

ಶಿವಮೊಗ್ಗ: ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ಇದರಿಂದ ಜನಸಾಮಾನ್ಯರ ಜೀವನಮಟ್ಟ ಸುಧಾರಣೆಯಾಗಿದೆ ಎಂದು ಎಂಎಲ್‌ಸಿ ಬಲ್ಕಿಷ್ ಬಾನು ಹೇಳಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ವಾರ್ತಾ ಇಲಾಖೆಯಿಂದ ರಾಜ್ಯ ಸರ್ಕಾರದ 2 ವರ್ಷಗಳ ಸಾಧನೆ ಹಾಗೂ ಯೋಜನೆ ಬಿಂಬಿಸುವ ಕುರಿತ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ದೇಶ ಪ್ರಗತಿ ಆಗಬೇಕಾದರೆ ಎಲ್ಲರೂ ಆರ್ಥಿಕ, ಸಾಮಾಜಿಕವಾಗಿ ಸಬಲರಾಗಬೇಕು. ಈ ನಿಟ್ಟಿನಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ ಎಂದರು. ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ನೇರವಾಗಿ ಡಿಬಿಟಿ ಮೂಲಕ ಮನೆ ಯಜಮಾನಿಗೆ ಹಣ ತಲುಪುತ್ತಿದ್ದು, ಈ ಯೋಜನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿವೆ. ದೇಶದ ಇತರೆ ರಾಜ್ಯಗಳೂ ಈ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಗ್ಯಾರಂಟಿ ಯೋಜನೆಗಳು ಹೆಗ್ಗಳಿಕೆಗೆ ಪಾತ್ರವಾಗಿವೆ. ಗ್ರಾಮೀಣ ಭಾಗದ ಜನರ ಜೀವನ ಮಟ್ಟ ಸುಧಾರಿಸಿದೆ ಎಂದರು. ಮಹಿಳೆಯರ ಉಚಿತ ಪ್ರಯಾಣದಿಂದ ಸರ್ಕಾರಕ್ಕೆ ಯಾವುದೇ ರೀತಿ ನಷ್ಟ ಇಲ್ಲ. ಬದಲಾಗಿ ಸಾರಿಗೆ ಇಲಾಖೆಗೆ ಲಾಭವೇ ಆಗುತ್ತಿದೆ. ಸರ್ಕಾರದ ಯಾವುದೇ ಯೋಜನೆಗೆ ಅನುದಾನದ ಕೊರತೆ ಇಲ್ಲ. ಯುವನಿಧಿ ಯೋಜನೆಗೆ ಹೆಚ್ಚೆಚ್ಚು ಯುವಜನತೆ ನೋಂದಣಿ ಮಾಡಿಕೊಳ್ಳಬೇಕು. ಜನರು ತಮಗಾಗಿಯೇ ಇರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಪ್ರದರ್ಶನವು ಜೂ.26ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಲಭ್ಯವಿರಲಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರ್.ಮಾರುತಿ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ಮಧು, ಜಿಲ್ಲಾ ಸದಸ್ಯೆ ಭವ್ಯಾ ಕೃಷ್ಣಮೂರ್ತಿ, ಕೆಎಸ್‌ಆರ್‌ಟಿಸಿ ಡಿಟಿಒ ದಿನೇಶ್‌ಕುಮಾರ್ ಚನ್ನಗಿರಿ, ನಿಲ್ದಾಣಾಧಿಕಾರಿ ಕೃಷ್ಣಮೂರ್ತಿ, ವಿಭಾಗೀಯ ಭದ್ರತಾ ನಿರೀಕ್ಷಕ ಜಿ.ಮಂಜುನಾಥ್ ಇತರರಿದ್ದರು.
ಸರ್ವರಿಗೂ ಗುಣಮಟ್ಟದ ಆರೋಗ್ಯ ಸೌಲಭ್ಯ, ಕೃಷಿ ಹೊಂಡ ನಿರ್ಮಾಣ, ಹಸಿವುಮುಕ್ತ ಕರ್ನಾಟಕ್ಕಾಗಿ ಇಂದಿರಾ ಕ್ಯಾಂಟೀನ್, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ, ಶುಲ್ಕ ವಿನಾಯಿತಿ, ವಸತಿ ಶಾಲೆಗಳಿಗೆ ಪ್ರವೇಶ, ಕಂದಾಯ ಗ್ರಾಮಗಳ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಸೇರಿ ಹಲವಾರು ಜನಪರ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಎಚ್.ಎಸ್.ಸುಂದರೇಶ್, ಸೂಡಾ ಅಧ್ಯಕ್ಷ