

ಬೆಂಗಳೂರು ದೇಶದಲ್ಲಿ 2011ರ ಜನಗಣತಿ ಪ್ರಕಾರ ಶೇ.43 ಮಕ್ಕಳು ಪೌಷ್ಟಿಕಾಂಶದ ಕೊರತೆ ಎದುರಿಸುತ್ತಿದ್ದರು. ಪ್ರಸ್ತುತ ಅಪೌಷ್ಟಿಕತೆಯ ನಿಖರ ಮಾಹಿತಿ ತಿಳಿಯಬೇಕಾದರೆ ಜನಗಣತಿಯಾಗಬೇಕಿದೆ ಎಂದು ಒರಿಸ್ಸಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ಮುರಳೀಧರ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕರ ಸದನದಲ್ಲಿ ಭಾನುವಾರ ಆರಂಭವಾದ ಎರಡು ದಿನಗಳ ‘ಐಸಿಡಿಎಸ್ ಯೋಜನೆಯಿಂದ ಕಾಯ್ದೆಯೆಡೆಗೆ, ಪೌಷ್ಟಿಕತೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದ ಹಕ್ಕಿನೆಡೆಗೆ’ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಯೋಜನೆಗಳನ್ನು ರೂಪಿಸಲು ಮತ್ತು ವಾಸ್ತವಾಂಶಗಳನ್ನು ತಿಳಿಯಲು ಜನಗಣತಿ ಅಗತ್ಯ. ಆದರೆ ಸರ್ಕಾರವು 2021ರಲ್ಲಿ ಸಮೀಕ್ಷೆ ನಡೆಸಿಲ್ಲ ಎಂದು ಹೇಳಿದರು.
ಹಾಗೆಯೇ ಆರ್ಥಿಕ ಅಭಿವೃದ್ಧಿಯಲ್ಲಿ ಹಣಕಾಸಿನ ವಿಚಾರಗಳು ಮಾತ್ರ ಇರುತ್ತವೆ. ಮಾನವ ಅಭಿವೃದ್ಧಿ ಸೂಚ್ಯಂಕ ಸಮೀಕ್ಷೆಯಲ್ಲಿ ಮನುಷ್ಯನ ಜೀವನ ಮಟ್ಟ ಸುಧಾರಣೆ, ಆರೋಗ್ಯ, ಶಿಕ್ಷಣ, ಸಾಮರ್ಥ್ಯ ಪರಿಶೀಲನೆಯಂತಹ ಅಂಶಗಳು ಬೆಳಕಿಗೆ ಬರಲಿವೆ. ಜಾತಿ ತಾರತಮ್ಯ, ಹೆಣ್ಣು- ಗಂಡು ಮಕ್ಕಳ ಶಿಕ್ಷಣ ತಾರತಮ್ಯ, ಉಳ್ಳವರು-ಬಡವರ ನಡುವಿನ ತಾರತಮ್ಯಗಳು ಮಾನವ ಅಭಿವೃದ್ಧಿಯಲ್ಲಿ ತಿಳಿಯಲಾಗುತ್ತದೆ ಎಂದರು.
ಮಾನವ ಅಭಿವೃದ್ಧಿ ಸೂಚ್ಯಂಕ ವರದಿ ಪ್ರಕಾರ ಭಾರತದ ಪರಿಸ್ಥಿತಿ ಕೆಟ್ಟದಾಗಿದೆ. 195 ದೇಶಗಳ ರ‌್ಯಾಂಕ್ ಪಟ್ಟಿಯಲ್ಲಿ ಭಾರತ 134ನೇ ಸ್ಥಾನದಲ್ಲಿದ್ದರೆ, ಪಕ್ಕದ ಶ್ರೀಲಂಕಾ 97ನೇ ಸ್ಥಾನದಲ್ಲಿದೆ. ಏಷ್ಯಾ ಖಂಡದ ಬಹುತೇಕ ಎಲ್ಲ ರಾಷ್ಟ್ರಗಳ ಪರಿಸ್ಥಿತಿ ಭಿನ್ನವಾಗಿಲ್ಲ ಎಂದರು.
ಅಕ್ಷರ ಕಲಿಕೆಯಷ್ಟೇಯಲ್ಲ:
ಅಂಗನವಾಡಿಗಳಲ್ಲಿ ಆಹಾರ, ಪೌಷ್ಟಿಕಾಂಶ ಒದಗಿಸುವುದು, ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವುದು, ಚುಚ್ಚುಮದ್ದು ನೀಡುವುದು. ಜೀವನ ಮತ್ತು ಆರೋಗ್ಯಮಟ್ಟ ಸುಧಾರಿಸುವ ಕೆಲಸ ಮಾಡಲಾಗುತ್ತಿದೆ. ಇದರ ಜತೆಗೆ ದೇಶದ ಜಾತಿ ವ್ಯವಸ್ಥೆಯು ತೀರ ಹತ್ತಿರದಿಂದ ತಿಳಿಯುವ ಜಾಗವೇ ಅಂಗನವಾಡಿಗಳು. ದೇಶಶದಲ್ಲಿನ ಜಾತಿ ವಿಚಾರದಲ್ಲಿ ಮೇಲು-ಕೀಳು ಭಾವನೆಗಳು ಸಣ್ಣ ವಯಸ್ಸಿನಲ್ಲಿ ಮಕ್ಕಳ ಮೇಲೆ ತೀರಾ ಪರಿಣಾಮ ಬೀರುತ್ತವೆ. ಇವುಗಳನ್ನು ಬಗೆಹರಿಸಲು ಮಕ್ಕಳನ್ನು ಒಳಗೊಂಡಂತೆ ಸಮುದಾಯದ ಕಾರ್ಯಕ್ರಮಗಳನ್ನು ಆಚರಿಸುವಂತೆ ಸಲಹೆ ನೀಡಿದರು.
ಶೇ.76 ಪೌಷ್ಟಿಕಾಂಶ ಕೊರತೆ:
ಭಾರತದಲ್ಲಿ ಐಸಿಡಿಎಸ್ ಕುರಿತು ಯೋಜನಾ ಆಯೋಗವು 2020ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪೌಷ್ಟಿಕಾಂಶದ ಕೊರತೆ ಮುಂದುವರಿಯುತ್ತಿರುವುದು, ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದಿರುವುದು, ಅಂಗನವಾಡಿಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸದಿರುವುದು ತಿಳಿದು ಬಂದಿದೆ.
ದೇಶದ ಮಕ್ಕಳಲ್ಲಿ ಶೇ.76ರಷ್ಟು ತೀರಾ ಮತ್ತು ಭಾಗಶಃ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ ಎಂಬ ಅಂಶ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ವಿಚಾರ ಸಂಕಿರಣದಲ್ಲಿ ಐಸಿಡಿಎಸ್ ಸಂಚಾಲಕಿ ಎಸ್. ವರಲಕ್ಷ್ಮೀ, ಭಾರತೀಯ ಅಂಕಿಅಂಶಗಳ ಸಂಸ್ಥೆಯ ಪ್ರೊ. ಮಧುರಾ ಸ್ವಾಮಿನಾಥನ್ ಸೇರಿ ಹಲವರು ಭಾಗವಹಿಸಿದ್ದರು.
ದೇಶದ ಮಕ್ಕಳಲ್ಲಿನ ಪೌಷ್ಟಿಕಾಂಶ ಕೊರತೆ ವಿಚಾರವನ್ನು ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸದಿರುವುದು ದುರಂತ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಆಹಾರ ಪೂರೈಕೆಯನ್ನು ಖಾಸಗಿಯವರಿಗೆ ವಹಿಸುವ ಮೂಲಕ ಅಂಗನವಾಡಿಗಳು ಕೂಡ ಖಾಸಗೀಕರಣಕ್ಕೆ ಬಲಿಯಾಗುತ್ತಿವೆ. ರೈತರು ಮತ್ತು ಕಾರ್ಮಿಕರ ಮಕ್ಕಳಿಗಾಗಿ ಇವುಗಳನ್ನು ಉಳಿಸಬೇಕಿದೆ. - ಎ.ಆರ್. ಸಿಂಧು, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರ ಸಂಘ