ನಿವೃತ್ತರ ದರ್ಬಾರ್​ಗೆ ಬ್ರೇಕ್: ಸಚಿವಾಲಯದಲ್ಲೇ 40ಕ್ಕೂ ಹೆಚ್ಚು ಜನ; ಕ್ರಮಕ್ಕೆ ಮುಖ್ಯ ಕಾರ್ಯದರ್ಶಿ ಸೂಚನೆ

Vidhana Soudha
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ನಿವೃತ್ತಿ ನಂತರವೂ ಪ್ರಭಾವ ಬಳಸಿ ಅದೇ ಹುದ್ದೆಯಲ್ಲಿ ಮುಂದುವರಿದು ದರ್ಬಾರ್ ನಡೆಸುವುದಕ್ಕೆ ಕೊನೆಗೂ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಖಾಲಿ ಹುದ್ದೆಗಳನ್ನು ಸರ್ಕಾರ ಕಾಲಕಾಲಕ್ಕೆ ಭರ್ತಿ ಮಾಡುತ್ತಿಲ್ಲ. ಆದರೆ, ನಿವೃತ್ತ ಅಧಿಕಾರಿ ಮತ್ತು ನೌಕರರಿಗೆ ಅವರ ಪ್ರಭಾವಕ್ಕೆ ತಕ್ಕಂತೆ ಹುದ್ದೆಗಳನ್ನು ದಯಪಾಲಿಸುತ್ತ ನಿರುದ್ಯೋಗ ಸಮಸ್ಯೆ ಹೆಚ್ಚಳಕ್ಕೆ ಅವಕಾಶ ನೀಡುತ್ತಿದೆ ಎಂಬ ಆರೋಪಗಳಿದ್ದವು. ಇದೀಗ ಅಂತಹ ಎಲ್ಲ ಪ್ರಯತ್ನಗಳಿಗೆ ಕೊನೆ ಹಾಡಲು ಮುಖ್ಯ ಕಾರ್ಯದರ್ಶಿ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ.

ಮುಖ್ಯಮಂತ್ರಿ ಮತ್ತು ಸಚಿವರ ಸಚಿವಾಲಯಗಳಲ್ಲಿ ನಿವೃತ್ತರನ್ನು ನೇಮಕ ಮಾಡಿಕೊಂಡಿರುವ ಅನೇಕ ಪ್ರಕರಣಗಳಿವೆ. ಆದರೆ, ಅದನ್ನು ಬಿಟ್ಟು ವಿವಿಧ ಇಲಾಖೆಗಳಲ್ಲೂ ನಿವೃತ್ತರು ವ್ಯಾಪಿಸಿಕೊಂಡಿದ್ದಾರೆ. ಹೀಗಾಗಿ ಸರ್ಕಾರಿ ಕಚೇರಿಗಳು ನಿವೃತ್ತರ ಸ್ವರ್ಗ ಎನಿಸಿಕೊಂಡಿವೆ.

ಎಷ್ಟು ಜನ ಇದ್ದಾರೆ?: ಲಭ್ಯ ಮಾಹಿತಿಯ ಪ್ರಕಾರ ಸರ್ಕಾರದ ಸಚಿವಾಲಯದಲ್ಲಿಯೇ ಅಂದಾಜು 40 ಜನ ವಿವಿಧ ದರ್ಜೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿವೃತ್ತಿ ನಂತರವೂ ಅದೇ ಹುದ್ದೆ ಅಥವಾ ನಿಗಮ ಮತ್ತು ಮಂಡಳಿಗಳಿಗೆ ನೇಮಕವಾಗಿದ್ದಾರೆ. ಕರ್ತವ್ಯದಲ್ಲಿದ್ದಾಗ 70 ಸಾವಿರ ರೂ. ವೇತನ ಪಡೆಯುತ್ತಿದ್ದವರು, ಗುತ್ತಿಗೆ ಆಧಾರದಲ್ಲಿ ಮರುನೇಮಕವಾದ ನಂತರ 80 ಸಾವಿರ ರೂ. ಭತ್ಯೆ ಪಡೆಯುತ್ತಿದ್ದಾರೆ. ಜತೆಗೆ, ನಿವೃತ್ತಿ ನಂತರದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಮಿತವ್ಯಯಿ ಯೋಜನೆಗೆ ತಿಲಾಂಜಲಿ ನೀಡಿದಂತಾಗಿದೆ.

ನಿಯಮ ಉಲ್ಲಂಘನೆ: ರಾಜ್ಯ ಸರ್ಕಾರ 2016ರಲ್ಲಿ ಹೊರಡಿಸಿರುವ ಆದೇಶದ ಪ್ರಕಾರ ನಿವೃತ್ತರನ್ನು ನೇಮಕ ಮಾಡಬಾರದು. ಒಂದು ವೇಳೆ ಅನಿವಾರ್ಯವಾಗಿದ್ದರೆ ಸಚಿವ ಸಂಪುಟದ ಅನುಮೋದನೆ ಪಡೆಯ ಬೇಕು. ಕಾರ್ಯದರ್ಶಿ ಹುದ್ದೆಯಲ್ಲಿದ್ದವರಿಂದ ಡಿ ಗ್ರೂಪ್ ನೌಕರರ ತನಕ ನಿವೃತ್ತರ ಮರುನೇಮಕಗಳಾಗಿವೆ. ಅಂತಹ ಅನಿವಾರ್ಯತೆ ಏನು ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.

ಆಡಳಿತದಲ್ಲಿ ಕೆಲವು ಸುಧಾರಣೆಗಳನ್ನು ತರಲು ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ನೇತೃತ್ವದ ಆಯೋಗ ರಚನೆಯಾಗಿ ಕೆಲ ವರದಿ ನೀಡಿದೆ. ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿಯೂ ಇದೆ. ಇವು ನೀಡಿರುವ ವರದಿಗಳನ್ನು ಮರು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.

  • ಕಡತ ವಿಲೇವಾರಿ: ಕಡತ ವಿಲೇವಾರಿಯ ಹಂತಗಳನ್ನು 10 ರಿಂದ 4ಕ್ಕೆ ಇಳಿಸುವಂತೆ ಆಡಳಿತ ಸುಧಾರಣಾ ಆಯೋಗದ ವರದಿಯಂತೆ ಆದೇಶ ಆಗಿತ್ತು. ಆದರೆ, ನೌಕರರ ಸಂಘವು ಕೇಂದ್ರ ಸರ್ಕಾರದ ಮಾದರಿ ಸಾಧ್ಯವಿಲ್ಲ, ಶೇ.50 ರಷ್ಟು ಹುದ್ದೆಗಳು ಖಾಲಿ ಇರುವುದರಿಂದ ಕಡಿಮೆ ಹಂತ ಆಡಳಿತ ಸುಧಾರಣೆ ಆಗುವುದಿಲ್ಲ ಎಂಬ ವಾದ ಮಾಡಿದ್ದರಿಂದ ಮರು ಪರಿಶೀಲನೆ ಮಾಡಲಾಗುತ್ತಿದೆ.
  • ಹುದ್ದೆಗಳ ರದ್ದಿಲ್ಲ: ಸಚಿವಾಲಯದಲ್ಲಿ 542 ಕಿರಿಯ ಸಹಾಯಕರ ಹುದ್ದೆಗಳ ರದ್ದತಿ ಬಗ್ಗೆ ಸುಧಾರಣಾ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಅಂತೆಯೇ, ಸಚಿವಾಲಯದ ವಿವಿಧ ಇಲಾಖೆಗಳಲ್ಲಿದ್ದ ಕಾನೂನು ಕೋಶದ ಅಧಿಕಾರಿಗಳ ಹುದ್ದೆಗಳನ್ನು ರದ್ದು ಮಾಡುವ ಪ್ರಸ್ತಾಪ ಕೈ ಬಿಡುವ ಬಗ್ಗೆಯೂ ಪರಿಶೀಲನೆ ಆಗಲಿದೆ.
  • ಲಾಗಿನ್ ಸೌಲಭ್ಯ: ಇ-ಆಫೀಸ್ ವ್ಯವಸ್ಥೆಯಲ್ಲಿ ಶಾಖಾಧಿಕಾರಿಗಳಿಂದ ಕೆಳ ಹಂತದವರಿಗೆ ಲಾಗಿನ್ ಸೌಲಭ್ಯ ಇರಲಿಲ್ಲ. ಕೆಳ ಹಂತದ ಹುದ್ದೆಗಳನ್ನು ರದ್ದು ಮಾಡಲಾಗುತ್ತದೆ ಎಂಬ ಭೀತಿ ನೌಕರರಿಗೆ ಆವರಿಸಿತ್ತು. ಈಗ ಆ ನೌಕರರಿಗೂ ಇ-ಆಫೀಸ್ ಲಾಗಿನ್ ನೀಡುವ ಬಗ್ಗೆ ಮರು ಪರಿಶೀಲನೆ ಆಗುತ್ತಿದೆ.
  • ಟೆಲಿಗ್ರಾಮ್​ಗೆ ಬ್ರೇಕ್: ಸಮಾಜ ಕಲ್ಯಾಣ ಇಲಾಖೆಯಲ್ಲಿ ಟೆಲಿಗ್ರಾಮ್ ಆ್ಯಪ್​ ಡೌನ್​ಲೋಡ್ ಮಾಡಿಕೊಳ್ಳಲು ಸುತ್ತೋಲೆ ಹೊರಡಿಸಲಾಗಿತ್ತು. ಅದನ್ನು ಸದ್ಯಕ್ಕೆ ಕೈಬಿಡಲಾಗುತ್ತಿದೆ.
  • ನಿಯೋಜನೆ: ಸಚಿವಾಲಯಕ್ಕೆ ನಿಯೋಜನೆ ಮೇಲೆ ಬೇರೆ ಇಲಾಖೆಗಳಿಂದ ಬರುವುದನ್ನು ತಡೆಯಲು ಹಾಗೂ ಅವಧಿ ಮೀರಿ ಇರುವವರನ್ನು ವಾಪಸ್ ಕಳುಹಿಸಲು ಪರಿಶೀಲನೆ.
  1. ಮುಖ್ಯಮಂತ್ರಿ ಕಚೇರಿ, ಸಚಿವರ ಕಚೇರಿಗಳಲ್ಲಿ ಪ್ರತ್ಯೇಕ ನೇಮಕ
  2. ಸಚಿವಾಲಯದಲ್ಲಿ 572 ಹುದ್ದೆಗಳ ರದ್ದತಿ ಕೈಬಿಡಲು ನಿರ್ಧಾರ
  3. ಸಹಾಯಕರಿಗೂ ಇ-ಆಫೀಸ್ ಲಾಗಿನ್ ಸೌಲಭ್ಯ
  4. ಕಡತ ವಿಲೇವಾರಿ ತಗ್ಗಿಸುವ ಪ್ರಯತ್ನದ ಪುನರ್ ಪರಿಶೀಲನೆ
  5. ಆಡಳಿತ ಸುಧಾರಣಾ ಆಯೋಗ ಮತ್ತು ಸಂಪುಟ ಉಪ ಸಮಿತಿ ಪ್ರಯತ್ನ ವ್ಯರ್ಥ

ಆಡಳಿತ ಸುಧಾರಣೆ ಹೆಸರಿನಲ್ಲಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯ ಕಾರ್ಯದರ್ಶಿ ಗಮನ ಸೆಳೆಯಲಾಗಿದೆ. ಮುಂದೆ ನಿವೃತ್ತರನ್ನು ನೇಮಕ ಮಾಡದಂತೆ ಒತ್ತಾಯಿಸಲಾಗಿದೆ. | ಪಿ. ಗುರುಸ್ವಾಮಿ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ

ಗಮನಸೆಳೆದ ನೌಕರರ ಸಂಘ: ಇತ್ತೀಚೆಗೆ ಸಚಿವಾಲಯ ನೌಕರರ ಸಂಘದ ನಿಯೋಗ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರನ್ನು ಭೇಟಿ ಮಾಡಿ ಅನೇಕ ಸಮಸ್ಯೆಗಳನ್ನು ವಿವರಿಸಿತ್ತು. ಅದರಲ್ಲಿ ಪ್ರಮುಖವಾಗಿ ನಿವೃತ್ತರ ದರ್ಬಾರ್ ಬಗ್ಗೆಯೂ ಮಾಹಿತಿ ನೀಡಿತ್ತು. ಹೀಗಾಗಿ ಮುಖ್ಯ ಕಾರ್ಯದರ್ಶಿಗಳು ಕ್ರಮವಹಿಸುವಂತೆ ಡಿಪಿಎಆರ್ ಕಾರ್ಯದರ್ಶಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಿತವ್ಯಯಕ್ಕೆ ಅರ್ಥವಿಲ್ಲ: ಸರ್ಕಾರಕ್ಕೆ ಅಗತ್ಯವಾದ ಡಿ ಗ್ರೂಪ್ ಮತ್ತು ಚಾಲಕರನ್ನು ಗುತ್ತಿಗೆ ಮೇಲೆ ತೆಗೆದುಕೊಳ್ಳುವುದು ಆರ್ಥಿಕ ಮಿತವ್ಯಯ ಆಗುವುದಿಲ್ಲವೆಂದು ಸಚಿವಾಲಯ ನೌಕರರ ಸಂಘವು ಮುಖ್ಯ ಕಾರ್ಯದರ್ಶಿ ಅವರಿಗೆ ಮನವರಿಕೆ ಮಾಡಿಕೊಟ್ಟಿದೆ. 50ಕ್ಕೂ ಹೆಚ್ಚು ಚಾಲಕರು ಸಾರಿಗೆ ನಿಗಮಗಳಿಂದ ನಿಯೋಜನೆ ಮೇಲೆ ಬಂದಿದ್ದಾರೆ. ಸರ್ಕಾರ ನೇಮಕ ಮಾಡಿಕೊಂಡರೆ ಚಾಲಕರಿಗೆ ತಿಂಗಳಿಗೆ 32 ಸಾವಿರ ರೂ. ಹಾಗೂ ಡಿ ಗ್ರೂಪ್ ನೌಕರರಿಗೆ 25 ಸಾವಿರ ರೂ. ವೇತನ ಆಗುತ್ತದೆ. ಗುತ್ತಿಗೆ ನೇಮಕದಿಂದ ಸರ್ಕಾರಕ್ಕೂ ಹೊರೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ.

ಅವೈಜ್ಞಾನಿಕ ವಿಲೀನ ಆರೋಪ: ಆಡಳಿತ ಸುಧಾರಣಾ ಆಯೋಗದ ವರದಿಯಲ್ಲಿರುವ ಇಲಾಖೆ ಗಳ ವಿಲೀನ ಮತ್ತು ಹುದ್ದೆಗಳ ಕಡಿತ ಅವೈಜ್ಞಾನಿಕ ವಾಗಿದ್ದು, ಈ ನಿರ್ಧಾರ ಬೇಡವೆಂದು ಸಚಿವಾಲಯ ನೌಕರರು ಮುಖ್ಯ ಕಾರ್ಯದರ್ಶಿಗೆ ಒತ್ತಡ ಹಾಕಿದ್ದಾರೆ.

ಎಂತಹವರ ನೇಮಕ?: ಸರ್ಕಾರಿ ಹುದ್ದೆಯಲ್ಲಿದ್ದವರು ಮಾತ್ರವಲ್ಲ, ಬ್ಯಾಂಕ್​ನ ನಿವೃತ್ತರೊಬ್ಬರೂ ನೇಮಕವಾಗಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಾಸಿಕ ಗೌರವಧನ ನಿಗದಿಯಾಗಿದೆ. ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಮೂರು ವರ್ಷಗಳಿಂದ ಒಂದಿಲ್ಲೊಂದು ಹುದ್ದೆಗೆ ನೇಮಕವಾಗುತ್ತಲೇ ಇದ್ದಾರೆ. ಅಧೀನ ಕಾರ್ಯದರ್ಶಿ, ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ, ಡಿ ಗ್ರೂಪ್ ನೌಕರರು ಮರುನೇಮಕವಾಗಿದ್ದಾರೆ.

ನೌಕರರ ವಾದಗಳೇನು?

  • 2.5 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿದ್ದು, ಒತ್ತಡ ನಿವಾರಿಸಲು ಇವುಗಳನ್ನು ಭರ್ತಿ ಮಾಡಬೇಕು
  • ಇಲಾಖೆಗಳ ವಿಲೀನ ನೌಕರರನ್ನು ಬೆದರಿಸುವ ತಂತ್ರ
  • ನಿವೃತ್ತರ ಮರು ನೇಮಕ ಸರ್ಕಾರಕ್ಕೆ ಆರ್ಥಿಕ ಹೊರೆ
  • ಗುತ್ತಿಗೆ ನೇಮಕದಿಂದ ಆರ್ಥಿಕ ಮಿತವ್ಯಯವಾಗದು
  • ಕಂದಾಯ ಇಲಾಖೆಯಲ್ಲಿ ವಾರ್ಷಿಕ 1.5 ಲಕ್ಷ, ಆರ್​ಡಿಪಿಆರ್​ನಲ್ಲಿ 2.5 ಲಕ್ಷ ಕಡತ ಬರುತ್ತವೆ
  • ಇ-ಆಫೀಸ್ ಲಾಗಿನ್ ಶಾಖಾಧಿಕಾರಿ ಮೇಲ್ಪಟ್ಟು ಇದ್ದರೆ ಆಡಳಿತ ಸುಧಾರಣೆ ಆಗಲ್ಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net