

ಬೆಂಗಳೂರು: ಭೂಮಿಯ ಖಾತಾ ಪೋಡಿ ಮಾಡಿಕೊಡಲು 28 ಲಕ್ಷ ರೂ. ಲಂಚಕ್ಕೆ ಬೇಡಿಕೆಯೊಡ್ಡಿದ್ದ ಕಂದಾಯ ನಿರೀಕ್ಷಕ ಲೋಕಾಯುಕ್ತ ಪೊಲೀಸರಿಗೆ ರೆಡ್‌ಹ್ಯಾಂಡ್ ಆಗಿ ಸೆರೆಸಿಕ್ಕಿದ್ದಾನೆ. ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಮಾದಾವಾರ ವೃತ್ತದ ಆರ್‌ಐ ವಸಂತ್ ಬಂಧಿತ.
ಖಾಸಗಿ ಹೋಟೆಲ್‌ನಲ್ಲಿ ದೂರುದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿದ್ದಾರೆ.
ಸುಂಕದಕಟ್ಟೆ ನಿವಾಸಿ ಬೆಟ್ಟಸ್ವಾಮಿ ಗೌಡ, ಕೃಷಿ ಭೂಮಿಗೆ ಖಾತಾ ಪೋಡಿ ಮಾಡಿ ಪ್ರತ್ಯೇಕ ಸರ್ವೇ ನಂಬರ್ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ ಆರ್‌ಐ ವಸಂತ್, ಕೆಲಸ ಮಾಡಿಕೊಡಲು 28 ಲಕ್ಷ ರೂ. ಲಂಚಕ್ಕೆ ಬೇಡಿಕೆ ಒಡ್ಡಿದ್ದರು.
ಇದರಲ್ಲಿ 3.5 ಲಕ್ಷ ರೂ. ನಗದು ಮತ್ತು 4 ಲಕ್ಷ ರೂ. ಮೌಲ್ಯದ ಚೆಕ್ ಪಡೆದಿದ್ದರು. ಉಳಿಕೆ ಹಣ ಕೊಡುವಂತೆ ಒತ್ತಾಯ ಮಾಡಿದ್ದರು. ಲೋಕಾಯುಕ್ತ ಪೊಲೀಸರಿಗೆ ಬೆಟ್ಟಸ್ವಾಮಿ ಗೌಡ ದೂರು ಸಲ್ಲಿಸಿದ್ದರು. ಇನ್‌ಸ್ಪೆಕ್ಟರ್ ಮಂಜುನಾಥ್ ಹೂಗಾರ್ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡಿತ್ತು.
ಇಸ್ಕಾನ್ ದೇವಸ್ಥಾನದ ಬಳಿಯ ಸಿರಿ ದರ್ಶನಿ ಹೋಟೆಲ್‌ನಲ್ಲಿ ವಸಂತ್ ಮತ್ತು ಆತನ ಕಾರು ಚಾಲಕ, ದೂರುದಾರರ ಕಡೆಯಿಂದ 4 ಲಕ್ಷ ರೂ. ಸ್ವೀಕರಿಸುತ್ತಿದ್ದರು. ಆಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಬಂಧಿಸಿ 4 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ಆರೋಪಿಯ ಮನೆಯಲ್ಲಿ ಶೋಧ ನಡೆಸಿ 3.5 ಲಕ್ಷ ರೂ. ನಗದು ಮತ್ತು 4 ಲಕ್ಷ ರೂ. ಮೌಲ್ಯದ ಚೆಕ್ ವಶಕ್ಕೆ ಪಡೆದಿದ್ದಾರೆ.