

ಮೈಸೂರು: ಸುವರ್ಣ ರಾಜ್ಯ ಶಿವಾರ್ಚಕ ಪ್ರಗತಿಪರ ಸಂಘ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಗುರುವಾರ ನಿವೃತ್ತ ಯೋಧರಿಗೆ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನಿವೃತ್ತ ಯೋಧರಾದ ವಿ.ಟಿ. ಸಿದ್ದಪ್ಪ, ಮಧು ಕುಮಾರ್, ವೈದ್ಯ ಡಾ.ಎಚ್.ಪಿ. ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ದೇಶ ಪ್ರಸ್ತುತ ಯೋಗದ ಮೂಲಕ ವಿಶ್ವದ ಗಮನ ಸೆಳೆಯುತ್ತಿದೆ. ಅನೇಕ ವಿದೇಶಿಗರು ದೇಶಕ್ಕೆ ಆಗಮಿಸಿ ಯೋಗ ಕಲಿಯುತ್ತಿದ್ದು, ಇಲ್ಲಿನ ಸಂಸ್ಕೃತಿಗೆ ಮಾರು ಹೋಗಿದ್ದಾರೆ ಎಂದು ಹೇಳಿದರು.
ವಿದೇಶಿಯರು ನಮ್ಮ ದೇಶಕ್ಕೆ ದೀರ್ಘದಂಡ ನಮಸ್ಕಾರ ಮಾಡುತ್ತಿದ್ದಾರೆ. ಹಿಂದು ಧರ್ಮದ ಕುರಿತು ವಿದೇಶಿಯರು ಹೆಚ್ಚು ಅಧ್ಯಯನ ಮಾಡುತ್ತಿದ್ದಾರೆ. ಹಾಗಾಗಿ ನಾವು ಸಹ ನಮ್ಮ ಸಂಸ್ಕೃತಿಯ ಕುರಿತು ಅರಿಯುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಹೊಸಹುಂಡಿ ಶ್ರೀ ಶನಿಮಠದ ಡಾ. ಶ್ರೀ ರುದ್ರೇಶ್ ಪ್ರಸಾದ್ ಗುರೂಜಿ, ನಿವೃತ್ತ ಪ್ರಾಧ್ಯಾಪಕ ಶಿವಾರ್ಚಕ ಮಲ್ಲಣ್ಣ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸೋಮಣ್ಣ, ರಾಜ್ಯ ಶಿವಾರ್ಚಕ ಸಂಘ ಅಧ್ಯಕ್ಷ ಪ್ರದೀಪ್, ಜಿಲ್ಲಾಧ್ಯಕ್ಷ ಬನ್ನೂರು ನಾಗರಾಜು, ಬಸವ ಬಳಗ ಅಧ್ಯಕ್ಷ ಅಂಬಳೆ ಶಿವಣ್ಣ, ಕಾವೇರಿ ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಸುಬ್ರಹ್ಮಣ್ಯ, ಹಾಗೂ ಇತರರು ಇದ್ದರು.