

ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದ್ದು, ತಿಲಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
38 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ನಿವೃತ್ತ ಐಎಎಸ್ ಅಧಿಕಾರಿ ಜಿ.ರಾಮಚಂದ್ರ(೭೨) ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪಾನಿಯಲ್ಲಿ ಮತ್ತುಬರುವ ಔಷಧಿ ಬರೆಸಿ ರಾಮಚಂದ್ರ ಅವರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇದರ ಪರಿಣಾಮ ನಾನು ಈಗ ಗರ್ಭಿಣಿಯಾಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 ತಿಂಗಳ ಹಿಂದೆಯೇ ದೂರು ನೀಡಿದ್ದ ರಾಮಚಂದ್ರ:
ರಾಮಚಂದ್ರ ಅವರು ಸಂತ್ರಸ್ತೆ ವಿರುದ್ಧ ಸೆ.೧೪ರಂದು ತಿಲಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರುದಾರೆ ಮಹಿಳೆಯನ್ನು ಅನಾರೋಗ್ಯಪೀಡಿತ ಪತ್ನಿಯ ಆರೈಕೆಗಾಗಿ ನೇಮಿಸಿಕೊಂಡಿದ್ದೆ. ಈ ವೇಳೆ ಆಕೆ ತಾನಾಗೆಯೇ ನನ್ನ ಬಳಿ ಬಂದು ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದಳು. ನಿಮ್ಮ ಪತ್ನಿಯ ಹಾಗೆ ನಾನೂ ಸಹ ನಿಮ್ಮ ಯೋಗಕ್ಷೇಮ ನೋಡಿಕೊಳ್ಳುವೆ ಎಂದು ನಂಬಿಸಿದ್ದಳು. ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ದೈಹಿಕ ಸಂಬಂಧ ಇರಿಸಿಕೊಂಡಿದ್ದೆವು.
ಕೆಲ ಸಮಯದ ಬಳಿಕ ಆಕೆ ನಾನು ಗರ್ಭಿಣಿಯಾಗಿದ್ದಾನೆ. ನನಗೆ ೧೦ ಕೋಟಿ ರೂ. ಕೊಡುವಂತೆ ಬೇಡಿಕೆ ಇರಿಸಿದ್ದಳು. ಈಕೆಯ ತಾಯಿ ಮತ್ತು ತಮ್ಮ ಸಹ ನನಗೆ ಹಣಕ್ಕೆ ಬೇಡಿಕೆ ಇರಿಸಿದ್ದರು. ಹೀಗಾಗಿ ವಿವಿಧ ಹಂತಗಳಲ್ಲಿ ಅಕ್ರಮವಾಗಿ ನನ್ನಿಂದ ೭೦ ಲಕ್ಷ ರೂ. ಹಣ ವಸೂಲಿ ಮಾಡಿದ್ದಾರೆ. ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಮಹಿಳೆ ಮತ್ತು ಆಕೆಯ ತಾಯಿ ಮತ್ತು ತಮ್ಮನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.