

ಶಿವಮೊಗ್ಗ: ನೌಕರರ ಪ್ರಾಮಾಣಿಕ ಕಾರ್ಯಗಳಿಂದ ಆಡಳಿತಾರೂಢ ಸರ್ಕಾರದ ಗೌರವ ಹೆಚ್ಚಾಗುತ್ತದೆ. ಕಾರ್ಯ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ನೌಕರರನ್ನು ಗುರುತಿಸಿ, ಗೌರವಿಸುವುದು, ತಪ್ಪುಗಳಿದ್ದಲ್ಲಿ ಕಿವಿಮಾತು ಹೇಳುವುದು ಉತ್ತಮ ಆಡಳಿತದ ಭಾಗ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ 2023ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ನೌಕರರು ಸರ್ಕಾರಕ್ಕೆ ಗೌರವ ತರುವ ನಿಟ್ಟಿನಲ್ಲಿ ಯಾವುದೇ ಲೋಪಗಳಾಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಮಾಡುವ ಕಾರ್ಯ ರಚನಾತ್ಮಕ, ಮಾದರಿಯಾಗಿ ಇರಬೇಕು ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘ ಕೈಗೊಂಡಿರುವ ಹಲವು ಮಹತ್ವದ ನಿರ್ಧಾರಗಳು ರಾಜ್ಯ ಸರ್ಕಾರದ ಚುನಾಯಿತ ಜನಪ್ರತಿನಿಧಿಗಳ ಗಮನಸೆಳೆದಿವೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಜೀವನ ನಿರ್ವಹಿಸುತ್ತಿರುವವರ ಹಿತಕಾಯುವ ನಿಟ್ಟಿನಲ್ಲಿಯೂ ಸಂಘಟನೆ ಹಲವು ಮಹತ್ವದ ನಿರ್ಣಯ ಕೈಗೊಳ್ಳಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್‌ಬಾನು, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್ ಇತರರಿದ್ದರು.