

ಬೆಂಗಳೂರು: ಕಿಡ್ನ್ಯಾಪ್ ಪ್ರಕಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಬಂಧನ ರಾಜಕೀಯ ಪ್ರೇರಿತ. ಇದರ ಹಿಂದೆ ದೊಡ್ಡ ತಿಮಿಂಗಿಲವೇ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗುಡುಗಿದರು.
ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬಕ್ಕೆ ಕಳಂಕ ತರಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.
ಆಡಿಯೋ ಮೂಲಕ ಸಿಕ್ಕಿಬಿದ್ದ ದೊಡ್ಡ ತಿಮಿಂಗಲವನ್ನು ಬಿಟ್ಟು ದೇವರಾಜೇಗೌಡರನ್ನು ಬಂಧನ ಮಾಡಿದ್ದಾರೆ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು. ಸರ್ಕಾರಕ್ಕೆ ಬದ್ಧತೆ ಇದ್ದರೆ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಲಿ. ಅದನ್ನು ಬಿಟ್ಟು ರೇವಣ್ಣ ಸುತ್ತ ತನಿಖೆ ಗಿರಕಿ ಹೊಡೆಯುವ ಅಗತ್ಯವಿಲ್ಲ. ಕುಮಾರಸ್ವಾಮಿ ಅವರು ರೇವಣ್ಣ ಕುಟುಂಬವನ್ನು ಮುಗಿಸಲು ನೋಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ನ್ಯಾಯದ ಪರ, ನೊಂದ ಮಹಿಳೆಯರ ಪರ ಇದ್ದೇನೆ ಎಂದು ಹೇಳಿದರು.
ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನೊಂದ ಮಹಿಳೆಯೊಬ್ಬಳು ದೂರು ಕೊಟ್ಟಿದ್ದಾರೆ. ಅವರನ್ನು ಹೆದರಿಸಿ, ಬೆದರಿಸಿದವರು ಯಾರು? ಮಫ್ತಿಯಲ್ಲಿ ಅವರ ಮನೆ ಬಳಿ ಹೋಗಿ ಹೆದರಿಸಿದ್ದು ಯಾರು? ಇದೆಲ್ಲ ಎಸ್‌ಐಟಿಗೆ ಗೊತ್ತಾ? ಎಂದು ಕೇಳಿದರು.
ಮಹಿಳೆಯರಿಗೆ ಬೆದರಿಸಿದ್ದು, ಧಮ್ಕಿ ಹಾಕಿದ್ದು ಎಲ್ಲವೂ ಕೆಲವೇ ದಿನಗಳಲ್ಲಿ ಆಚೆ ಬರಲಿದೆ. ನೀವು ಅದರ ಬಗ್ಗೆ ಏನು ಕ್ರಮ ತಗೊಂಡಿದ್ದೀರಿ ಗೃಹ ಸಚಿವರೇ? ಎಂದು ಡಾ.ಜಿ.ಪರಮೇಶ್ವರ ಅವರನ್ನು ಪ್ರಶ್ನಿಸಿದರು.
ಹಾಸನದಲ್ಲಿ ಪೆನ್ ಡ್ರೈವ್‌ಗಳನ್ನು ಹಂಚಿರುವ ವ್ಯಕ್ತಿಗಳು ಎಲ್ಲಿ? ಎ್ಐಆರ್ ದಾಖಲಾಗಿರುವ ಒಬ್ಬ ವ್ಯಕ್ತಿಯನ್ನೂ ಎಸ್‌ಐಟಿ ಹಿಡಿಯಲಿಲ್ಲ. ವಿಡಿಯೋಗಳನ್ನು ಮೊದಲು ಕದ್ದು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣನಾದ ಕಾರು ಚಾಲಕನನ್ನು ಇದುವರೆಗೂ ತನಿಖಾ ತಂಡ ಬಂಧನ ಮಾಡಿಲ್ಲ ಯಾಕೆ? ಆದರೆ, ಖಾಸಗಿ ಚಾನಲ್ ನಲ್ಲಿ ಒಂದೂವರೆ ಗಂಟೆ ಕಾಲ ಕೂರಿಸಿಕೊಂಡು ಅವನನ್ನು ಸಂದರ್ಶನ ಮಾಡುತ್ತಾರೆ. ಎಸ್‌ಐಟಿ ತಂಡಕ್ಕೆ ಸಿಗದ ಆ ವ್ಯಕ್ತಿ ಸುಲಭವಾಗಿ ಖಾಸಗಿ ಚಾನೆಲ್ ಗೆ ಸಿಗುತ್ತಾನೆ ಎಂದರೆ ಇಲ್ಲಿ ಏನು ನಡೆಯುತ್ತಿದೆ? ಎಂದು ಪ್ರಶ್ನೆ ಮಾಡಿದರು.
ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ಹೊರಬರುತ್ತವೆ ಎಂದು ಫೇಸ್ ಬುಕ್ಕಿನಲ್ಲಿ ಸಮಯದ ಸಮೇತ ಪೋಸ್ಟ್ ಹಾಕಿದ್ದ ನವೀನ್‌ಗೌಡ ಎನ್ನುವ ವ್ಯಕ್ತಿ ನಮ್ಮ ಪಕ್ಷದ ಶಾಸಕರಿಗೆ ಪೆನ್ ಡ್ರೈವ್ ಕೊಟ್ಟಿದ್ದೇನೆ ಎಂದು ಹೇಳಿದ್ದಾನೆ. ಅವನು ಏನೆಲ್ಲ ಹೇಳಿದ್ದಾನೆ, ಸಾಮಾಜಿಕ ಜಾಲತಾಣಗಳಲ್ಲಿ ಏನೆಲ್ಲ ಪೋಸ್ಟ್ ಮಾಡಿದ್ದಾನೆ ಎನ್ನುವುದು ಎಸ್‌ಐಟಿಗೆ ಗೊತ್ತಿಲ್ಲವೇ? ಇವನನ್ನು ಹಿಡಿದ್ರಾ? ಎಂದು ಕೆಣಕಿದರು.
ಬಿಜೆಪಿ ಪಕ್ಷದ ಮಾಜಿ ಶಾಸಕರೊಬ್ಬರ ಎಡಬಲದಲ್ಲಿ ಇದ್ದ ಇಬ್ಬರನ್ನು ಹಿಡಿಯಲಾಗಿದೆ. ಇನ್ನೊಂದು ವಾರದಲ್ಲಿ ಮುಖ್ಯವಾದವರನ್ನು ಹಿಡಿಯಲಾಗುತ್ತದೆ ಎಂದು ಕಾಂಗ್ರೆಸ್ ಶಾಸಕರು ಹೇಳಿದ್ದಾರೆ. ಹಾಗಾದರೆ, ಎಸ್‌ಐಟಿ ತನಿಖೆಯ ಎಲ್ಲ ಅಂಶಗಳು ಇವರಿಗೆ ಹೇಗೆ ಸೋರಿಕೆ ಆಗುತ್ತಿವೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.