ಕಡೆಗೂ ವದಂತಿಗಳಿಗೆ ಬಿತ್ತು ತೆರೆ! ನಾಲ್ಕನೇ ಬಾರಿ ಸಪ್ತಪದಿ ತುಳಿಯಲು ರೆಡಿಯಾದ್ರು ಸ್ಟಾರ್​ ನಟಿ

ವಿಜಯವಾಣಿ-2024-10-01T163418.371
Published on

ತಮಿಳುನಾಡು: ಕಳೆದ ಹಲವು ತಿಂಗಳಿನಿಂದ ಡ್ಯಾನ್ಸ್​ ಕೋರಿಯೋಗ್ರಾಫರ್​ ಜತೆ ಈ ನಟಿ ಡೇಟಿಂಗ್ ಮಾಡುತ್ತಿದ್ದಾರೆ. ಇದು ಬಹುತೇಕ ಖಚಿತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದೆಲ್ಲಾ ಸುಳ್ಳು, ಈಗಾಗಲೇ ಆಕೆಗೆ ಮೂರು ಮದುವೆಯಾಗಿ, ದಾಂಪತ್ಯ (Marriage) ಜೀವನ ಮುರಿದುಬಿದ್ದಿದೆ. ಸ್ಟಾರ್​ ನಟ-ನಟಿಯರು ಅಂದಮೇಲೆ ಇಂತಹ ಊಹಾಪೋಹಗಳು ಸಾಮಾನ್ಯ ಎಂದಿದ್ದರು. ಆದ್ರೆ, ಇದೀಗ ಈ ಎಲ್ಲಾ ವದಂತಿಗಳು (Rumours) ನಿಜವಾಗಿದೆ.

ತಮಿಳು ನಟಿ ವನಿತಾ ವಿಜಯಕುಮಾರ್ ಇದೀಗ ನಾಲ್ಕನೇ ಮದುವೆಗೆ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆಯೇ ಈ ವಿಷಯದ ಬಗ್ಗೆ ಸಣ್ಣದಾಗಿ ವದಂತಿಗಳು ಹಬ್ಬಿದ್ದವು. ಆದ್ರೆ, ಅಷ್ಟಾಗಿ ಸದ್ದು ಮಾಡಿರಲಿಲ್ಲ. ಈಗ ಅವು ನಿಜವೆಂದು ಬದಲಾಗಿದ್ದು, ಕಡೆಗೂ ವದಂತಿಗಳಿಗೆ ತೆರೆ ಬಿದ್ದಿದೆ. ಬಹುದಿನಗಳಿಂದ ಪರಿಚಯ ಹೊಂದಿರುವ ಕೋರಿಯೋಗ್ರಾಫರ್​ ಜತೆ ಇದೀಗ ವನಿತಾ ಏಳು ಹೆಜ್ಜೆಯಿಡಲು ಮುಂದಾಗಿದ್ದಾರೆ. ಇದೇ ಅಕ್ಟೋಬರ್ 5ರಂದು ಮದುವೆ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಂಚಿಕೊಳ್ಳಲಾಗಿದೆ.

vanita

ಮೊದಲ ಎರಡು ಮದುವೆ

ವನಿತಾ ಹೆಸರಾಂತ ನಟ ವಿಜಯ್ ಕುಮಾರ್ ಅವರ ಹಿರಿಯ ಪುತ್ರಿ. 1995ರಲ್ಲಿ ‘ಚಂದ್ರಲೇಖಾ’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವನಿತಾ, ನಂತರದಲ್ಲಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು. 2000 ಇಸ್ವಿಯಲ್ಲಿ ನಟ ಆಕಾಶ್​ರನ್ನು ವಿವಾಹವಾದ ನಟಿ, 2005ರಲ್ಲಿ ಪತಿಯಿಂದ ವಿಚ್ಛೇದನ ಪಡೆದರು. ಈ ಜೋಡಿಗೆ ಒಬ್ಬ ಮಗ ಮತ್ತು ಮಗಳಿದ್ದರು. ದಾಂಪತ್ಯ ಜೀವನದಲ್ಲಿ ಒಂದಷ್ಟು ಸಮಸ್ಯೆಗಳಿಂದ ಇಬ್ಬರು ಬೇರ್ಪಟ್ಟರು. 2007 ರಲ್ಲಿ ಅವರು ಆನಂದ್ ಜಯದರ್ಶನ್ ಎಂಬ ಉದ್ಯಮಿಯನ್ನು ಎರಡನೇ ಬಾರಿಗೆ ವಿವಾಹವಾದರು. ಇವರಿಬ್ಬರಿಗೂ ಒಬ್ಬ ಪುತ್ರಿಯಿದ್ದಳು. ಐದು ವರ್ಷಗಳ ನಂತರ 2012ರಲ್ಲಿ ಇವರಿಂದಲೂ ವನಿತಾ ವಿಚ್ಛೇದನ ಪಡೆದುಕೊಂಡರು.

ಮೂರನೇ ಬಾರಿಗೆ ಮದುವೆಯಾಗಲಿಲ್ಲ

ಕೆಲವು ವರ್ಷಗಳ ಕಾಲ ಅವರು ನೃತ್ಯ ನಿರ್ದೇಶಕ ರಾಬರ್ಟ್ ಅವರೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ ಎಂಬ ಗುಮಾನಿ ಹರಡಿತ್ತು. ಆದರೆ, ಇದು ನಿಜ ಎಂದು ಅಂದು ಸಾಬೀತಾಗಿರಲಿಲ್ಲ. ಆದ್ರೆ, 2020ರಲ್ಲಿ ನಟಿ ವನಿತಾ ಅವರು ಮೂರನೇ ಬಾರಿಗೆ ಮದುವೆಯಾಗಲು ನಿರ್ಧರಿಸಿದರು. ಈ ವೇಳೆ ಛಾಯಾಗ್ರಾಹಕ ಪೀಟರ್ ಪಾಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಇಚ್ಛಿಸಿ, ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದ್ರೆ, ನಾಲ್ಕೇ ತಿಂಗಳಲ್ಲಿ ಈ ಮದುವೆ ಸಂಬಂಧ ಮುರಿದುಬಿತ್ತು ಎಂದು ಸ್ವತಃ ನಟಿಯೇ ಅಂದು ಸ್ಪಷ್ಟಪಡಿಸಿದ್ದರು.

actress

ಈಗ ನಾಲ್ಕನೇ ಮದುವೆ

ಇದೆಲ್ಲದರ ಹೊರತಾಗಿ ಈ ಹಿಂದೆ ವನಿತಾ ಕೋರಿಯೋಗ್ರಾಫರ್​ ರಾಬರ್ಟ್​ ಜತೆ ಸಹಬಾಳ್ವೆ ನಡೆಸಿದ್ದರು ಎಂಬ ಸುದ್ದಿ ಹರಿದಾಡಿತ್ತು. ಆದ್ರೆ, ಈಗ ಅದು ನಿಜ ಎನ್ನಲಾಗಿದ್ದು, ನಾಲ್ಕನೇ ಮದುವೆಯಾಗಲು ಹೊರಟಿದ್ದಾರೆ ಎಂಬುದಕ್ಕೆ ವೈರಲ್ ಆಗ್ತಿರುವ ಮದುವೆ ಪೋಸ್ಟರ್​ ಸಾಕ್ಷಿಯಾಗಿದೆ. ಇದು ನಟಿಯೇ ಹಂಚಿಕೊಂಡಿರುವುದಾ ಅಥವಾ ಅವರ ಆಪ್ತ ಮೂಲಗಳಿಂದ ವೈರಲ್ ಆಗಿರುವುದಾ ಎಂಬುದು ಮಾತ್ರ ಸದ್ಯ ಸ್ಪಷ್ಟವಾಗಿಲ್ಲ. ಪ್ರಸ್ತುತ ವನಿತಾಗೆ 43 ವರ್ಷ ವಯಸ್ಸು. ಅವರ ಪುತ್ರಿ ಜೋವಿಕಾ ಕೂಡ ಅವರಂತೆಯೇ ಬಿಗ್ ಬಾಸ್ ತಮಿಳು ಸೀಸನ್ 7ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಈಗ ಅವರು ನಾಯಕ ನಟಿಯಾಗಿ ಚಿತ್ರರಂಗ ಪ್ರವೇಶಿಸಲು ರೆಡಿಯಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net