

ನವದೆಹಲಿ: ಕೋಲ್ಕತಾದ ಆರ್ಜಿ ಕರ್(RG Kar case) ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ಟ್ರೈನಿ ವೈದ್ಯೆಯ ತಂದೆ ಮಂಗಳವಾರ(ಅಕ್ಟೋಬರ್ 22) ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅಮಿತ್ ಷಾ ಅವರನ್ನು ಭೇಟಿಯಾಗಲು ಬಯಸಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.
ನಾನು ಅಭಯ(ಕಾಲ್ಪನಿಕ ಹೆಸರು)ಳ ತಂದೆ. ನೀವು ಸೂಚಿಸುವ ಯಾವುದೇ ಸ್ಥಳದಲ್ಲಿ ನಿಮ್ಮನ್ನು ಭೇಟಿಯಾಗಲು ಅವಕಾಶ ನೀಡಿ ಎಂದು ಗೌರವಯುತವಾಗಿ ವಿನಂತಿಸಲು ಈ ಪತ್ರವನ್ನು ನಾನು ಬರೆಯುತ್ತಿದ್ದೇನೆ. ದಯವಿಟ್ಟು ನಿಮ್ಮ ಭೇಟಿಗೆ ಅವಕಾಶ ಮಾಡಿಕೊಡಿ. ನಮ್ಮ ಮಗಳಿಗೆ ಘೋರ ಅನಿರೀಕ್ಷಿತ ಘಟನೆ ಸಂಭವಿಸಿದೆ. ಇದ್ದರಿಂದ ನಾನು ಮತ್ತು ನನ್ನ ಪತ್ನಿ ಇಬ್ಬರೂ ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದು ಈಗ ಅಸಹಾಯಕರಾಗಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಾನು ನನ್ನ ಹೆಂಡತಿಯೊಂದಿಗೆ ಪರಿಸ್ಥಿತಿಯ ಬಗ್ಗೆ ಕೆಲವು ವಿಷಯಗಳನ್ನು ಚರ್ಚಿಸಲು ಹಾಗೂ ನಿಮ್ಮ ಮಾರ್ಗದರ್ಶನ ಮತ್ತು ಸಹಾಯ ಪಡೆಯಲು ನಿಮ್ಮನ್ನು ಭೇಟಿಯಾಗಲು ಬಯಸುತ್ತಿದ್ದೇವೆ. ನಿಮ್ಮ ಅನುಭವ ಮತ್ತು ಮಾರ್ಗದರ್ಶನ ಅತ್ಯಮೂಲ್ಯವಾಗಿರುತ್ತದೆ. ನಮಗಾಗಿ ಎಲ್ಲಿ ಮತ್ತು ಯಾವಾಗ ನಿಮ್ಮ ಅತ್ಯಮೂಲ್ಯ ಸಮಯವನ್ನು ನೀಡಬಹುದು ಎಂಬುದನ್ನು ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದೇವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಅಮಿತ್ ಷಾ ಅವರು ನಮಗೆ ಸ್ವಲ್ಪ ಸಮಯ ಕೊಡುತ್ತಾರೆ ಎಂಬ ಭರವಸೆ ನನಗಿದೆ. ನಮ್ಮ ಮಗಳಿಗೆ ಇನ್ನೂ ನ್ಯಾಯ ಸಿಗದ ಕಾರಣ ನಾವು ಅನುಭವಿಸುತ್ತಿರುವ ಮಾನಸಿಕ ಸಂಕಟವನ್ನು ನಾನು ಅವರಿಗೆ ಹೇಳುತ್ತೇನೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ.
ಕೋಲ್ಕತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಶವ ಆಗಸ್ಟ್ 9ರಂದು ಬೆಳಗ್ಗೆ ಪತ್ತೆಯಾಗಿತ್ತು. ಅತ್ಯಾಚಾರದ ನಂತರ ಆಕೆಯನ್ನು ಹತ್ಯೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಇದು ದೃಢಪಟ್ಟಿದೆ. ಈ ಅಮಾನುಷ ಘಟನೆಯ ನಂತರ ಕಿರಿಯ ವೈದ್ಯರು ತಮ್ಮ ಸಹೋದ್ಯೋಗಿಗೆ ನ್ಯಾಯಕ್ಕಾಗಿ ಒತ್ತಾಯಿಸಿದರು ಮತ್ತು ಆಗಸ್ಟ್ 1 ರಿಂದ ಕೆಲಸ ಬಹಿಷ್ಕರಿಸುವ ಮೂಲಕ ಪ್ರತಿಭಟನೆಯನ್ನು ಪ್ರಾರಂಭಿಸಿದರು.
ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್ ಎಂಬ ನಾಗರಿಕ ಸ್ವಯಂಸೇವಕನನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ಸಂಜಯ್ ರಾಯ್ ಅವರ ಪಾಲಿಗ್ರಾಫ್ ಪರೀಕ್ಷೆ ನಡೆಸಿದೆ. ಆರ್ಜಿ ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಕೇಂದ್ರ ತನಿಖಾ ಸಂಸ್ಥೆ ಹಲವು ಸುತ್ತಿನ ವಿಚಾರಣೆ ನಡೆಸಿದೆ.(ಏಜೆನ್ಸೀಸ್)