

ಬೆಂಗಳೂರು: ರಾಜ್ಯದ ಖಜಾನೆಗೆ ಆದಾಯ ತರುವ ಆದಾಯದ ಮೂಲಗಳಲ್ಲಿ ಒಂದಾದ ಅಬಕಾರಿ ಕ್ಷೇತ್ರದ ಮೇಲೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತಡ ಹೇರುತ್ತಿದೆ. ಅವೈಜ್ಞಾನಿಕ ಅಬಕಾರಿ ನೀತಿಯಿಂದ ರಾಜ್ಯದ ಬೊಕ್ಕಸಕ್ಕೆ ಆದಾಯ ಹೆಚ್ಚುವ ಬದಲು ಖೋತಾ ಆಗುವ ಸಾಧ್ಯತೆಗಳಿವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಸಿದ್ದಾರೆ.
ಅಪಾಯಕಾರಿ ನೀತಿಗಳ ಮೂಲಕ ಅಬಕಾರಿ ಆದಾಯದ ಮೂಲಕ್ಕೆ ಕೊಡಲಿ ಪೆಟ್ಟು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಸಂಪನ್ಮೂಲ ಸಂಗ್ರಹಕ್ಕೆ ಸರ್ಕಾರ ಅನುಸರಿಸುತ್ತಿರುವ ಮಾರ್ಗ ಉದ್ಯಮ, ವಹಿವಾಟಿಗೆ ಮಾರಕವಾಗಿದೆ ಎಂದು ಟೀಕಿಸಿದ್ದಾರೆ.
ದರ ಮತ್ತು ಸನ್ನದು ಶುಲ್ಕ ಏರಿಕೆಗೂ ಒಂದು ಮಾನದಂಡ ಇರುತ್ತದೆ. ಆದರೆ ಒಂದೇ ವರ್ಷದಲ್ಲಿ ಮದ್ಯ ಮಾರಾಟ ಮತ್ತು ಸನ್ನದು ಶುಲ್ಕವನ್ನು ಅಡ್ಡಾದಿಡ್ಡಿ ಹೆಚ್ಚಿಸುತ್ತಿರುವುದು ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಬಜೆಟ್‌ನಲ್ಲಿ ಯಾವುದೇ ತೆರಿಗೆ ಹಾಕಿಲ್ಲ ಎಂದು ಬೆನ್ನು ತಟ್ಟಿಕೊಂಡು ನಂತರದಲ್ಲಿ ಆಲ್ಕೊಹಾಲ್ ದರಗಳನ್ನು ಯದ್ವಾತದ್ವಾ ಹೆಚ್ಚಿಸಿದ್ದಾರೆ. ಅದರಲ್ಲೂ ಬಿಯರ್ ದರ ವರ್ಷದಲ್ಲಿ 2-3 ಸಲ ಹೆಚ್ಚಿಸಿ, ಗ್ರಾಹಕರಿಗೆ ದೊಡ್ಡ ಹೊರೆ ಹೊರಿಸಲಾಗಿದೆ. ಮದ್ಯಪ್ರಿಯರು ಪ್ರತಿಭಟಿಸುವುದಿಲ್ಲ ಎಂಬ ಕಾರಣಕ್ಕೆ ಇಂತಹ ಕ್ರಮ ಅನುಸರಿಸುವುದು ಒಳ್ಳೆಯದಲ್ಲ ಎಂದು ಆಕ್ಷೇಪಿಸಿದ್ದಾರೆ.
ಸರಿಯಾದ ಆರ್ಥಿಕ ಶಿಸ್ತು ಮತ್ತು ಪೂರ್ವ ಸಿದ್ಧತೆಗಳಿಲ್ಲದೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಇದರಿಂದ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತ ಗೊಂಡಿವೆ. ಬೊಕ್ಕಸ ಬರಿದಾಗಿ ಸರ್ಕಾರ ದಿವಾಳಿಯಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಆರ್ಥಿಕ ಪರಿಸ್ಥಿತಿ ಸರಿಪಡಿಸಿಕೊಳ್ಳಲು ಹೆಣಗುತ್ತಿರುವ ಸರ್ಕಾರ, ಸಿಕ್ಕ ಸಿಕ್ಕ ಎಲ್ಲ ವಸ್ತುಗಳ ದರ ಹೆಚ್ವಿಸಿದ್ದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಹೀಗಾಗಿ ಇಂತಹ ದರ ಮತ್ತು ಶುಲ್ಕ ಹೆಚ್ಚಳದಂತಹ ವಾಮ ಮಾರ್ಗಗಳ ಮೂಲಕ ಸರ್ಕಾರ ಉದ್ಯಮವನ್ನು ಶೋಷಣೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಮದ್ಯ ಉತ್ಪಾದನೆ, ಬಾಟ್ಲಿಂಗ್, ಮಾರಾಟ ಮಳಿಗೆಗಳು ಸೇರಿ ಎಲ್ಲ ಸ್ವರೂಪದ ಶುಲ್ಕಗಳನ್ನು ಶೇಕಡ ನೂರರಷ್ಟು ಹೆಚ್ಚಳಕ್ಕೆ ಮುಂದಾಗಿದೆ. ಇದಕ್ಕಾಗಿ ಅಬಕಾರಿ ಕಾನೂನುಗಳಿಗೆ ತಿದ್ದುಪಡಿ ಮಾಡಿ ಕರಡು ನಿಯಮಗಳ ಅಧಿಸೂಚನೆಯನ್ನು ಪ್ರಕಟಿಸಿದೆ. ಜುಲೈ 1 ರಿಂದ ಪರಿಷ್ಕೃತ ದರಗಳು ಜಾರಿಗೊಳ್ಳಲಿವೆ. ಆ ಮೂಲಕ ಉದ್ಯಮದ ಅಂತ್ಯಕ್ಕೆ ಮೊಳೆ ಹೊಡೆದಂತಾಗಲಿದೆ.
ಇಲಾಖೆಗೆ 40 ಸಾವಿರ ಕೋಟಿಯ ಗುರಿ ನಿಗದಿ ಮಾಡಲಾಗಿದೆ. ಇದನ್ನು ತಲುಪಲು ಅಧಿಕಾರಿಗಳು ಇದ್ದಬದ್ದ ಎಲ್ಲಾ ಅವಕಾಶಗಳನ್ನು ಬಳಕೆ ಮಾಡುತ್ತಿದ್ದಾರೆ. ಆ ಮೂಲಕ ಉದ್ಯಮವನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ.
ಉದ್ಯಮ, ಮಾರಾಟಗಾರರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಅವೈಜ್ಞಾನಿಕ ಕ್ರಮಗಳನ್ನು ಕೈಬಿಟ್ಟು, ಸನ್ನದು ಶುಲ್ಕ ಪರಿಷ್ಕರಣೆ ಮರು ಪರಿಶೀಲಿಸಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.