ಕನ್ಹೇರಿ ಸ್ವಾಮೀಜಿಗೆ ನಿರ್ಬಂಧ: ಶೋಭಾ ಕರಂದ್ಲಾಜೆ ಆಕ್ಷೇಪ | Withdrawn urge

IMG-20251016-WA0021
Published on

ಬೆಂಗಳೂರು: ಕನ್ಹೇರಿ ಮಠದ ಸ್ವಾಮೀಜಿಯವರಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಹೇರಿದ ನಿರ್ಬಂಧವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ವಿನಾಶ ಕಾಲ ಹತ್ತಿರ ಬಂದಿದೆ. ಸ್ವಾಮೀಜಿಯವರ ವಿರುದ್ಧ ಹೇರಿದ ನಿರ್ಬಂಧವನ್ನು ರದ್ದು ಮಾಡದಿದ್ದರೆ, ಅವರ ಜತೆ ವಿಜಯಪುರ ಜಿಲ್ಲೆ ಪ್ರವೇಶಿಸಿ ಜೈಲಿಗೆ ಹೋಗಲೂ ಸಿದ್ಧ ಎಂದು ಎಚ್ಚರಿಸಿದರು.

ವಿಜಯಪುರಕ್ಕೆ ಹೋದರೆ ಅದೆಷ್ಟು ದಿನ ಜೈಲಿನಲ್ಲಿ ಇಡುತ್ತೀರಿ ಎಂದು ನೋಡೋಣ. ನಿರ್ಬಂಧ ವಾಪಸ್ ಪಡೆಯದಿದ್ದರೆ ದೊಡ್ಡ ಹೋರಾಟ ಎದುರಿಸಬೇಕಾಗುತ್ತದೆ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದರು.

ಕೃಷಿಯ ಸಾಧನೆ ಗಮನಿಸಲು ಕೃಷಿ ತಜ್ಞರು, ಕೃಷಿ ಕಲಿಯುವ ಮಕ್ಕಳು ಈ ಮಠ ನೋಡಲು ಹೋಗುತ್ತಾರೆ. ಇದು ಕನ್ನೇರಿ ಮಠದ ಶ್ರೇಷ್ಠತೆ. ಅವರನ್ನು ನೀವು ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ್ದೀರಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಅವರೇ, ಇದು ವಿನಾಶಕಾಲೇ ವಿಪರೀತ ಬುದ್ಧಿ ಎಂದು ಟೀಕಿಸಿದರು.

ತಪ್ಪು ತಿಳಿಸಲು ಒತ್ತಾಯ

ಕನ್ಹೇರಿ ಮಠದ ಸ್ವಾಮೀಜಿ ಯಾವ ಭಯೋತ್ಪಾದಕರ ಕೆಲಸ ಮಾಡಿದ್ದಾರೆ? ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ಕನ್ನೇರಿ ಮಠದ ಸ್ವಾಮೀಜಿ ಮಾಡಿದ ತಪ್ಪನ್ನು ತಿಳಿಸಲಿ ಎಂದು ಒತ್ತಾಯಿಸಿದರು.

ಲಿಂಗಾಯತರನ್ನು ಒಡೆಯಬೇಡಿ. ವೀರಶೈವರು, ಜಾತಿ ಧರ್ಮಗಳೆಂದು ಒಡೆಯದಿರಿ. ಜಾತಿ ಸರ್ವೇ ಮಾಡಿ ಗುಂಪು ಗುಂಪುಗಳಲ್ಲಿ ಒಡೆಯದಿರಿ ಎಂದು ಹೇಳಿದ್ದು ತಪ್ಪೇ? 2013ರಲ್ಲಿ ಇದೇ ಪಕ್ಷದ ಸರಕಾರ ಬಂದಾಗ ವೀರಶೈವ- ಲಿಂಗಾಯತರನ್ನು ಒಡೆಯುವ ಪ್ರಯತ್ನ ನಡೆಸಿದ್ದರು ಎಂದು ದೂರಿದರು.

ರಸ್ತೆಗಳು ಗುಂಡಿಮಯ

ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿಯಾಗಿದೆ. ಗ್ಯಾರಂಟಿಗಳನ್ನೂ ಸರಿಯಾಗಿ ಕೊಡುತ್ತಿಲ್ಲ; ಒಂದೇ ವರ್ಷದಲ್ಲಿ ಅವರು ವಿಫಲವಾಗಿದ್ದಾರೆ. ಹೆಣ್ಮಕ್ಕಳಿಗೆ ಎರಡ್ಮೂರು ತಿಂಗಳುಗಳಿಂದ ಹಣ ಬಿಡುಗಡೆ ಆಗಿಲ್ಲ. ಉತ್ತರ ಕರ್ನಾಟಕದ ಪಡಿತರ ಸಾಗಾಟದ ಲಾರಿ ಚಾಲಕರು, ಬಸ್ ಇಲ್ಲವೆಂದು ಶಾಲಾ ಮಕ್ಕಳು ಮುಷ್ಕರ ನಡೆಸಿದ್ದಾರೆ ಎಂದು ಗಮನ ಸೆಳೆದರು.

ರಸ್ತೆಗಳಲ್ಲಿ ಗುಂಡಿಗಳೇ ಗುಂಡಿಗಳು. ಯಂತ್ರೋಪಕರಣ ಒಯ್ದರೆ ಅದರ ಬಿಡಿಭಾಗ ಅಲುಗಾಡುತ್ತದೆ. ಇದನ್ನು ಬಿಇಎಲ್ ಅಧಿಕಾರಿಗಳೇ ಹೇಳಿದ್ದಾರೆ ಎಂದು ಕು. ಶೋಭಾ ಕರಂದ್ಲಾಜೆ ಎಂದರು.

ಕಾಂಗ್ರೆಸ್ ಸರಕಾರ ರಾಜ್ಯವನ್ನು ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ವಾಗ್ದಾಳಿ ನಡೆಸಿದರು. ಕಿರಣ್ ಮಜುಂದಾರ್ ಷಾ ಅವರು ವಿದೇಶೀಯರು ರಸ್ತೆ ಗುಂಡಿ, ಕಸದ ಕುರಿತು ಗಮನ ಸೆಳೆದುದನ್ನು ತಿಳಿಸಿದ್ದಾರೆ.

ಎಲ್ಲ ಸಚಿವರೂ ಅವರ ವಿರುದ್ಧ ಮುಗಿಬಿದ್ದಿದ್ದಾರೆ.ಸರ್ಕಾರದ ವೈಫಲ್ಯತೆಯನ್ನು ತಿಳಿಸುವ ಮೋಹನ್‍ದಾಸ್ ಪೈ ಸೇರಿ ಇಂಥ ಎಲ್ಲರ ವಿರುದ್ಧ ಮಾತನಾಡುವ ಕೆಲಸ ಸಚಿವರಿಂದ ನಡೆದಿದೆ. ಟೀಕೆ-ಟಿಪ್ಪಣಿ, ಸಲಹೆಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ನಿಷೇಧ ಸಾಧ್ಯವೇ..?

ನೆಹರೂ, ಇಂದಿರಾ ಗಾಂಧಿಯವರಿಗೆ ಹೆದರದ ಆರೆಸ್ಸೆಸ್, ಪ್ರಿಯಾಂಕ್ ಖರ್ಗೆಯಂಥ ಚಮಚಾಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಕು. ಶೋಭಾ ಕರಂದ್ಲಾಜೆ ಅವರು ಸ್ಪಷ್ಟವಾಗಿ ನುಡಿದರು. ಇಂಥ ಸಿದ್ದರಾಮಯ್ಯನವರ ಸರ್ಕಾರವನ್ನು ನಾವು ದೇಶದಲ್ಲಿ ಬಹಳ ನೋಡುತ್ತಿದ್ದೇವೆ ಎಂದರು.

2-3 ರಾಜ್ಯಗಳಲ್ಲಿ ಸರ್ಕಾರ ನಡೆಸಿಕೊಂಡು ನಾವು ಬಿಜೆಪಿ, ಆರೆಸ್ಸೆಸ್ ಅನ್ನು ಬೆದರಿಸುತ್ತೇವೆ ಎಂದರೆ ಅದು ಮೂರ್ಖತನ ಎಂದು ನುಡಿದರು. 1948ರಲ್ಲಿ ಆರೆಸ್ಸೆಸ್ ನಿಷೇಧಿಸಿದ್ದರು. ಆಮೇಲೆ ಏನಾಯಿತು? ನೀವೇನೂ ಮಾಡಲಾಗಲಿಲ್ಲ; 1975ರಲ್ಲಿ ನಮ್ಮೆಲ್ಲ ನಾಯಕರನ್ನು ಬಂಧಿಸಿದ್ದರು. ಫ್ರೀಡಂ ಪಾರ್ಕಿನ ಹಳೆ ಜೈಲಿನಲ್ಲಿ ಆಡ್ವಾಣಿ, ವಾಜಪೇಯಿ ಅವರಿದ್ದರು. ಏನಾಯಿತು ಎಂದು ಕೇಳಿದರು.

ಇವತ್ತು ಆರೆಸ್ಸೆಸ್ ಒಂದು ಹೆಮ್ಮರವಾಗಿದೆ. ನೆಹರೂ, ಇಂದಿರಾ ಗಾಂಧಿ ಮಾಡಲು ಆಗದ್ದನ್ನು ಕೇವಲ ಮಲ್ಲಿಕಾರ್ಜುನ ಖರ್ಗೆಯ ಹೆಸರಿನಲ್ಲಿ ಬದುಕುವ ಪ್ರಿಯಾಂಕ್ ಖರ್ಗೆ ಕೈಲಿ ಮಾಡಲಾಗುತ್ತದೆಯೇ? ಕುರ್ಚಿಗಾಗಿ ದಿನನಿತ್ಯ ಜಗಳಾಡುವ ಸಿದ್ದರಾಮಯ್ಯ ಮಾಡಲು ಸಾಧ್ಯವೇ ? ಎಂದು ಪ್ರಶ್ನಿಸಿದರು.

ಕಮಿಷನ್ ಮತ್ತು ಹಣ ಬಿಡುಗಡೆ ಆಗದ ಆರೋಪ ಮುಂದಿಟ್ಟು ಗುತ್ತಿಗೆದಾರರೂ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಭಾಗ್ಯವತಿ ಎಂಬ ಗ್ರಂಥಪಾಲಕಿ ವೇತನ ಸಿಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದೆಡೆ ಜನರ ಆತ್ಮಹತ್ಯೆಗಳು, ಹದಗೆಟ್ಟ ಕಾನೂನು- ಸುವ್ಯವಸ್ಥೆ, ಮಕ್ಕಳ ಮೇಲೂ ಅತ್ಯಾಚಾರ ನಡೆದಿದೆ. ಬೆಂಗಳೂರಿನಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳಿದವರು ವಾಪಸ್ ಬರುವ ಗ್ಯಾರಂಟಿ ಇಲ್ಲವಾಗಿದೆ. ಗುಂಡಿಯಲ್ಲಿ ಸಾಯುವ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.

ರಸ್ತೆಯಲ್ಲಿ ಓಡಾಡದ ಸಿಎಂ

ರಾಜ್ಯದಲ್ಲಿ ನೆರೆ ಬಂದಿದೆ. ಎಷ್ಟು ಜಿಲ್ಲೆಗೆ ಪ್ರವಾಸ ಹೋಗಿದ್ದೀರಿ? ಎಲ್ಲೆಲ್ಲಿ ಪ್ರಗತಿ ಪರಿಶೀಲನಾ ಸಭೆ ಮಾಡಿದ್ದೀರಿ? ಎಷ್ಟು ಪರಿಹಾರ ಕೊಟ್ಟಿದ್ದೀರಿ ಎಂದು ಅವರು ಪ್ರಶ್ನಿಸಿದರು. ಜನ ಸತ್ತಿದ್ದಾರೋ, ಬದುಕಿದ್ದಾರೋ ಎಂದು ಕೇಳಬೇಕಾದ ಸರ್ಕಾರ ಬದುಕಿಲ್ಲ ಎಂದು ಆರೋಪಿಸಿದರು.

ಸಚಿವರು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿಲ್ಲ; ಗ್ಯಾರಂಟಿ ವಿತರಣೆ ಕುರಿತು ಪರಿಶೀಲನೆ ನಡೆಯುತ್ತಿಲ್ಲ; ಗ್ಯಾರಂಟಿ ಸಮಿತಿ ಅಧ್ಯಕ್ಷರು ಕಾರಿನಲ್ಲಿ ಓಡಾಡಿ ಮಜಾ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯವರು ರಸ್ತೆಯಲ್ಲಿ ಓಡಾಡುತ್ತಿಲ್ಲ. ಹೆಲಿಕಾಪ್ಟರ್‍ನಲ್ಲಿ ಹೋಗಿ ಇಳಿದು ಜನರನ್ನು ಭೇಟಿ ಮಾಡದೇ, ಅಭಿಪ್ರಾಯ ಕೇಳದೇ ಬೆಂಗಳೂರಿಗೆ ವಾಪಸ್ ಹೋಗುತ್ತಾರೆ ಎಂದು ಛೇಡಿಸಿದರು.

ಕಲಬುರ್ಗಿಯಿಂದ ದಸರಾ ವೇಳೆ ಬಲೂನ್ ಮಾರಲು ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ ಮಗುವನ್ನು ಹೊತ್ತೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಇದೆಲ್ಲವನ್ನೂ ದಿಕ್ಕು ತಪ್ಪಿಸಲು ಪ್ರಿಯಾಂಕ್ ಖರ್ಗೆಯನ್ನು ಛೂ ಬಿಟ್ಟಿದ್ದಾರೆ. ಆರೆಸ್ಸೆಸ್ ನಿಷೇಧದ ಪತ್ರ ಬರೆಸಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.

ರಾಜ್ಯ ವಕ್ತಾರ ಎಂ.ಜಿ.ಮಹೇಶ್, ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಮಾಜಿ ಸದಸ್ಯ ಎಸ್.ವಿ. ರಾಘವೇಂದ್ರ, ಜಿಲ್ಲಾ ವಕ್ತಾರರಾದ ಶ್ರೀಮತಿ ಕಾಂತಿ ಶೆಟ್ಟಿ, ನಾಗರಾಜ್ ನಾಯಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net