ಇ-ಆಫೀಸ್‌ನಲ್ಲಿ ಕಂದಾಯ ಸೇವೆ

New Project (1)
Published on

ಬೆಂಗಳೂರು: ಪಾರದರ್ಶಕ ಸೇವೆ, ಲಂಚ ಆರೋಪಮುಕ್ತ, ದಲ್ಲಾಳಿಗಳ ಹಾವಳಿ ತಪ್ಪಿಸಲು ಕಂದಾಯ ಇಲಾಖೆಯನ್ನು ಮುಂದಿನ 1 ತಿಂಗಳಲ್ಲಿ ಇ-ಕಚೇರಿಯಾಗಿ ಮಾರ್ಪಾಡು ಮಾಡಿಕೊಳ್ಳಲು ನಿರ್ಧರಿಸಿದೆ.

ವಿಕಾಸಸೌಧದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ, ಆನಂತರ ಸುದ್ದಿಗೋಷ್ಠಿ ನಡೆಸಿದರು. ಜನರಿಗೆ ಪಾರದರ್ಶಕ ಸೇವೆ ನೀಡುವುದರ ಜತೆಗೆ ದಲ್ಲಾಳಿಗಳ ಹಾವಳಿ ತಪ್ಪಿಸಲು ಒಂದು ತಿಂಗಳಲ್ಲಿ ಗ್ರಾಮ ಆಡಳಿತಾಧಿಕಾರಿಯಿಂದ(ವಿಎ) ಕಂದಾಯ ಸಚಿವರ ಕಚೇರಿವರೆಗೂ ಇ-ಕಚೇರಿ ಅಥವಾ ಇ-ಆಡಳಿತ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಹೇಳಿದರು.

ಈ ನಿಟ್ಟಿನಲ್ಲಿ 8,357 ವಿಎಗಳ ಪೈಕಿ 7,405 ವಿಎಗಳಿಗೆ ಕಚೇರಿ ನೀಡಲಾಗಿದೆ. 4 ಸಾವಿರ ವಿಎಗಳಿಗೆ ಲ್ಯಾಪ್‌ಟಾಪ್ ನೀಡಿದ್ದು, ಉಳಿದವರು ನಾಡ ಕಚೇರಿಯ ಕಂಪ್ಯೂಟರ್ ಬಳಸುವಂತೆ ಅನುಮತಿ ನೀಡಲಾಗಿದೆ. 6,600 ವಿಎಗಳಿಗೆ ಲಾಗಿನ್ ಐಡಿ ಸೃಜನೆ ಮಾಡಿದ್ದು, ಪ್ರತಿಯೊಂದು ದಾಖಲೆಯನ್ನು ಇ-ಆಫೀಸ್‌ನಲ್ಲಿಯೇ ಪರಿಶೀಲನೆ ನಡೆಸಿ ಇ-ಸಹಿ ಮಾಡಿ ಮೇಲಾಧಿಕಾರಿಗಳ ಕಚೇರಿಗೆ ರವಾನಿಸುವ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ಕೃಷ್ಣಬೈರೇಗೌಡ ಮಾಹಿತಿ ನೀಡಿದರು.

ರಾಜ್ಯ ವ್ಯಾಪಿ ಕೈಗೊಂಡಿರುವ ದರ್ಖಾಸ್ತು ಪೋಡಿ ‘ನನ್ನ ಭೂಮಿ’ಅಭಿಯಾನಕ್ಕೆ ವೇಗ ನೀಡಲಾಗಿದೆ. ರೈತರಿಗೆ ಕಾಯದೆ ಇ-ಕಚೇರಿಯಲ್ಲಿ ಸ್ವಯಂ ಪ್ರೇರಿತ ಸ್ವಯಂ ಪ್ರೇರಿತ ಅರ್ಜಿ ಸೃಜನೆ ಮಾಡಿ ಕಾನೂನಾತ್ಮಕವಾಗಿ 8 ತಿಂಗಳಲ್ಲಿ 1.09 ಲಕ್ಷ ದರ್ಖಾಸ್ತು ಪೋಡಿ ಮಾಡಲಾಗಿದೆ. ಡಿಸೆಂಬರ್ ಒಳಗೆ 2 ಲಕ್ಷಕ್ಕೆ ಮುಟ್ಟಬೇಕೆಂದು ಟಾರ್ಗೆಟ್ ನೀಡಲಾಗಿದೆ. ಇದರಿಂದ 7 ಲಕ್ಷ ಕುಟುಂಬಗಳಿಗೆ ಅನುಕೂಲ ಆಗಲಿದೆ. 3-4 ದಶಕಗಳ ಹಿಂದೆ ರೈತರಿಗೆ ದರ್ಖಾಸ್ತು ಜಮೀನು ಮಂಜೂರು ಮಾಡಲಾಗಿತ್ತು. ಆದರೆ, ಪೋಡಿ ಮಾಡಿಕೊಟ್ಟಿರಲಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನನ್ನ ಭೂಮಿ ಹೆಸರಿನಲ್ಲಿ ಅಭಿಯಾನ ಕೈಗೊಳ್ಳಲಾಗಿದೆ ಎಂದರು.

ಡಿಸೆಂಬರ್‌ನಲ್ಲಿ 1.62 ಲಕ್ಷ ಹಕ್ಕುಪತ್ರ ವಿತರಣೆ

ಹಾಡಿ, ಹಟ್ಟಿ, ತಾಂಡಾ, ಮಜರೆ ಗ್ರಾಮಗಳನ್ನು ಸಾಂಪ್ರದಾಯಿಕ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ 2017ರಲ್ಲಿ ಕಾನೂನು ರಚಿಸಿತ್ತು. 2023ರವರೆಗೆ ಕೇವಲ 2,626 ಗ್ರಾಮಗಳನ್ನು ಗುರುತಿಸಿ 1500 ಕಂದಾಯ ಗ್ರಾಮ ಎಂದು ಘೋಷಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ 4,250 ಜನ ವಸತಿ ಪ್ರದೇಶಗಳನ್ನು ಗುರುತಿಸಿದ್ದು, ಡಿಸೆಂಬರ್ ಒಳಗೆ ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಸೂಚಿಸಲಾಗಿದೆ ಎಂದರು. ಮೇನಲ್ಲಿ 1.11 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನೂ 1.62 ಲಕ್ಷ ಕುಟುಂಬದ ಫಲಾನುಭವಿಗಳಿಗೆ ತಹಸೀಲ್ದರ್‌ಯಿಂದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿ ಇ-ಖಾತಾದೊಂದಿಗೆ ಹಕ್ಕುಪತ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಗುರಿ ನೀಡಲಾಗಿದೆ ಎಂದು ತಿಳಿಸಿದರು.

ಪ್ರೋತ್ಸಾಹ ಧನ

ರಾಜ್ಯದಲ್ಲಿ 52 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿ ಮುಂದುವರಿಯುತ್ತಿದೆ. ಇ-ಪೌತಿ ಖಾತೆ ಅಭಿಯಾನ ಕೈಗೊಂಡಿದ್ದು, ಆನ್‌ಲೈನ್‌ನಲ್ಲಿ ಸ್ವಯಂ ಪ್ರೇರಿತವಾಗಿ ಅರ್ಜಿಯನ್ನು ಸೃಷ್ಟಿಸಿಕೊಂಡು ವಿಲೇವಾರಿ ಮಾಡಲಾಗುತ್ತಿದೆ. ಇಲ್ಲಿಯವರೆಗೂ 2.30 ಲಕ್ಷ ಆಸ್ತಿಗಳು ಪೌತಿ ಖಾತೆ ಮಾಡಲು ಸಾಧ್ಯವಾಗಿದೆ. ಈ ಸೇವೆಗೆ ವೇಗ ನೀಡಲು ವಿಎ ಮತ್ತು ಗ್ರಾಮ ಸೇವಕರಿಗೆ 1 ಖಾತೆ ವರ್ಗಾವಣೆಗೆ ತಲಾ 3 ರೂ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಪೌತಿ ಖಾತೆ ಆಗದಿದ್ದರೇ ಕೇಂದ್ರ ಸರ್ಕಾರದ ಪಿಎಂ ಕಿಸಾನ್, ಹನಿ ನೀರಾವರಿ ಮತ್ತು ಯಂತ್ರೋಪಕರಣ ಖರೀದಿ ಸಬ್ಸಿಡಿ ನೀಡದಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದರಿಂದ ಇ-ಪೌತಿ ಆಂದೋಲಕ್ಕೆ ಚುರುಕು ನೀಡಲಾಗಿದೆ ಎಂದು ಸಚಿವರು ಹೇಳಿದರು.

ಜಲಾಶಯ ನೀರಿನ ಬಳಕೆಗಿರಲಿ ಎಚ್ಚರ

6-7 ಜಿಲ್ಲೆಗಳಲ್ಲಿ ವಾಡಿಕೆಗಿಂತ ತುಸು ಕಡಿಮೆ ಮಳೆಯಾಗಿದೆ. ಒಂದೆರಡು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಿದ್ದು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸೂಚನೆ ಇದೆ. ಆಗಸ್ಟ್ ಅಂತ್ಯಕ್ಕೆ ಮಳೆ ಪ್ರಮಾಣ ಸುಧಾರಣೆಯಾಗಲಿದೆ. ಪ್ರಸ್ತುತ ಜಲಾಶಯಗಳಿಗೆ ಒಳಹರಿವು ಹೆಚ್ಚಿದ್ದು, ಸೆಪ್ಟೆಂಬರ್, ಅಕ್ಟೋಬರ್ ಪರಿಸ್ಥಿತಿ ಹೀಗೆ ಇರುತ್ತದೆ. ಹೀಗಾಗಿ ಜಿಲ್ಲಾಧಿಕಾರಿಗಳು ಜಲಾಶಯಗಳಲ್ಲಿನ ನೀರಿನ ಬಳಕೆಯ ಮೇಲೆ ಹೆಚ್ಚು ನಿಗಾವಹಿಸುವುದು ಉತ್ತಮ ಎಂದು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net