ಚಿಲ್ಲರೆ ಹುಣದುಬ್ಬರ 6 ವರ್ಷದಲ್ಲೇ ಕನಿಷ್ಠ

ವಿಜಯವಾಣಿ (5)
Published on

ನವದೆಹಲಿ: ಈ ವರ್ಷದ ಮಾರ್ಚ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು ಆರು ವರ್ಷದ ಕನಿಷ್ಠ ಮಟ್ಟವಾದ ಶೇಕಡ 3.34ರಷ್ಟು ದಾಖಲಾಗಿದೆ. 2019ರ ಆಗಸ್ಟ್ ಬಳಿಕ ದಾಖಲಾಗಿರುವ ಕನಿಷ್ಠ ಮಟ್ಟ ಇದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ನಿಗದಿಪಡಿಸಿರುವ ಶೇ.4ರ ಸರಾಸರಿ ಗುರಿಗಿಂತಲೂ ಕಡಿಮೆ ದಾಖಲಾಗಿದೆ. ಹಾಗಾಗಿ, ಜೂನ್​ನಲ್ಲಿ ನಿಗದಿಯಾಗಿರುವ ಆರ್​ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ಮೂರನೇ ಬಾರಿಗೆ ರೆಪೊ ದರ ಕಡಿತಗೊಳಿಸುವ ನಿರೀಕ್ಷೆ ಇದೆ. ಗ್ರಾಹಕ ಬೆಲೆ ಸೂಚ್ಯಂಕ ಆಧರಿತ ಹಣದುಬ್ಬರವು ಫೆಬ್ರವರಿಯಲ್ಲಿ ಶೇ.3.61ರಷ್ಟು ದಾಖಲಾಗಿತ್ತು. 2024ರ ಮಾರ್ಚ್​ನಲ್ಲಿ ಶೇ.4.85ರಷ್ಟಿತ್ತು.

ಇಳಿಕೆಗೆ ಕಾರಣ: ತರಕಾರಿಗಳು, ಮೊಟ್ಟೆ, ದ್ವಿದಳ ಧಾನ್ಯಗಳು, ಏಕದಳ ಧಾನ್ಯಗಳು, ಮಾಂಸ ಮತ್ತು ಮೀನು, ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಇಳಿಕೆಯೇ ಚಿಲ್ಲರೆ ಹಣದುಬ್ಬರ ಇಳಿಕೆಗೆ ಕಾರಣ ಎಂದು ಮಂಗಳವಾರ ಬಿಡುಗಡೆಯಾಗಿರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್​ಎಸ್​ಒ) ವರದಿ ತಿಳಿಸಿದೆ. ಮೊಟ್ಟೆ ಶೇ.3.16, ತರಕಾರಿಗಳು ಶೇ.7.04, ದ್ವಿದಳ ಧಾನ್ಯಗಳು ಶೇ.2.73 ಮತ್ತು ಮಸಾಲೆ ಪದಾರ್ಥಗಳ ದರ ಶೇ.4.32ರಷ್ಟು ಇಳಿಕೆಯಾಗಿದೆ. ಆದರೆ, ತೈಲ ಮತ್ತು ಕೊಬ್ಬಿನ ಪದಾರ್ಥಗಳ ಬೆಲೆಯು ಶೇ.17.7 ಮತ್ತು ಹಣ್ಣುಗಳ ಬೆಲೆ ಶೇ.16.27ರಷ್ಟು ಹೆಚ್ಚಳವಾಗಿದೆ.

ಆಹಾರ ಪದಾರ್ಥಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಫೆಬ್ರವರಿಯಲ್ಲಿ ಶೇ.3.75ರಷ್ಟಿದ್ದ ಆಹಾರ ಹಣದುಬ್ಬರವು, ಮಾರ್ಚ್​ನಲ್ಲಿ ಶೇ.2.69ಕ್ಕೆ ತಗ್ಗಿದೆ. ಫೆಬ್ರವರಿಯಲ್ಲಿ ಶೇ.3.32ರಷ್ಟಿದ್ದ ನಗರ ಪ್ರದೇಶದ ಹಣದುಬ್ಬರವು ಮಾರ್ಚ್​ನಲ್ಲಿ 3.43ಕ್ಕೆ ಏರಿಕೆಯಾಗಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.3.79ರಿಂದ ಶೇ.3.25ಕ್ಕೆ ಇಳಿದಿದೆ. ಕೇರಳದಲ್ಲಿ ಅತಿ ಹೆಚ್ಚು ಅಂದರೆ ಶೇ.6.59ರಷ್ಟು ಹಣದುಬ್ಬರ ದಾಖಲಾಗಿದ್ದರೆ, ತೆಲಂಗಾಣದಲ್ಲಿ ಅತಿ ಕಡಿಮೆ (ಶೇ.1.06) ದಾಖಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ.4ರಷ್ಟು ದಾಖಲಾಗಲಿದೆ ಎಂದು ಆರ್​ಬಿಐ ಅಂದಾಜಿಸಿದೆ.

ರೆಪೊ ದರ ಕಡಿತ?

ಕಳೆದ ಎರಡು ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೊ ದರವನ್ನು ಒಟ್ಟು ಶೇ.0.50ರಷ್ಟು ಕಡಿತಗೊಳಿಸಲಾಗಿದೆ. ಮುಂದಿನ ಮೂರು ಸಭೆಗಳಲ್ಲಿ ಮತ್ತೆ ಶೇ.0.50ರಷ್ಟು ಕಡಿತಗೊಳಿಸುವ ಸಾಧ್ಯತೆ ಇದೆ. 2024-25ನೇ ಆರ್ಥಿಕ ವರ್ಷದ ನಾಲ್ಕನೇ ತ್ರೖೆಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಕಡಿಮೆಯಾದರೂ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಐಸಿಆರ್​ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ಸಗಟು ಹಣದುಬ್ಬರ ಇಳಿಕೆ

ಸಗಟು ಬೆಲೆ ಆಧರಿಸಿದ ಹಣದುಬ್ಬರವು ಮಾರ್ಚ್ ತಿಂಗಳಲ್ಲಿ 6 ತಿಂಗಳ ಕನಿಷ್ಠ ಮಟ್ಟವಾದ ಶೇ.2.05ರಷ್ಟು ದಾಖಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ. ಫೆಬ್ರವರಿಯಲ್ಲಿ ಸಗಟು ಹಣದುಬ್ಬರ (ಡಬ್ಲ್ಯುಪಿಐ) ಶೇ. 2.38ರಷ್ಟಿತ್ತು. 2024ರ ಮಾರ್ಚ್​ನಲ್ಲಿ ಶೇ.0.26 ರಷ್ಟಿತ್ತು. ಆಹಾರ ಪದಾರ್ಥಗಳ ಬೆಲೆ ಇಳಿಕೆಯಿಂದ ಹಣದುಬ್ಬರ ಕೂಡ ಇಳಿಕೆ ದಾಖಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net