

ಯೂಕ್ರೇನ್ ಮೇಲೆ ನಿರ್ದಿಷ್ಟ ಉದ್ದೇಶ ಇಟ್ಟುಕೊಂಡು ದಾಳಿ ನಡೆಸಿದ್ದು, ಅದು ಈಡೇರದ ಹೊರತು ಯುದ್ಧ ನಿಲ್ಲಿಸುವುದಿಲ್ಲ ಎಂದು ರಷ್ಯಾ ಸ್ಪಷ್ಟಪಡಿಸಿದೆ. ಈ ನಡುವೆ, ಪಾಶ್ಚಾತ್ಯ ರಾಷ್ಟ್ರಗಳು ಹೇರಿದ ನಿರ್ಬಂಧಗಳು ರಷ್ಯನ್ನರನ್ನು ಬಾಧಿಸಿದಂತೆಯೇ, ಇತರೆ ದೇಶಗಳ ಜನರನ್ನೂ ಬಾಧಿಸಿರುವುದು ವಾಸ್ತವ. ನಿರ್ಬಂಧಗಳ ಮೂಲಕ ರಷ್ಯಾವನ್ನು ಹಿಮ್ಮೆಟ್ಟಿಸಬಹುದು ಎಂಬ ಪಾಶ್ಚಾತ್ಯ ರಾಷ್ಟ್ರಗಳ ಚಿಂತನೆ ಫಲ ನೀಡುವಲ್ಲಿ ವಿಫಲವಾಗುತ್ತಿರುವುದು ಗೋಚರವಾಗಿದೆ. ಇದಕ್ಕೆ ಕಾರಣವಾಗಿರುವ ಅಂಶಗಳ ಅವಲೋಕನ ಇಲ್ಲಿದೆ.
ಅತಿ ಹೆಚ್ಚು ನಿರ್ಬಂಧಿತ ರಾಷ್ಟ್ರ: ಸದ್ಯ ಜಗತ್ತಿನ ಅತಿಹೆಚ್ಚು ನಿರ್ಬಂಧಿತ ರಾಷ್ಟ್ರ ರಷ್ಯಾ ಆಗಿದ್ದು, 6,900ಕ್ಕೂ ಹೆಚ್ಚು ನಿರ್ಬಂಧಗಳನ್ನು ಎದುರಿಸುತ್ತಿದೆ. 40ಕ್ಕೂ ಹೆಚ್ಚು ದೇಶಗಳು ರಷ್ಯಾ ಮೇಲೆ ಮತ್ತು ಪ್ರಮುಖ ರಷ್ಯನ್ನರ ಮೇಲೆ ನಿರ್ಬಂಧ ಹೇರಿವೆ. ಇದು ರಷ್ಯಾದ ಆರ್ಥಿಕತೆ ಕುಸಿಯಲು ಕಾರಣವಾಗದಿದ್ದರೂ, ಒಂದಷ್ಟು ಹೊಡೆತ ನೀಡುವುದು ಖಚಿತ. ಜಗತ್ತಿನಾದ್ಯಂತ ಸಹ ಇದರ ವ್ಯತಿರಿಕ್ತ ಪರಿಣಾಮ ಆಗತೊಡಗಿದೆ.
ಇಂಧನ ಸಂಪದ್ಭರಿತ ದೇಶ: ರಷ್ಯಾ ಇಂಧನ ಸಂಪದ್ಭರಿತ ರಾಷ್ಟ್ರವಾಗಿದ್ದು, ವಿವಿಧ ದೇಶಗಳೊಂದಿಗೆ ರಷ್ಯಾದ ದ್ವಿಪಕ್ಷೀಯ ಸಂಬಂಧಗಳಿಗೆ ಇಂಧನವೇ ಮೂಲಾಧಾರವಾಗಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ರಷ್ಯಾಕ್ಕೆ ದೊಡ್ಡ ಪಾಲಿದೆ. ಅಲ್ಲಿ ಉತ್ಪಾದನೆ ಯಾಗುವ ಅರ್ಧಕ್ಕಿಂತ ಹೆಚ್ಚು ಇಂಧನ ಯುರೋಪ್ಗೆ ರಫ್ತಾಗುತ್ತದೆ. 2030ಕ್ಕಿಂತ ಮುಂಚಿತವಾಗಿ ರಷ್ಯಾದಿಂದ ಇಂಧನ ಆಮದು ಮಾಡುವುದನ್ನು ನಿಲ್ಲಿಸಲಾಗದು. ಇದಕ್ಕೆ ಹೋಲಿಸಿದರೆ ಭಾರತ ಆಮದು ಮಾಡಿಕೊಳ್ಳುವ ಇಂಧನ ಪ್ರಮಾಣ ತುಂಬಾ ಕಡಿಮೆ. ಯುರೋಪ್ ಒಕ್ಕೂಟದಲ್ಲಿ ಈಗ ರಷ್ಯಾದಿಂದ ಇಂಧನ ಆಮದು ಕಡಿಮೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಹಣದುಬ್ಬರ ಅಬ್ಬರ: ಜಗತ್ತಿನಾದ್ಯಂತ ಜೀವನ ವೆಚ್ಚ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಣದುಬ್ಬರ ಏರಿಕೆ ಇದಕ್ಕೆ ಕಾರಣ. ಕೆಪಿಎಂಜಿಯ ಏಪ್ರಿಲ್ 1ರ ವರದಿ ಪ್ರಕಾರ, ಜಾಗತಿಕ ಹಣದುಬ್ಬರ ಪ್ರಮಾಣ ಈ ವರ್ಷ 4.5%ನಿಂದ 7.7% ತನಕ ಏರಿದೆ. 2023ರಲ್ಲಿ ಶೇಕಡ 2.9ರಿಂದ ಶೇಕಡ 4.3ರ ತನಕ ಏರಲಿದೆ. ಹಣದುಬ್ಬರ ಕೆಲವು ರಾಷ್ಟ್ರಗಳಲ್ಲಿ ಕಡಿಮೆ ಎಂದೆನಿಸಿದರೂ, ಅಲ್ಲಿ ದಶಕಗಳಲ್ಲೇ ಹೆಚ್ಚಿನ ಹಣದುಬ್ಬರ ದಾಖಲಾಗಿದೆ.
ಭಾರತಕ್ಕೂ ತಟ್ಟಿದ ಬಿಸಿ: ಯುದ್ಧದ ಪರಿಣಾಮ, ಭಾರತದಲ್ಲಿ ಮಾರ್ಚ್ ತಿಂಗಳ ಹಣದುಬ್ಬರ ಪ್ರಮಾಣ 17 ತಿಂಗಳ ಗರಿಷ್ಠ ಮಟ್ಟದಲ್ಲಿದೆ. ಚಿಲ್ಲರೆ ಹಣದುಬ್ಬರ ಶೇಕಡ 6.95 ಮತ್ತು ಸಗಟು ಹಣದುಬ್ಬರ ಶೇಕಡ 14.55 ಆಗಿದೆ. ಭಾರತದ ವಿದೇಶಿ ಮೀಸಲು ನಿಧಿ ಕೂಡ ಏ.8ರ ದತ್ತಾಂಶ ಪ್ರಕಾರ, 11.173 ಶತಕೋಟಿ ಡಾಲರ್ ಕುಸಿದು 606.475 ಶತಕೋಟಿ ಡಾಲರ್ಗೆ ತಲುಪಿದೆ. ವಾರದ ಅವಧಿಯಲ್ಲಿ ಅತ್ಯಧಿಕ ಕುಸಿತ ಮಾರ್ಚ್ 11ಕ್ಕೆ ಕೊನೆಗೊಂಡ ವಾರದಲ್ಲಿ 9.6 ಶತಕೋಟಿ ಡಾಲರ್ ಕುಸಿತ ದಾಖಲಾಗಿತ್ತು.
ಸಿಮೆಂಟ್ ದರ ಶೇಕಡ 6-13 ಹೆಚ್ಚಳ: ಕಟ್ಟಡ ನಿರ್ಮಾಣ ಕ್ಷೇತ್ರದ ಮೂಲಗಳ ಪ್ರಕಾರ, ರಷ್ಯಾ-ಯೂಕ್ರೇನ್ ಬಿಕ್ಕಟ್ಟಿನ ಪರಿಣಾಮ ಕಟ್ಟಡ ನಿರ್ಮಾಣ ಕ್ಷೇತ್ರದ ಮೇಲೂ ಆಗಿದೆ. ಸಿಮೆಂಟ್ ದರ ಶೇಕಡ 6ರಿಂದ ಶೇಕಡ 13ರ ತನಕ ಏರಿಕೆಯಾಗಲಿದೆ. ಈ ನಡುವೆ, ಕಲ್ಲಿದ್ದಲು, ಪೆಟ್ಕೋಕ್ ದರ ಕಳೆದ ಆರು ತಿಂಗಳ ಅವಧಿಯಲ್ಲಿ ಶೇಕಡ 30-50 ಏರಿದೆ. ಕ್ರಿಸಿಲ್ ವರದಿ ಪ್ರಕಾರ, ಸಿಮೆಂಟ್ ದರ ಪ್ರತಿ ಬ್ಯಾಗ್ಗೆ 390 ರೂಪಾಯಿ ಆಗಿದೆ. ಈಗ ಇದು ಇನ್ನೂ 25ರಿಂದ 50 ರೂಪಾಯಿಯಷ್ಟು ಏರಿದೆ.