

ಕೋಲ್ಕತ: ಕಳೆದ ಒಂದೂವರೆ ತಿಂಗಳಿನಿಂದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು (RG Kar Case) ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಹತ್ಯೆ ಘಟನೆಯ ತನಿಖೆ ಬಿರುಸಿನಿಂದ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಅಫ್ಸರ್ ಅಲಿ ಖಾನ್ ಹಾಗೂ ಬಿಪ್ಲಬ್ ಸಿಂಗ್ ಮತ್ತು ಸುಮನ್ ಹಜ್ರಾರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ, ತನಿಖೆಗೆ ಒಳಪಡಿಸಿದರು. ಸದ್ಯ ಪ್ರಕರಣದ ತನಿಖೆಯನ್ನು ಸಿಬಿಐ (CBI) ಮತ್ತಷ್ಟು ಚುರುಕುಗೊಳಿಸುವ ಮೂಲಕ ಮಗಳನ್ನು ಕಳೆದುಕೊಂಡ ಪೋಷಕರಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದೇ ಆದರೂ ತನಿಖೆಯ ಪ್ರಕ್ರಿಯೆಯಲ್ಲಿ ಎದುರಾಗುತ್ತಿರುವ ಟ್ವಿಸ್ಟ್ಗಳಿಂದ ಬೆರಗಾಗಿದ್ದಾರೆ. ವೈದ್ಯೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದ ಸಮಯದಲ್ಲಿ ಕೆಲವು ಬದಲಾವಣೆಗಳು ಕಂಡುಬಂದಿವೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಟ್ರೈನಿ ವೈದ್ಯೆಯ ಶವಪರೀಕ್ಷೆ ವರದಿ ಮೇಲೆ ಅನುಮಾನ ವ್ಯಕ್ತಪಡಿಸಿರುವ ಸಿಬಿಐ ಅಧಿಕಾರಿಗಳು (CBI Officers), ಪ್ರಸ್ತುತ ನೀಡಿರುವ ವರದಿಗಳ ಪ್ರಕಾರ, ಯುವತಿ ಮೈಮೇಲೆ ಆದ ಗಾಯಗಳ ಸಂಖ್ಯೆ ಏನಿದೆಯೋ ಅದಕ್ಕಿಂತ ಹೆಚ್ಚಿನ ಗಾಯಗಳಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇಲ್ಲಿ ತೋರಿಸುವ ಸಂಖ್ಯೆಗಿಂತ ಗಾಯಗಳು ಹೆಚ್ಚಿವೆ ಎಂಬುದರಲ್ಲಿ ಅನುಮಾನವಿಲ್ಲ. ಶವಪರೀಕ್ಷೆ ವರದಿಯಲ್ಲಿ ಉಲ್ಲೇಖಿಸಿರುವ ಗಾಯಗಳು ಸಂಖ್ಯೆ ಕೊಟ್ಟಿರುವುದಕ್ಕಿಂತ ಅಧಿಕವಿದೆ ಎಂದು ಸಿಬಿಐ ಅಧಿಕಾರಿಗಳು ಶಂಕಿಸಿರುವುದಾಗಿ ವರದಿಯಾಗಿದೆ.
ಶವಪರೀಕ್ಷೆ ವರದಿಗಳ ಪ್ರಕಾರ, ವೈದ್ಯೆ ದೇಹದಲ್ಲಿ 15 ಬಾಹ್ಯ ಗಾಯಗಳು ಮತ್ತು ಒಂಬತ್ತು ಆಂತರಿಕ ಗಾಯಗಳಾಗಿವೆ. ಆದಾಗ್ಯೂ, ಬೆನ್ನಿನಲ್ಲಿ ಆಗಿರುವ ಗಾಯದ ಬಗ್ಗೆ ದಾಖಲೆಗಳ ಕೊರತೆಯು ತನಿಖಾಧಿಕಾರಿಗಳಲ್ಲಿ ಹೊಸ ಅನುಮಾನ ಹುಟ್ಟುಹಾಕಿದೆ. ವರದಿಗಳು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಸಾಧ್ಯತೆಯಿದೆ ಎಂದು ಸಿಬಿಐ ಅಧಿಕಾರಿಗಳು ಶಂಕಿಸಿದ್ದಾರೆ. ಶವಪರೀಕ್ಷೆಯನ್ನು ಹೇಗೆ ನಡೆಸಲಾಯಿತು ಎಂಬುದರ ಕುರಿತು ಗಂಭೀರ ಕಾರ್ಯವಿಧಾನದ ಸಮಸ್ಯೆಗಳನ್ನು ತನಿಖೆಯು ಗುರುತಿಸಿದೆ. ಆಗಸ್ಟ್ 9ರಂದು ಸೂರ್ಯಾಸ್ತದ ನಂತರ 70 ನಿಮಿಷಗಳಲ್ಲಿ ಈ ವಿಧಾನವನ್ನು ಪೂರ್ಣಗೊಳಿಸಲಾಗಿದೆ. ಟ್ರೈನಿ ವೈದ್ಯೆಯ ಮೃತದೇಹವು ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಬೆಳಗ್ಗೆ ಪತ್ತೆಯಾಯಿತು ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).