

ಲಯವಾದ್ಯದಲ್ಲಿ ನೂರಾರು ನಡೆಗಳನ್ನು ಸುಲಲಿತವಾಗಿ ನುಡಿಸಿ ಬೆರಗುಗೊಳಿಸುವ ಪಂಡಿತ್ ಸತೀಶ್ ಹಂಪಿಹೊಳಿ ವೃತ್ತಿ ಬದುಕಿನಲ್ಲಿ ಸಾರ್ಥಕ 40 ವರ್ಷ ಪೂರ್ಣಗೊಳಿಸಿದ್ದು, ಜುಲೈ 28ರಂದು 60 ವಸಂತಗಳನ್ನು ಅರ್ಥಪೂರ್ಣವಾಗಿ ಮುಗಿಸಿ ಹೊಸ ಹುರುಪು, ಉತ್ಸಾಹದೊಂದಿಗೆ ಮುಂದೆ ಸಾಗುತ್ತಿದ್ದಾರೆ.
ರೈಲ್ವೆ ಅಧಿಕಾರಿಯಾಗಿದ್ದ ದತ್ತಾತ್ರೇಯ ಹಂಪಿಹೊಳಿ ಹಾಗೂ ಸರಸ್ವತಿ ಬಾಯಿ ದಂಪತಿ ಮೂರನೆಯ ಸುಪುತ್ರ ಸತೀಶ್ ಹಂಪಿಹೊಳಿ. ಹುಬ್ಬಳ್ಳಿಯ ಚಿಟಗುಬ್ಬಿಯಲ್ಲಿ 1965ರ ಜುಲೈ 28ರಂದು ಜನನ. ಅರುಣ್ ಹಂಪಿಹೊಳಿ ಹಾಗೂ ಶ್ರೀಕಾಂತ್ ಹಂಪಿಹೊಳಿ ಇವರ ಅಣ್ಣಂದಿರು. ಹುಬ್ಬಳ್ಳಿಯ ಅಕ್ಕಿ ಹೊಂಡದಲ್ಲಿದ್ದ ಕನ್ನಡ ಶಾಲೆಯಲ್ಲಿ 7ನೇ ತರಗತಿಯವರೆಗೆ ಸತೀಶ್ರ ವಿದ್ಯಾಭ್ಯಾಸ. ಎಂಟನೇ ವಯಸ್ಸಿನಲ್ಲಿಯೇ ಶಾರದಾ ಕಲಾನಿಕೇತನದಲ್ಲಿ ಮೂಲತಃ ಹಿಂದುಸ್ತಾನಿ ಗಾಯಕರಾಗಿದ್ದ ಪಂಡಿತ್ ಎಂ.ಎನ್. ಕಸ್ತೂರಿ ಅವರಲ್ಲಿ ಪ್ರಾಥಮಿಕ ತಬಲಾ ಶಿಕ್ಷಣವನ್ನು ಆರಂಭಿಸಿದರು. ಮನೆಯಲ್ಲಿಯೂ ಪ್ರೋತ್ಸಾಹದಾಯಕವಾದ ಸಾಂಸ್ಕೃತಿಕ ವಾತಾವರಣವೇ ಇದ್ದುದರಿಂದ ಸತೀಶ್ ಅವರಿಗೆ ಅದು ವರದಾನವೇ ಆಯಿತು. ಎಂಟನೇ ತರಗತಿಗೆ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲ್ಗೆ ಸೇರಿದರು. ಹತ್ತನೇ ತರಗತಿಯಲ್ಲಿ ತೇರ್ಗಡೆಯಾದ ನಂತರ ಹುಬ್ಬಳ್ಳಿಯ ನೆಹರು ಕಾಲೇಜಿಗೆ ಸೇರಿ ಕಲಾವಿಭಾಗದಲ್ಲಿ ಬಿಎ ಪದವಿ ಗಳಿಸಿದರು. ಕಾಲೇಜ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಪಂಡಿತ್ ಬಸವರಾಜ್ ಬೆಂಡಿಗೇರಿ ಅವರ ಬಳಿ ತಬಲಾ ಶಿಕ್ಷಣಕ್ಕಾಗಿ ಸೇರಿದರು. ಇಲ್ಲಿ ತಬಲಾ ಶಿಕ್ಷಣ ಆರಂಭವಾದದ್ದು ಪಂಡಿತ್ ಬಸವರಾಜ ರಾಜಗುರು ಅವರ ಸಮ್ಮುಖದಲ್ಲಿ.
1986ರ ಜನವರಿ 16. ಸತೀಶ್ರ ಬದುಕಿನಲ್ಲೊಂದು ಮಹತ್ವದ ಘಟ್ಟ. ಬೆಂಗಳೂರಿಗೆ ಬಂದ ಹಂಪಿಹೊಳಿ ಅವರಿಗೆ ಚಾಮರಾಜಪೇಟೆಯ ಸಿದ್ದಾಶ್ರಮದಲ್ಲಿ ಉಳಿದುಕೊಳ್ಳಲು ಮಹಾಮಹೋಪಾಧ್ಯಾಯ ಪಂಡಿತ್ ಶೇಷಾದ್ರಿಗವಾಯಿಗಳೇ ವ್ಯವಸ್ಥೆ ಮಾಡಿದರು. ತಮ್ಮದೇ ಅರವಿಂದ ಸಂಗೀತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತಬಲಾ ಸಾಥ್ ನೀಡಲು ನಿಯೋಜಿಸಿದರು. ಗವಾಯಿಗಳ ಮೂಲಕವೇ ಅವರ ಶಿಷ್ಯ ಜಿ. ವಿ.ಅತ್ರಿ ಹಾಗೂ ಹೆಸರಾಂತ ಗಾಯಕಿ ಶ್ಯಾಮಲಾ ಭಾವೆಯವರ ಪರಿಚಯವಾಯಿತು. ಶ್ಯಾಮಲಾ ಭಾವೆಯವರು ತಮ್ಮ ಸರಸ್ವತಿ ಸಂಗೀತ ವಿದ್ಯಾಲಯದಲ್ಲಿ ತಬಲಾ ಮಾರ್ಗದರ್ಶಕರಾಗಿ ಕೆಲಸ ಮಾಡಲು ಅವಕಾಶವನ್ನು ನೀಡಿ ಸತೀಶ್ ಅವರು ರಾಜಧಾನಿಯಲ್ಲಿ ಭದ್ರವಾಗಿ ನೆಲೆಯೂರಲು ಸಹಾಯ ಮಾಡಿದರು. ಮುಂದಿನ ದಿನಗಳಲ್ಲಿ ನಾಡಿನ ಪ್ರಖ್ಯಾತ ಸಂಗೀತಗಾರರಾದ ಪಂಡಿತ್ ಮಾಧವಗುಡಿ, ಪಂಡಿತ್ ವಿನಾಯಕ ತೊರ್ವಿ, ಪಂಡಿತ್ ಪರಮೇಶ್ವರ ಹೆಗಡೆ, ಪಂಡಿತ್ ಡಿ. ಕುಮಾರ ದಾಸ್, ಪಂಡಿತ್ ಆರ್ ವಿ ಶೇಷಾದ್ರಿಗವಾಯಿ, ವಿದುಷಿ ಕೃಷ್ಣಾ ಹಾನಗಲ್, ವಿದುಷಿ ಶಕುಂತಲಾ ನರಸಿಂಹನ್, ಉಭಯಗಾನ ವಿದುಷಿ ಶ್ಯಾಮಲಾ ಭಾವೆ, ಪಂಡಿತ್ ನರಸಿಂಹಲು ವಡವಟ್ಟಿ, ಪಂಡಿತ್ ಕುರುಡಿ ನಂದಕುಮಾರ್, ಪಂಡಿತ್ ನಾಗರಾಜ್ ಹವಾಲ್ದಾರ್, ಪಂಡಿತ್ ವಾಗೀಶ್ ಭಟ್, ಪಂಡಿತ್ ಡಾ. ಮೃತ್ಯುಂಜಯ ಶೆಟ್ಟರ್ ಮೊದಲಾದ ಅತಿರಥ ಮಹಾರಥರಿಗೆ ತಬಲಾ ಸಾಥ್ ನೀಡಿದ ಗೌರವಕ್ಕೆ ಪಾತ್ರರಾದ ಸತೀಶ್ ನಾಡಿನ ಅಗ್ರಮಾನ್ಯ ತಬಲಾವಾದಕರೆಂದು ಪ್ರಸಿದ್ಧರಾದರು. ಭಾರತದ ಉಪರಾಷ್ಟ್ರಪತಿಗಳಾಗಿದ್ದ ಬಿ.ಡಿ. ಜತ್ತಿ ಅವರಿಗೂ ಸತೀಶ್ ಅವರು ತಬಲಾ ಪಾಠ ಮಾಡಿದ್ದಾರೆ ಎಂಬುದು ಮರೆಯಲಾಗದ ಸ್ವಾರಸ್ಯಕರ ಸಂಗತಿ!
ಸತೀಶ್ ಅವರು ಗೃಹಸ್ಥಾಶ್ರಮವನ್ನು ಸ್ವೀಕರಿಸಿದ್ದು 1994ರಲ್ಲಿ. ಅದೇ ವರ್ಷದಲ್ಲಿ ಸದ್ಗುರು ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ ತನ್ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸತೊಡಗಿದರು. 2008ರಲ್ಲಿ ತಮ್ಮ ಸಂಗೀತ ಸಂಸ್ಥೆಯ ಮೂಲಕ 12 ಗಂಟೆಗಳ ಅವಧಿಯ ‘ವಚನ ನಿರಂತರ, ದಾಸ ನಿರಂತರ’ ಎಂಬ ಶೀರ್ಷಿಕೆಗಳಡಿಯಲ್ಲಿ ಸಂಗೀತೋತ್ಸವಗಳನ್ನು ಏರ್ಪಡಿಸಿದ್ದು ಸಂಗೀತ ಕ್ಷೇತ್ರದಲ್ಲಿ ಸದಾ ನೆನಪಿನಲ್ಲುಳಿಯುವ ಮೈಲಿಗಲ್ಲುಗಳು. 2011ರಲ್ಲಿ ಶತತಬಲಾ ವಾದನವನ್ನು ಆಯೋಜಿಸಿ ಸಾದರ ಪಡಿಸಿದರು.
ಅಲ್ಲದೆ ಇವರು ಆಯೋಜಿಸಿದ ರಾಗತರಂಗ, ಸದ್ಗುರು ಸಂಗೀತೋತ್ಸವ, ಸಂಗೀತ ಶ್ರಾವಣ, ಪಂಡಿತ್ ಭೀಮಸೇನ ಜೋಶಿಯವರು ನಿಧನರಾದ ಸಂದರ್ಭದಲ್ಲಿ ಏರ್ಪಡಿಸಿದ್ದ ಅಹೋರಾತ್ರಿ ಸ್ವರ ಶ್ರದ್ದಾಂಜಲಿ ಕಾರ್ಯಕ್ರಮ, ನಾಟಕ ಸೌರಭ, ಖಯಾಲ್ ಸಂಗೀತೋತ್ಸವ, ಏಕ ರಾಗ ಶೈಲಿ ಇವರ ಸಂಘಟನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ತಮ್ಮ ತಂದೆ-ತಾಯಿಯವರ ಸ್ಮರಣೆಯಲ್ಲಿ ಪ್ರತಿ ವರ್ಷವೂ ‘ಸ್ವರ ನಮನ’ ಎಂಬ ಶೀರ್ಷಿಕೆಯಡಿಯಲ್ಲಿ ಸಂಗೀತದ ಕಾರ್ಯಕ್ರಮಗಳನ್ನು ಆಯೋಜಿಸಿ ಹಿರಿಯರ ನೆನಪು ಚಿರಸ್ಥಾಯಿಯಾಗಿರುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. 2021ರಲ್ಲಿ ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿ ಖ್ಯಾತ ಕಲಾವಿದರನ್ನು ಕರೆಸಿ, ಗುರು ಗೌರವ ಪ್ರಶಸ್ತಿಯನ್ನು ನೀಡಿ ಗುರುವಂದನೆಯ ಸ್ಮರಣೆಯ ಕೆಲಸ ಮಾಡುತ್ತಿದ್ದಾರೆ. ಸುದೀರ್ಘ ನಲವತ್ತು ವರ್ಷಗಳ ವೃತ್ತಿ ಜೀವನದಲ್ಲಿ ಸದ್ದುಗದ್ದಲವಿಲ್ಲದೆ ತಮ್ಮಷ್ಟಕ್ಕೆ ತಾವು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರೀತಿಯಿಂದ ತೊಡಗಿಕೊಂಡು ನಿಷ್ಕಲ್ಮಶವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. 2023-24ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಇವರ ಅಪೂರ್ವ ಸಾಧನೆಗೆ ಸಂದ ಗೌರವ. ಇವರ ಯಶೋಯಾನ ಹೀಗೆ ಇನ್ನಷ್ಟು ಹುರುಪುಗಟ್ಟಿಕೊಂಡು ಮುಂದುವರಿಯಲಿ.
(ಲೇಖಕರು ಚಲನಚಿತ್ರ ನಟರು)