RG Kar Case | ಸಿಬಿಐ ಚಾರ್ಚ್​​ಶೀಟ್​ನಲ್ಲಿ ಮಾಜಿ ಪ್ರಾಂಶುಪಾಲ, ಪೊಲೀಸ್​ ಅಧಿಕಾರಿ ಹೆಸರು ಸೇರ್ಪಡೆ: ವರದಿ

rg kar case
Published on

ಕೋಲ್ಕತ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು (RG Kar Case) ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಹತ್ಯೆ ಘಟನೆಯ ತನಿಖೆ ಚುರುಕಾಗಿ ಸಾಗುತ್ತಿದ್ದು, ಈಗಾಗಲೇ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್​ ಘೋಷ್​​ ಮತ್ತು ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಆಫೀಸರ್​ ಆಗಿ ಕೆಲಸ ಮಾಡುತ್ತಿದ್ದ ಅಫ್ಸರ್ ಅಲಿ ಖಾನ್ ಹಾಗೂ ಬಿಪ್ಲಬ್ ಸಿಂಗ್ ಮತ್ತು ಸುಮನ್ ಹಜ್ರಾರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ, ತನಿಖೆಗೆ ಒಳಪಡಿಸಿದರು. ಸದ್ಯ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಬಿಐ (CBI) ತಮ್ಮ ಮಗಳನ್ನು ಕಳೆದುಕೊಂಡ ಪೋಷಕರಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದೆ. ಇದೀಗ ವರದಿಗಳ ಪ್ರಕಾರ, ಆರ್​ಜಿ ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲ ಮತ್ತು ಕೋಲ್ಕತ ನಗರ ಪೊಲೀಸ್​ ಅಧಿಕಾರಿ ಹೆಸರು ಚಾರ್ಚ್​ಶೀಟ್​ನಲ್ಲಿ ಉಲ್ಲೇಖವಾಗಲಿದೆ ಎಂದು ಹೇಳಲಾಗಿದೆ.

ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಿಬಿಐ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಸಾಕ್ಷ್ಯ ನಾಶಪಡಿಸುವ ಮುಖೇನ ಅಪರಾಧ ಮರೆಮಾಚಲು ಮುಂದಾದ ಕೋಲ್ಕತ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಗಂಭೀರವಾಗಿ ಆರೋಪಿಸಿ, ಅದಕ್ಕೆ ಸಂಬಂಧಿಸಿದಂತೆ ಪೂರಕ ಆರೋಪಪಟ್ಟಿ ಸಲ್ಲಿಸಲು ಯೋಜಿಸುತ್ತಿದೆ ಎಂದು ಮೂಲಗಳು ಮಾಹಿತಿ ಹಂಚಿಕೊಂಡಿವೆ.

ಕೋಲ್ಕತ್ತಾ ಪೊಲೀಸರಿಂದ ತನಿಖೆಯನ್ನು ಕೈಗೆತ್ತಿಕೊಂಡ ನಂತರ ಕೇಂದ್ರ ತನಿಖಾ ಸಂಸ್ಥೆಯು ಸೋಮವಾರ (ಅ.07) ತನ್ನ ಮೊದಲ ಚಾರ್ಜ್‌ಶೀಟ್ ಅನ್ನು ಸೀಲ್ದಾ ನ್ಯಾಯಾಲಯಕ್ಕೆ ಸಲ್ಲಿಸಿತು. ಇದರಲ್ಲಿ ಕೋಲ್ಕತ ಪೊಲೀಸ್ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್, ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪ ಹೊರಿಸಲಾಗಿದೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 64 ಮತ್ತು 66 ಮತ್ತು ಕೊಲೆಗೆ ಸಂಬಂಧಿಸಿದ 103 (1) ರ ಅಡಿಯಲ್ಲಿ ಸಿಬಿಐ ರಾಯ್ ವಿರುದ್ಧ ಆರೋಪ ಹೊರಿಸಿದೆ ಮತ್ತು ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರದ ಸಾಧ್ಯತೆಯನ್ನು ತಳ್ಳಿಹಾಕಿದೆ.

ಆದಾಗ್ಯೂ, ಈ ಪ್ರಕರಣ ಮೊದಲು ವರದಿಯಾದ ಸಮಯದಲ್ಲಿ ಸಿಬಿಐ ತನ್ನ ಪ್ರಥಮ ಚಾರ್ಜ್‌ಶೀಟ್‌ನಲ್ಲಿ ಸಂದೀಪ್ ಘೋಷ್ ಮತ್ತು ಕೋಲ್ಕತ ಪೊಲೀಸ್ ಅಧಿಕಾರಿ ಅಭಿಜಿತ್ ಮೊಂಡಲ್ ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net