

ಬೆಂಗಳೂರು: ಸರಳ ವಾಸ್ತು ಎಂದೇ ಪ್ರಸಿದ್ಧಿ ಪಡೆದ ಚಂದ್ರಶೇಖರ ಅಂಗಡಿ ಗುರೂಜಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಆರೋಪಿ ಮಹಂತೇಶ ಶಿರೂರ್‌ಗೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ಮಹತೇಂಶ್ ಶಿರೂರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಸ್.ರಾಚಯ್ಯ ಅವರ ಪೀಠ ಆದೇಶಿಸಿದೆ.
ವಾದ - ಪ್ರತಿವಾದ ಆಲಿಸಿದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಹಳೆಯ ದ್ವೇಷದಿಂದ ಅರ್ಜಿದಾರ ಆರೋಪಿ ಈ ಕೃತ್ಯ ಎಸಗಿದ್ದಾರೆ. ಇದೊಂದು ಪೂರ್ವಯೋಜಿತ ಕೃತ್ಯ ಎನ್ನುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಮೃತರಿಗೆ ಚಾಕುವಿನಿಂದ 56 ಬಾರಿ ಇರಿದು ಗಾಯಗೊಳಿಸಿ ಕೊಲೆ ಮಾಡಲಾಗಿದೆ. ಅರ್ಜಿದಾರ ಎಸಗಿದ ಈ ಕೃತ್ಯ ಭಯಾನಕವಾಗಿದ್ದು, ಭಾರಿ ಪ್ರಮಾಣದಲ್ಲಿ ಸಂಚಲವನ್ನು ಸೃಷ್ಟಿಸಿದೆ.
ಅಲ್ಲದೆ, ಮೃತ ಗುರೂಜಿಯ ಕುಟುಂಬದ ಸದಸ್ಯರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ ಜಾಮೀನು ಅರ್ಜಿ ತೀರ್ಮಾನಿಸುವಾಗ ಆರೋಪಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಆದರೆ, ವೈಯಕ್ತಿಕ ಸ್ವಾತಂತ್ರ ನಿರಂಕುಶವಾಗಿರುವುದಿಲ್ಲ. ಅದನ್ನು ನ್ಯಾಯಯುತವಾದ ಕಾರಣಗಳಿಂದ ನಿರ್ಬಂಧಿಸಹುದು. ವ್ಯಕ್ತಿಯು ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದಾಗ ವೈಯಕ್ತಿಕ ಸ್ವತಂತ್ರವ್ಯನ್ನು ನಿರ್ಬಂಧಿಸಬಹುದು.
ಸಮಾಜವು ಓರ್ವ ವ್ಯಕ್ತಿಯಿಂದ ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತದೆ. ಪ್ರಜೆಯು ಕಾನೂನು ಪಾಲಿಸಬೇಕಾಗುತ್ತದೆ. ಸಮಾಜದ ನಿಯಮಗಳಿಗೆ ಗೌರವ ತೋರಿಸಬೇಕಾಗುತ್ತದೆ. ಅರ್ಜಿದಾರ ಚಂದ್ರಶೇಖರ ಗುರೂಜಿಯನ್ನು ಕೊಲೆ ಮಾಡಿರುವುದು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಮತ್ತು ದಾಖಲೆಗಳಿಂದ ತಿಳಿದುಬರುವ ಕಾರಣ ಜಾಮೀನು ಪಡೆಯಲು ಮಹಂತೇಶ್ ಅರ್ಹನಾಗಿಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.