

ಗುಂಡ್ಲುಪೇಟೆ: ಪಟ್ಟಣದ ತಾಲೂಕು ಕಚೇರಿಯ ದಾಖಲೆಗಳ ಕೊಠಡಿಗೆ ಶೌಚಾಲಯದ ನೀರು ಹರಿದು ಬಹುತೇಕ ಕಂದಾಯ ದಾಖಲೆಗಳು ನೀರುಪಾಲಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮಿನಿ ವಿಧಾನಸೌಧದಲ್ಲಿರುವ ಕಂದಾಯ ಇಲಾಖೆಯು ತನ್ನ ಹೆಚ್ಚಿನ ದಾಖಲೆಗಳನ್ನು ಕೊಠಡಿ ಸಂಖ್ಯೆ 29ರಲ್ಲಿ ಸಂಗ್ರಹಿಸಿಟ್ಟಿದೆ. ಈ ಕೊಠಡಿಗೆ ಹೊಂದಿಕೊಂಡತೆ ಸಮೀಪದಲ್ಲಿಯೇ ಶೌಚಗೃಹವಿದ್ದು, ಇಲ್ಲಿಂದ ಸೋರಿಕೆಯಾದ ನೀರು ಕೊಠಡಿಗೆ ಹರಿದಿದೆ. ದಾಖಲೆಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಲು ಅಗತ್ಯ ಸೆಲ್ಫ್‌ಗಳು ಇಲ್ಲವಾದ್ದರಿಂದ ಕಂತೆಕಟ್ಟಿ ನೆಲದ ಮೇಲೆ ಪೇರಿಸಿಡಲಾಗಿತ್ತು. ಆದರೆ ಈ ಕೊಠಡಿಗೆ ಹೊಂದಿಕೊಂಡಿರುವ ಶೌಚಗೃಹದ ಪೈಪ್ ಒಡೆದು ದಾಖಲೆಗಳನ್ನು ಇಟ್ಟಿರುವ ಕೊಠಡಿಗೆ ನುಗ್ಗಿದ್ದರಿಂದ ನೆಲದಲ್ಲಿ ಇಟ್ಟಿದ್ದ ಎಲ್ಲಾ ಫೈಲ್‌ಗಳೂ ಒದ್ದೆಯಾಗಿವೆ.
ಸೋಮವಾರ ಕೊಠಡಿಯಿಂದ ನೀರು ಹೊರಗೆ ಹರಿದು ಬರುತ್ತಿರುವುದನ್ನು ಕಂಡ ಸಿಬ್ಬಂದಿ ಅಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಗಳು ನೀರಿನಲ್ಲಿ ತೊಯ್ದಿದ್ದ ಎಲ್ಲ ಫೈಲ್ಸ್ ಹೊರತಂದು ಟೆರೇಸ್ ಮೇಲೆ ಬಿಸಿಲಿನಲ್ಲಿ ಒಣಗಿಸಿದರು.
ಈ ವೇಳೆ ತಮ್ಮ ಕೆಲಸ, ಕಾರ್ಯಗಳಿಗೆ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರು ಕಂದಾಯ ದಾಖಲೆಗಳು ನೀರಿನಲ್ಲಿ ಒದ್ದೆಯಾಗಿರುವುದನ್ನು ಕಂಡು ಅಚ್ಚರಿಗೊಳಗಾದರು. ಎಲ್ಲ ದಾಖಲೆಗಳನ್ನು ಕೊಠಡಿಯೊಳಗೆ ಬೀಸಾಡುತ್ತಿದ್ದಾರೆ. ಯಾವುದೇ ದಾಖಲೆಗಳನ್ನು ಕೇಳಿದರೂ ಸಾರ್ವಜನಿಕರಿಗೆ ಕೊಡದೆ ಹಿಂಬರಹ ನೀಡುತ್ತಿದ್ದಾರೆ ಎಂದು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದರು.