

ನವದೆಹಲಿ: ಮಹಾರಾಷ್ಟ್ರ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯ ನಂತರ ಮತ್ತೆ ಬೆಳಕಿಗೆ ಬಂದಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್(Lawrence Bishnoi) ವಿರುದ್ಧ ಕ್ಷತ್ರಿಯ ಕರ್ಣಿ ಸೇನೆಯ ಹೇಳಿಕೆ ಹೊರಬಿದ್ದಿದೆ. ಕ್ಷತ್ರಿಯ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಡಾ.ರಾಜ್ ಶೇಖಾವತ್ ಅವರು ಲಾರೆನ್ಸ್ ಬಿಷ್ಣೋಯ್ ಅವರನ್ನು ಎನ್ಕೌಂಟರ್ ಮಾಡಿದ ಪೊಲೀಸರಿಗೆ 1 ಕೋಟಿ 11 ಲಕ್ಷದ 11 ಸಾವಿರದ 111 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ರಾಜ್ ಶೇಖಾವತ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಲಾರೆನ್ಸ್ ಬಿಷ್ಣೋಯಿ ಅವರನ್ನು ಎನ್ ಕೌಂಟರ್ ಮಾಡಿದ ಪೊಲೀಸರಿಗೆ 1,11,11,111 ರೂಪಾಯಿ ನೀಡಲಾಗುವುದು ಎಂದು ಹೇಳುವುದನ್ನು ವಿಡಿಯೋದಲ್ಲಿ ನಾವು ನೋಡಬಹುದು. ನಮ್ಮ ಅಮೂಲ್ಯ ರತ್ನ ಮತ್ತು ಪರಂಪರೆಯ ಅಮರ ಹುತಾತ್ಮ ಸುಖದೇವ್ ಅವರ ಹಂತಕ ಲಾರೆನ್ಸ್ ಬಿಷ್ಣೋಯ್ ಅವರನ್ನು ಎನ್ ಕೌಂಟರ್ ಮಾಡಿದ ಪೊಲೀಸರಿಗೆ ಕ್ಷತ್ರಿಯ ಕರ್ಣಿ ಸೇನೆ ಇದನ್ನು ನೀಡಲಿದೆ. ಅಷ್ಟೇ ಅಲ್ಲ ಆ ವೀರ ಪೊಲೀಸರ ಕುಟುಂಬದ ಸುರಕ್ಷತೆ ಮತ್ತು ಸಂಪೂರ್ಣ ವ್ಯವಸ್ಥೆಗೆ ನಾವು ಜವಾಬ್ದಾರರಾಗಿರುತ್ತೇವೆ ಎಂದು ಹೇಳಿದ್ದಾರೆ.
ಒಂದು ದಿನದ ಹಿಂದೆ ರಾಜ್ ಶೇಖಾವತ್ ವಡೋದರಾದಲ್ಲಿ ಲಾರೆನ್ಸ್ ಬಿಷ್ಣೋಯ್ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು. ಸುಖದೇವ್ ಸಿಂಗ್ ಗೊಗಮೇಡಿ ಹತ್ಯೆ ಪ್ರಕರಣದಲ್ಲೂ ಲಾರೆನ್ಸ್ ಬಿಷ್ಣೋಯ್ ಹೆಸರು ಕೇಳಿ ಬಂದಿದೆ ಎಂದು ಶೇಖಾವತ್ ಹೇಳಿದ್ದರು. ಲಾರೆನ್ಸ್ ಬಿಷ್ಣೋಯ್ ಮತ್ತು ಅವರಂತಹ ದರೋಡೆಕೋರರು ಇಡೀ ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ಶೇಖಾವತ್ ಹೇಳಿದ್ದರು.
ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಪ್ರಸ್ತುತ ಲಾರೆನ್ಸ್ ಬಿಷ್ಣೋಯ್ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾರೆ. ಏಪ್ರಿಲ್‌ನಲ್ಲಿ ಮುಂಬೈನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿ ಅವರ ಹೆಸರು ಕೂಡ ಕೇಳಿಬಂದಿತು.(ಏಜೆನ್ಸೀಸ್)