೆಯೊಳಗಿರುವ ಕಾಳಿಕಾ ಮಂದಿರದಲ್ಲಿ ಕುಳಿತು ಅಭ್ಯಾಸ ಮಾಡುತ್ತಿದ್ದೆ. ಅಭ್ಯಾಸಕ್ಕೆ ಸಮಯಮಿತಿ ಅಂತಿರಲಿಲ್ಲ. ಎಷ್ಟು ಸಮಯ ಸಿಗುವುದೋ ಅವೆಲ್ಲವನ್ನೂ ಮೀಸಲಿಡುತ್ತಿದ್ದೆ. ಹೀಗೆ ಸಾಗುತ್ತಿರುವಾಗ ಒಂದು ಸಂದರ್ಭದಲ್ಲಿ ನಾನು ಸಾರಂಗಿ ವಾದನದ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಬೇಕೆಂದು ಬಯಸಿದೆ. ಆಗ ನಾನು ಮುಂಬಯಿಗೆ ಹೋಗಬೇಕಾಯಿತು. ಹೋದೆ. ಅಲ್ಲಿ ಪಂಡಿತ್ ರಾಮನಾರಾಯಣ್ ಎಂಬ ವಿಶ್ವವಿಖ್ಯಾತ ಸಾರಂಗಿ ವಾದಕರಲ್ಲಿ ಶಿಷ್ಯನಾಗಬಯಸಿದೆ. ಸುಮಾರು ಆರು ವರ್ಷ ಅಲ್ಲೇ ಇದ್ದೆ. ಅಲ್ಲಿಯೂ ಕಷ್ಟಗಳು ಜತೆಗಿದ್ದವು. ಇರಲು ಜಾಗವಿರಲಿಲ್ಲ.

ಎಷ್ಟೋ ದಿನಗಳತನಕ ನಾನು ಜುಹೂ ಬೀಚ್​ನಲ್ಲಿಯೋ, ರೇಲ್ವೆ ಸ್ಟೇಷನ್​ಗಳಲ್ಲಿಯೋ ಕುಳಿತು ರಾತ್ರಿಗಳನ್ನು ಕಳೆಯುತ್ತಿದ್ದೆ. ಕೊನೆಗೂ ವಸತಿಗೆ ಒಂದು ಜಾಗ ದೊರೆಯಿತು. ಅಲ್ಲಿ ಉಳಿದುಕೊಂಡು ಗುರುಗಳ ಹತ್ತಿರ ಬಂದು ಅಭ್ಯಾಸ ಮಾಡುತ್ತಿದ್ದೆ. ಅದೇ ಸಮಯದಲ್ಲಿ ನನಗೆ ಆಕಾಶವಾಣಿಯಲ್ಲಿ ಕಲಾವಿದರಿಗೆ ಸಾಥ್ ಮಾಡಲು ಅವಕಾಶ ಸಿಗತೊಡಗಿತು. ಅದು ಒಂದು ರೀತಿಯಲ್ಲಿ ನನ್ನ ಬದುಕಿನ ತಿರುವು ಎಂದರೂ ತಪ್ಪಲ್ಲ. ಏಕೆಂದರೆ ಆಗ ಹಲವಾರು ದೊಡ್ಡ ದೊಡ್ಡ ಕಲಾವಿದರಿಗೆ ಸಾಥ್ ಸಂಗತ್ ಮಾಡಿದೆ. ಸ್ವಲ್ಪ ದುಡ್ಡೂ ಸಿಗುತ್ತಿತ್ತು. ಅದರಲ್ಲಿ ನನ್ನ ಹೊಟ್ಟೆಪಾಡು ನಡೆಯುತ್ತಿತ್ತು. ಆ ಸಮಯದಲ್ಲಿ ಮುಂಬಯಿಯಲ್ಲಿ ಆಲ್ಬಂ, ಭಕ್ತಿ ಸಂಗೀತದ ಧ್ವನಿಸುರುಳಿಗಳು ಪ್ರಸಿದ್ಧವಾಗಿದ್ದವು. ಅವುಗಳ ರೆಕಾರ್ಡಿಂಗ್​ಗೆ ನುಡಿಸಲು ಹೋಗುತ್ತಿದ್ದೆ. ಬೇರೆ ಬೇರೆ ಭಾಷೆಯ ರೆಕಾರ್ಡಿಂಗ್ ಇರುತ್ತಿದ್ದವು. ಬೇರೆ ಬೇರೆ ಸಂಗೀತ ನಿರ್ದೇಶಕರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅದೊಂದು ಉತ್ತಮ ಅನುಭವ. ಹೀಗಾಗಿ ಅಲ್ಲಿಯೂ ಸಾಕಷ್ಟು ಕಲಿಯಲು ಅವಕಾಶವಾಯಿತು. ನಂತರ ಹಲವಾರು ಕಥಕ್ ನೃತ್ಯಗಾರರ ಜತೆ ಕೆಲಸ ಮಾಡಿದೆ. ಅಲ್ಲಿಯೂ ಅದ್ಭುತವಾದ ಅನುಭವ ನನ್ನದಾಯಿತು.

ಮರಳಿ ಧಾರವಾಡಕ್ಕೆ..: ಬದುಕಿನಲ್ಲಿ ಇಷ್ಟೆಲ್ಲ ಕೊಟ್ಟ ಮುಂಬಯಿ ಬೇಡವೆನಿ ಸಿತು. 1992ರಲ್ಲಿ ಬಾಬರಿ ಕಟ್ಟಡದ ಪ್ರಕರಣವಾಯ್ತಲ್ಲ, ಆ ಸಮಯದಲ್ಲಿ ಅಲ್ಲಿ ಒಂಥರ ಮೃತ್ಯುಕಾಂಡವನ್ನೇ ನೋಡಿದಂತಾಯಿತು. ಹಾಡುಹಗಲೇ ಕೊಲೆಗಳು, ಲೂಟಿಗಳು ನಡೆಯುತ್ತಿದ್ದವು. ಆಗ ನನಗೇಕೋ ಮುಂಬಯಿ ಬೇಡ ಎಂದು ತೀವ್ರವಾಗಿ ಅನಿಸತೊಡಗಿತು. ನಮ್ಮೂರು ಧಾರವಾಡಕ್ಕೆ ಬಂದುಬಿಟ್ಟೆ. ಅಲ್ಲಿ ಸುಮಾರು ಒಂದು ವರ್ಷ ಇದ್ದೆ. ಮುಂದೇನು ಎಂದು ಯೋಚಿಸಿದೆ. ಕೊನೆಗೆ ಕೊಲ್ಲಾಪುರ ಹತ್ತಿರ ಒಂದು ಖಾಸಗಿ ಅಕಾಡೆಮಿಯಲ್ಲಿ ಒಂದು ವರ್ಷ ಸಂಗೀತ ಕಲಿಸುವ ಕೆಲಸ ಮಾಡಿದೆ. ಆದರೆ ಅದು ತುಂಬ ಸೀಮಿತವಾದ ಕೆಲಸ ಅನ್ನಿಸಿತು. ಏಕೆಂದರೆ ಅದರಲ್ಲಿ ಯಾವ ಬೆಳವಣಿಗೆಯೂ ಕಾಣಿಸಲಿಲ್ಲ. ಆದ್ದರಿಂದ ನಾನು ಬೆಂಗಳೂರಿನತ್ತ ಮುಖ ಮಾಡಿದೆ.

ಕಲಾವಿದರ ಸಂಗದಲ್ಲಿ...: ರಾಜಧಾನಿಗೆ ಬಂದ ನನಗೆ ಪ್ರಸಿದ್ಧ ನೃತ್ಯಪಟುಗಳಾದ ನಿರುಪಮಾ ಮತ್ತು ರಾಜೇಂದ್ರ ಅವರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಜತೆಗೆ ಪ್ರವೀಣ್ ಡಿ. ರಾವ್, ಎನ್. ಎಸ್, ಪ್ರಸಾದ್, ಶಬ್ಬಿರ್ ಅಹಮದ್ ಅವರಂಥ ಒಳ್ಳೆಯ ಸಂಗೀತಗಾರರು ನೆರವಾದರು. ಸುಗಮ ಸಂಗೀತ, ನೃತ್ಯ ಕ್ಷೇತ್ರದಲ್ಲಿ ಸಾರಂಗಿ ನುಡಿಸಲು, ಹಾಡಲು, ಸಾಹಿತ್ಯ ರಚಿಸಿ ಸಂಯೋಜನೆ ಮಾಡಲು ಅವಕಾಶ ದೊರೆಯುತ್ತ ಹೋಯಿತು. ಈ ಸಂದರ್ಭದಲ್ಲಿಯೂ ಶಾಸ್ತ್ರೀಯ ಸಂಗೀತವನ್ನು ನಾನು ಬಿಡಲಿಲ್ಲ. ಕಾರ್ಯಕ್ರಮ ಗಳನ್ನು ಕೊಡುತ್ತಿದ್ದೆ. ಆದರೆ ಅದೇನೂ ಸರಳ ಹಾದಿಯಾಗಿರಲಿಲ್ಲ. ಅನೇಕ ಸಿಹಿ-ಕಹಿ ಘಟನೆಗಳು ನಡೆದವು. ಕಲಾವಿದರಿಗೆ ಕೆಲವೊಮ್ಮೆ ಕೆೆಟ್ಟ ಅನುಭವಗಳಾಗುತ್ತವೆ, ತೊಂದರೆ ಕೊಡುವವರೂ ಇರುತ್ತಾರೆ, ಕೈಹಿಡಿದು ಮುನ್ನಡೆಸುವವರೂ ಇರುತ್ತಾರೆ. ಅದೆಲ್ಲ ಸಹಜವೆಂಬಂತೆ ನನ್ನ ಪಯಣ ಸಾಗಿತು.

ಚೀಜ್ ರಚನೆಯ ಕಾಯಕ: ಹಿಂದೂಸ್ತಾನಿ ಸಂಗೀತದಲ್ಲಿ ಭೋಜ್ಪುರಿ, ಉರ್ದು, ಹಿಂದಿ ಭಾಷೆಯ ಸಾಹಿತ್ಯದ ಬಳಕೆ ಇದೆ. ಆದರೆ ಆ ಭಾಷೆಯ ಪ್ರಭಾವ ಇರದ ದಕ್ಷಿಣ ಭಾರತದಲ್ಲಿ ಅದರ ಅರ್ಥತಿಳಿಯದೆ ಹಾಗೂ ಉಚ್ಚಾರಣೆಯಲ್ಲಿ ಸಹಜವಾಗಿ ದೋಷಗಳು ಇಣುಕುತ್ತವೆ. ಅದು ಆ ಭಾಷೆ ತಿಳಿದಿರುವವರಿಗೆ ಕಿರಿಕಿರಿ ಉಂಟುಮಾಡುತ್ತವೆ. ಇದನ್ನು ಗಮನಿಸುತ್ತಿದ್ದ ನಾನು ಶಾಸ್ತ್ರೀಯ ಸಂಗೀತಕ್ಕೆ ಅನುಗುಣವಾದ ಸಾಹಿತ್ಯ ರಚಿಸಲು ಆರಂಭಿಸಿದೆ. ಅದನ್ನು ಬರೆಯುತ್ತ ಬರೆಯುತ್ತ ಸುಮಾರು ಮೂರುಸಾವಿರ ರಚನೆ (ಚೀಜ್)ಗಳಾದವು. ಅವೆಲ್ಲಕ್ಕೂ ಸ್ವರ ಸಂಯೋಜನೆ ಮಾಡಿದ್ದೇನೆ. ಹಿರಿಯ ವಿದ್ವಾಂಸರಾದ ಪಂ. ಇಂದೂಧರ ನಿರೋಡಿ, ಪಂ. ರಾಜೀವ್ ತಾರಾನಾಥ್ ಅಂಥವರಿಗೆ ತೋರಿಸಿ ಗ್ರೀನ್ ಸಿಗ್ನಲ್ ಪಡೆದಿದ್ದೇನೆ. ಅವುಗಳನ್ನು ಪುಸ್ತಕ ರೂಪದಲ್ಲಿ ತರುವ ಹಾಗೂ ಧ್ವನಿಮುದ್ರಣ ಮಾಡುವ ಕೆಲಸ ಬಾಕಿ ಇದೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ನಿರ್ದೇಶಕರ ಜತೆ, ಹಾಗೆಯೇ ವಿಜಯಭಾಸ್ಕರ್, ರಾಜನ್-ನಾಗೇಂದ್ರ, ಹಂಸಲೇಖ ಮುಂತಾದ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದೆ. ಹೀಗಾಗಿ ಆ ಕ್ಷೇತ್ರದಲ್ಲಿಯೂ ಸಾಕಷ್ಟು ಕಲಿತೆ. ಎಂದಿನಂತೆ ಕಷ್ಟಗಳೂ ಇದ್ದವು. ಎಲ್ಲವನ್ನೂ ದೇವರು ಬಗೆಹರಿಸುತ್ತ ಬಂದ. ಈಗ ನಾನು ಒಂದಷ್ಟು ಮಕ್ಕಳಿಗೆ ಪಾಠ ಹೇಳುತ್ತಿರುವೆ. ಕೇರಳದಲ್ಲಿ ನಮ್ಮ ಎರಡು ಅಕಾಡೆಮಿ ಇದೆ. ಅಲ್ಲಿಯೂ ತಿಂಗಳಿಗೆ ಒಮ್ಮೆ ಹೋಗಿ ಬರುತ್ತಿರುತ್ತೇನೆ.

ಕಷ್ಟಕ್ಕೆ ಬೆದರದಿರಿ: ನಾನು ಸಾಧನೆ ಮಾಡಬೇಕೆನ್ನುವವರಿಗೆ ಹೇಳಲೇಬೇಕಾದ ಸಂಗತಿಯೊಂದಿದೆ. ಅದೆಂದರೆ- ಕಷ್ಟಗಳು ಬಂದವು ಎಂದು ಸಂಗೀತವನ್ನು ಬಿಟ್ಟು ಬೇರೇನೋ ಮಾಡಲು ನಾನು ಹೋಗಲಿಲ್ಲ. ಒಳ್ಳೇದಾಗಲಿ ಕೆಟ್ಟದ್ದಾಗಲೀ ಇದರಿಂದಲೇ ಆಗಬೇಕು ಎನ್ನುವ ಧೋರಣೆಯಿಂದಲೇ ಸಾಗಿ ಬಂದೆ. ನಾನು ಕಲಿಯುತ್ತ ಹೋದೆ. ಬೆಳೆಯುತ್ತ ಸಾಗಿದೆ. ಜೀವನದಲ್ಲಿ ಅನೇಕ ಪ್ರಸಿದ್ಧ ಸಂಗೀತಗಾರರ ಸಹವಾಸದೊಳಗೆ ಬಂದೆ. ಉದಾಹರಣೆಗೆ ಪಂಡಿತ್ ರಾಮನಾರಾಯಣ್ ಜೀ. ಅವರಲ್ಲಿ ಕಲಿಯುವಾಗ ಮಹಾನ್ ಸಂಗೀತಗಾರರಾದ ಕಿಶನ್ ಮಹಾರಾಜ್, ರಯೀಸ್ ಖಾನ್, ಅಲಿಅಕ್ಬರ್ ಖಾನ್ ಅವರನ್ನು ಭೇಟಿಯಾಗಿದ್ದೆ. ಧಾರವಾಡಕ್ಕೆ ಬಂದ ಮೇಲೆ ಮಹಾನ್ ಪಂಡಿತರುಗಳಾದ ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಸಂಗಮೇಶ್ವರ ಗುರವ್ ಮೊದಲಾದ ಹಿರಿಯ ಕಲಾವಿದರನ್ನು ಮತ್ತಷ್ಟು ಹತ್ತಿರದಿಂದ ನೋಡುವ ಆವಕಾಶ ಸಿಕ್ಕಿತು. ಬೆಂಗಳೂರಿಗೆ ಬಂದಾಗ ರಾಜೀವ್ ತಾರಾನಾಥ್ ಅವರು ನನ್ನನ್ನು ಬಹಳ ಅಕ್ಕರೆಯಿಂದ ಕಂಡರು. ಅವರಿಂದಲೂ ನಾನು ಕಲಿತೆ. ನನ್ನ ಚಿಕ್ಕ ಮಗ ಅವರ ಹತ್ತಿರ ಸುಮಾರು ಹನ್ನೆರಡು ವರ್ಷ ಸರೋದ್ ಕಲಿತ. ಈಗ ಆತ ಗಾಯನವನ್ನೂ ಮಾಡುತ್ತಿದ್ದಾನೆ. ಹಿರಿಯಮಗ ನನ್ನ ಹತ್ತಿರ ಸುಮಾರು ಹತ್ತು ವರ್ಷ ಕಲಿತ ಮೇಲೆ ನನ್ನ ಗುರುಗಳಾದ ಪಂಡಿತ್ ರಾಮನಾರಾಯಣ್ ಅವರಲ್ಲಿ ಹೆಚ್ಚಿನ ಅಭ್ಯಾಸ ಮಾಡಿದ. ಈಗ ಆತ ವೃತ್ತಿಪರ ಸಾರಂಗಿ ಕಲಾವಿದನಾಗಿ ಕಚೇರಿಗಳನ್ನು ಕೊಡುತ್ತಿ ದ್ದಾನೆ. ಕಷ್ಟ ಬಂದಾಗ ಕುಗ್ಗದೇ, ಸಂತಸ ಬಂದಾಗ ಹಿಗ್ಗದೇ ಸದಾ ಸಂಗೀತದ ಅಭ್ಯಾಸ ಮಾಡುತ್ತ ಬಂದೆ. ನಾನು ಸಂಗೀತ ಅಭ್ಯಾಸಿಗಳಿಗೆ ಹೇಳುವದೂ ಅದನ್ನೇ. ತಾಳ್ಮೆ ತೀರ ಅಗತ್ಯ. ಅಷ್ಟೇ ಅಗತ್ಯವಾದುದು ನಿರಂತರ ಅಭ್ಯಾಸ. ಜೊತೆಗೆ ಹಿರಿಯ ಸಂಗೀತಗಾರರ ಸಂಗೀತವನ್ನು ಕೇಳುವುದು, ಅವರನ್ನು ಗೌರವಿಸುವುದನ್ನು ಮರೆಯಬಾರದು. ಅವರಿಂದಷ್ಟೇ ಅಲ್ಲ, ಎಷ್ಟೋ ಸಲ ನಮಗಿಂತ ಚಿಕ್ಕವರಿಂದಲೂ ಕಲಿಯುವುದು ಬಹಳ ಇರುತ್ತದೆ. ಮುಖ್ಯ ವಾಗಿ ಕಲಿಯುವ ವಿದ್ಯಾರ್ಥಿಯ ಮನಸ್ಸು ನಮ್ಮದಾಗಿರಬೇಕು. ನಾನು ಪಂಡಿತ್ ಆಗಿದೀನಿ, ಉಸ್ತಾದ್ ಆಗಿದೀನಿ ಅಂದುಕೊಂಡರೆ ಬೆಳವಣಿಗೆ ನಿಂತು ಹೋಗುತ್ತದೆ ಅಷ್ಟೇ.

ಪ್ರಾಮಾಣಿಕವಾಗಿ ದುಡಿಯಬೇಕು. ಇಷ್ಟು ಪ್ರತಿಫಲ ಬರಲೇಬೇಕು ಎಂದು ದುಡಿಯಲು ಹೋದರೆ ಅಂಥವರಿಂದ ಪರಿಣಾಮಕಾರಿ ಸಂಗೀತ ಬರುವುದು ಬಹಳ ಕಷ್ಟ. ಸಂಗೀತದಲ್ಲಿ ಪರಿಣಾಮ ಹುಟ್ಟಬೇಕೆಂದರೆ ನಾವು ಸಾಧುತ್ವವನ್ನು ಮೈಗೂಡಿಸಿಕೊಳ್ಳಬೇಕು. ಸಂಗೀತದ ಮೋಹ ಬಿಟ್ಟು ಬೇರಾವ ಮೋಹಕ್ಕೂ ಬೀಳಬಾರದು. ಏಕೆಂದರೆ ಇದು ಒಂದು ಜೀವನಕ್ಕೆ ಮುಗಿಯುವಂಥ ವಿಷಯವಲ್ಲ ಅಥವಾ ಮುಗಿಯುವ ವಿಷಯವೇ ಅಲ್ಲ. ಆದ್ದರಿಂದಲೇ ಇಲ್ಲಿ ಸದಾ ವಿದ್ಯಾರ್ಥಿಯಾಗಿ, ಗುರುವನ್ನು ದೇವರ ಸ್ಥಾನದಲ್ಲಿಟ್ಟೇ ನೋಡಬೇಕು. ಗುರುವಿನ ಮೇಲೆ, ಸಂಗೀತದ ಮೇಲೆ ಭಕ್ತಿ, ಬೇರೆಯವರ ಸಂಗೀತವನ್ನು ಆದರಿಸುವ ಮನಸ್ಥಿತಿ ಇರಬೇಕು. ಇದೆಲ್ಲ ಇದ್ದಾಗ ಮಾತ್ರ ಸಂಗೀತದಲ್ಲಿ ತಕ್ಕ ಮಟ್ಟಿನ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತದೆ. ಕಷ್ಟನಷ್ಟಗಳನ್ನು ಮರೆಯುತ್ತ, ನಮಗೆ ದೇವರು ಕೊಟ್ಟ ಪ್ರತಿಭೆಯನ್ನು ಗುರುತಿಸಿ ಅಭ್ಯಾಸ ಮಾಡುತ್ತ ಹೋಗುವುದು ವಿದ್ಯಾರ್ಥಿಯ ಧರ್ಮ. ಇದನ್ನು ಸಾಧನೆ ಎನ್ನುವುದಕ್ಕಿಂತ ಆರಾಧನೆ ಎಂದೇ ತಿಳಿಯುವುದು ಮುಖ್ಯ.

ನಿರೂಪಣೆ: ರಾಜಶೇಖರ ಜೋಗಿನ್ಮನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net