

ಶಿವು ಹುಣಸೂರು: 55 ದಿನಗಳ ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ತಾಲೂಕು ಆಡಳಿತ ಕರೊನಾ ನಿಯಂತ್ರಿಸುವ ಮೂಲಕ ಜಿಲ್ಲಾಡಳಿತಕ್ಕೆ ಉತ್ತಮ ಸಹಕಾರ ನೀಡಿದೆ.
ತಾಲೂಕಿನಾದ್ಯಂತ ಜನತೆ ನೀಡಿರುವ ಬೆಂಬಲ ಇದಕ್ಕೆ ಪ್ರಮುಖ ಕಾರಣ. ಅಲ್ಲದೇ ಮುಖ್ಯವಾಗಿ ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳ ಕಾರ್ಯತತ್ಪರತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕರೊನಾ ಮಹಾಮಾರಿಯನ್ನು ತೊಲಗಿಸುವಲ್ಲಿ ಮೈಸೂರು ಜಿಲ್ಲಾಡಳಿತ ಯಶಸ್ಸು ಸಾಧಿಸಿ ಬೀಗಿದೆ. 90 ಪಾಸಿಟಿವ್ ಪ್ರಕರಣಗಳು ದಾಖಲಾದರೂ ಒಬ್ಬ ಸೋಂಕಿತನೂ ಜೀವ ಕಳೆದುಕೊಳ್ಳಲಿಲ್ಲ. ಎಲ್ಲರೂ ಗುಣಮುಖರಾಗಿ ಹೊರಬಂದಿದ್ದು ಇದು ಅಧಿಕಾರಿಗಳ ಶ್ರಮದ ಪ್ರತಿಫಲ.
ಜಿಲ್ಲಾಡಳಿತದ ಈ ಯಶಸ್ಸಿನಲ್ಲಿ ತಾಲೂಕುಗಳ ಪಾತ್ರವೂ ಇದೆ. ಅದರಂತೆ ಹುಣಸೂರು ತಾಲೂಕು ಆಡಳಿತ ಮಾರ್ಚ್ 23ರಿಂದ ಆರಂಭಗೊಂಡ ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿತು. ಅಗತ್ಯವಸ್ತುಗಳಾದ ದಿನಸಿ ಮತ್ತು ತರಕಾರಿ ಮಾರಾಟದ ಅಂಗಡಿಗಳನ್ನು ಹೊರತುಪಡಿಸಿ ಎಲ್ಲ ವಾಣಿಜ್ಯ ವಹಿವಾಟನ್ನು ಸಂಪೂರ್ಣ ಬಂದ್ ಮಾಡಿತು.
ದೈಹಿಕ ಅಂತರ ಕಾಯ್ದುಕೊಂಡ ಜನರು: ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಅಗತ್ಯವಾಗಿ ಅನುಸರಿಸಬೇಕಾದ ದೈಹಿಕ ಅಂತರ ಕಾಯ್ದುಕೊಳ್ಳಲು ಜನರಿಗೆ ಅರಿವು ಮೂಡಿಸಲಾಯಿತು. ಅಂಗಡಿಗಳ ಮುಂದೆ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವ ಬಾಕ್ಸ್‌ಗಳನ್ನು ರಚಿಸಲು ನಿರ್ದೇಶಿಸಲಾಯಿತು. ಮೊದಮೊದಲು ದಿನಸಿ ಅಂಗಡಿಗಳಿಗೆ ಬೆಳಗಿನಿಂದ ಸಂಜೆಯವರೆಗೂ ಬಾಗಿಲು ತೆರೆಯಲು ಅವಕಾಶ ನೀಡಲಾಗಿತ್ತು. ಜನರು ಹೆಚ್ಚು ಓಡಾಟ ನಡೆಸುತಿದ್ದದ್ದನ್ನು ಗಮನಿಸಿದ ಅಧಿಕಾರಿಗಳು ನಂತರ ಮಧ್ಯಾಹ್ನ 12ರವರೆಗೆ ಮಾತ್ರ ಅವಕಾಶ ಕಲ್ಪಿಸಿದರು. ನಂತರ ರಸ್ತೆಗಳಲ್ಲಿ ಜನರ ಓಡಾಟ ನಿಂತಿತು.
ತುಂಬಿ ತುಳುಕಿದ ಬಜಾರ್ ರಸ್ತೆ: ಈ ನಡುವೆ ಬಜಾರ್ ರಸ್ತೆಯ ಫುಟ್‌ಪಾತ್ ಅನ್ನು ಸಂಪೂರ್ಣವಾಗಿ ಫುಟ್‌ಪಾತ್ ವ್ಯಾಪಾರಿಗಳು ಆಕ್ರಮಿಸಿಕೊಂಡರು. ಮಧ್ಯಾಹ್ನದವರೆಗೆ ಸಂತೆಯಂತೆ ಜನರು ಜಮಾವಣೆಗೊಳ್ಳಲು ಆರಂಭಿಸಿದರು. ರಸ್ತೆಯಲ್ಲಿ ಸಾಗುವುದೇ ದುಸ್ತರವಾಯಿತು. ಕೂಡಲೇ ಎಚ್ಚೆತ್ತ ತಾಲೂಕು ಆಡಳಿತ ಫುಟ್‌ಪಾತ್‌ನಲ್ಲಿ ಅಂಗಡಿಗಳನ್ನು ಇಡುವುದನ್ನು ನಿಷೇಧಿಸಿತು. ತರಕಾರಿ ಅಂಗಡಿಗಳನ್ನು ತರಕಾರಿ ಮಾರುಕಟ್ಟೆ ಪ್ರಾಂ ಗಣದ ವಿಶಾಲ ಜಾಗಕ್ಕೆ ಸ್ಥಳಾಂತರಿಸಿದರು. ಇದರಿಂದ ಬಜಾರ್ ರಸ್ತೆಯಲ್ಲಿ ಜನದಟ್ಟಣೆ ಕಡಿಮೆಯಾಯಿತು.
ಆರೋಗ್ಯ ಇಲಾಖೆಯ ಪಾತ್ರ: ಆರೋಗ್ಯ ಇಲಾಖೆ ಕರೊನಾ ಮಾರಿಯನ್ನು ಹಿಮ್ಮೆಟ್ಟಿಸುವಲ್ಲಿ ತಾಲೂಕು ಆಡಳಿತದೊಂದಿಗೆ ಅವಿರತವಾಗಿ ಶ್ರಮಿಸಿತು. ತಾಲೂಕಿ ನಾದ್ಯಂತ 220ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಮತ್ತು 20ಕ್ಕೂ ಹೆಚ್ಚು ಆರೋಗ್ಯ ಸಹಾಯಕರು ಹಗಲುರಾತ್ರಿಯೆನ್ನದೇ ಮನೆ ಮನೆಗೆ ಭೇಟಿ ನೀಡಿ ಶಂಕಿತರನ್ನು ಗುರುತಿಸಿದರು. 2-3 ಬಾರಿ ವಿವಿಧ ಸ್ತರಗಳ ಮನೆಮನೆ ಸಮೀಕ್ಷಾಕಾರ್ಯ ನಡೆಸಿದರು. ಹೊರರಾಜ್ಯ, ಹೊರಜಿಲ್ಲೆ, ನಂಜನಗೂಡು ಹೀಗೆ ವಿವಿಧ ಜಾಗಗಳಿಂದ ಯಾರಾದರೂ ಬಂದಿದ್ದಾರೆಂದರೆ ಕೂಡಲೇ ಸ್ಥಳ ಪತ್ತೆಹೆಚ್ಚಿ ಅವರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಕ್ವಾರಂಟೈನ್‌ನಲ್ಲಿರಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದರು. ಅವರ ಈ ಶ್ರಮದಿಂದ ತಾಲೂಕಿನಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ದಾಖಲಾಗಲಿಲ್ಲ.
2 ಸಾವಿರ ಮಂದಿಗೆ ಕ್ವಾರಂಟೈನ್: ಎರಡು ತಿಂಗಳಲ್ಲಿ ಸರಿಸುಮಾರು ವಿದೇಶ ಸೇರಿದಂತೆ ವಿವಿಧ ಕಡೆಯಿಂದ ತಾಲೂಕಿಗೆ ಬಂದಿದ್ದ 2 ಸಾವಿರ ಮಂದಿಯನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿತು. ಗಿರಿಜನ ಹಾಡಿಗಳಿಗೆ ಪ್ರತಿದಿನ ಭೇಟಿ ನೀಡಿ ಗಿರಿಜನರ ಆರೋಗ್ಯ ತಪಾಸಣೆ ನಡೆಸಿತು. ತಾಲೂಕಿನಿಂದ ದೆಹಲಿಯ ತಬ್ಲಿಘಿ ಜಮಾತ್‌ಗೆ ಯಾರೊಬ್ಬರೂ ತೆರಳದಿರುವುದು ಮತ್ತು ಅಲ್ಲಿಂದ ಇಲ್ಲಿಗೆ ಯಾರೂ ಬರದಿರುವುದು ತಾಲೂಕಿಗೆ ವರವಾಗಿ ಪರಿಣಮಿಸಿತು.
ಚೆಕ್ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ನಿರ್ವಹಣೆ: ಕಂದಾಯ ಇಲಾಖೆಯೊಂದಿಗೆ ಕೈಜೋಡಿಸಿದ ಪೊಲೀಸ್ ಇಲಾಖೆ ತಾಲೂಕಿನಾದ್ಯಂತ ಸ್ಥಾಪಿಸಿದ್ದ 4 ಚೆಕ್‌ಪೋಸ್ಟ್‌ಗಳಲ್ಲಿ ಹಗಲುರಾತ್ರಿ ವಾಹನಗಳ ಪರಿಶೀಲನಾ ಕಾರ್ಯವನ್ನು ಕಟ್ಟುನಿಟ್ಟಾಗಿ ನಡೆಸಿತು. ಮಧ್ಯಾಹ್ನದ ನಂತರ ಎಲ್ಲ ಅಂಗಡಿಗಳ ಬಾಗಿಲು ಬಂದ್ ಮಾಡಿಸುವ ಗುರುತರ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿತು. ತಾಲೂಕಿನಲ್ಲಿ ಲಾಕ್‌ಡೌನ್ ಯಶಸ್ಸಿಗೆ ಮತ್ತು ಕರೊನಾ ಹಿಮ್ಮೆಟ್ಟಿಸಲು ಅಧಿಕಾರಿಗಳ ಉತ್ತಮ ಕಾರ್ಯನಿರ್ವಹಣೆ,ಇಲಾಖೆಗಳ ನಡುವಿನ ಹೊಂದಾಣಿಕೆ ಮೂಲ ಕಾರಣವಾಯಿತು ಎನ್ನಬಹುದು.
ತಾಲೂಕು ಆಡಳಿತಕ್ಕೆ ವಿವಿಧ ಇಲಾಖೆಗಳು, ಸರ್ಕಾರೇತರ ಸಂಘಸಂಸ್ಥೆಗಳು, ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ನಾಗರಿಕರು ಹೆಚ್ಚಿನ ಬೆಂಬಲ ನೀಡಿದರು. ನಮ್ಮ ಕಾರ್ಯಕ್ಕೆ ಮನಪೂರ್ವಕವಾಗಿ ಸಾಥ್ ನೀಡಿ ಕರೊನಾ ಮಾರಿ ಯನ್ನು ಹಿಮ್ಮೆಟ್ಟಿಸಲು ಕಾರಣರಾದರು. ಯುದ್ಧ ಇನ್ನೂ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದ್ದು ಜನರ ಸಹಕಾರ ಕೋರುತ್ತೇನೆ.
ಐ.ಇ.ಬಸವರಾಜು, ತಹಸೀಲ್ದಾರ್, ಹುಣಸೂರು