ನಿವೃತ್ತ ಶಿಕ್ಷಕರ ಎಟಿಎಂ ಕದ್ದು 97 ಸಾವಿರ ವಂಚನೆ

atm
Published on

ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಎಟಿಎಂ ಬೂತ್‌ನಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ನಿವೃತ್ತ ಶಿಕ್ಷಕರ ಗಮನ ಬೇರೆಡೆ ಸೆಳೆದು ಡೆಬಿಟ್ ಕಾರ್ಡ್ ಕದ್ದು, 97ಸಾವಿರ ರೂ. ಅನ್ನು ಕಳ್ಳರು ದೋಚಿದ್ದಾರೆ.

ಬಿಟಿಎಂ ಲೇಔಟ್ ನಿವಾಸಿ ಎಂ. ಮುನಿಸ್ವಾಮಿ ವಂಚನೆಗೆ ಒಳಗಾದ ನಿವೃತ್ತ ಶಿಕ್ಷಕ. ಇವರು ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಏಪ್ರಿಲ್ 21ರಂದು ಕೆಲಸ ನಿಮಿತ್ತ, ಮೆಜೆಸ್ಟಿಕ್‌ಗೆ ಬಂದಿದ್ದ ಮುನಿಸ್ವಾಮಿ, ತುರ್ತು ಹಣ ಅಗತ್ಯವಿದ್ದ ಕಾರಣಕ್ಕೆ ಸಮೀಪದಲ್ಲಿದ್ದ ಎಟಿಎಂ ಬೂತ್‌ಗೆ ಹೋಗಿದ್ದಾರೆ. ಎಟಿಎಂಗೆ ಡೆಬಿಟ್ ಕಾರ್ಡ್ ಹಾಕಿ ಪಿನ್ ನಂಬರ್ ಒತ್ತುವಾಗ ಹಿಂದೆ ಅಪರಿಚಿತ ವ್ಯಕ್ತಿ ನಿಂತು ಗಮನಿಸುತ್ತಿದ್ದ.

ಇತ್ತ ಹಣ ಬಾರದೆ ಇದ್ದಾಗ ಏಕಾಏಕಿ, ಅಪರಿಚಿತ ವ್ಯಕ್ತಿ ನನ್ನ ಡೆಬಿಟ್ ಕಾರ್ಡ್ ಹಾಕಿ ನೋಡುತ್ತೆನೆ ಎಂದು ಯಂತ್ರದಲ್ಲಿದ್ದ ಎಟಿಎಂ ಕಾರ್ಡ್ ತೆಗೆದು ಕೊಟ್ಟಿದ್ದಾನೆ. ಆನಂತರ ಆತನ ಕಾರ್ಡ್ ಹಾಕಿ ವಿತ್ ಡ್ರಾ ಮಾಡಲು ಪ್ರಯತ್ನಿಸಿ ಆಗಲೂ ಬಂದಿಲ್ಲ. ಯಂತ್ರದಲ್ಲಿ ಹಣ ಇಲ್ಲವೆಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದು, ಶಿಕ್ಷಕ ಸಹ ಹೋಗಿದ್ದಾರೆ. ಮಾರನೇ ದಿನ ಮೊಬೈಲ್‌ಗೆ ಹಣ ವಿತ್ ಡ್ರಾ ಆಗಿರುವ ಸಂದೇಶ ಬಂದಿದೆ.

ಗಾಬರಿಗೊಂಡು ಶಿಕ್ಷಕ, ತನ್ನ ಪರ್ಸ್ ಪರಿಶೀಲನೆ ನಡೆಸಿದಾಗ ಎಟಿಎಂ ಕಾರ್ಡ್ ಬದಲಾಗಿತ್ತು. ಅಪರಿಚಿತ ವ್ಯಕ್ತಿಯೇ, ಡೆಬಿಟ್ ಕಾರ್ಡ್ ಬದಲಾಯಿಸಿ ಕೊಟ್ಟಿದ್ದಾನೆ ಎಂದು ಗೊತ್ತಾಗಿದೆ. ಆರೋಪಿ, ಶಿಕ್ಷಕರ ಎಟಿಎಂ ಕಾರ್ಡ್ ಕದ್ದು, 97 ಸಾವಿರ ರೂ. ವಿತ್ ಡ್ರಾ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net