

ಬೆಂಗಳೂರು: ಸರ್ಕಾರಿ ಜಾಗ, ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸಬೇಕೆಂಬ ಸ್ವಪಕ್ಷೀಯರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ಈ ತೀರ್ವನದನ್ವಯ ಇನ್ನು ಮುಂದೆ ಖಾಸಗಿ ಸಂಘ-ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳಿಗೆ ಸರ್ಕಾರಿ ಜಾಗ ಬಳಸುವುದು ಅಷ್ಟು ಸಲೀಸಲ್ಲ. ಚಾಲ್ತಿ ಕಾಯ್ದೆ, ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಸರ್ಕಾರಿ ಜಾಗಗಳು, ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಏರ್ಪಡಿಸಲು ಪೂರ್ವಾನು ಮತಿ ಕಡ್ಡಾಯವಾಗಿದೆ. ಅದರಲ್ಲೂ ನೋಂದಾಯಿತ ಸಂಘ-ಸಂಸ್ಥೆಗಳಿಗೆ ಮಾತ್ರ ಅನುಮತಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಆ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಚಟುವಟಿಕೆಗಳಿಗೆ ಪರೋಕ್ಷವಾಗಿ ನಿರ್ಬಂಧ ಹೇರಲು ಮುಂದಾಗಿದೆ. ಆರ್ಎಸ್ಎಸ್ ನೋಂದಾಯಿತ ಸಂಘವಲ್ಲವೆಂಬ ಧ್ವನಿಗೆ ಸಂಪುಟ ಬಲ ತುಂಬಿದೆ. ಸರ್ಕಾರಿ ಜಾಗಗಳು, ಸಾರ್ವಜನಿಕ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆ ಗಳಿಗೆ ನಿರ್ಬಂಧ ಹೇರುವಂತೆ ಕೋರಿ ಸಿಎಂಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದರು.
ಈ ಪತ್ರವನ್ನು ಮುಖ್ಯ ಕಾರ್ಯದರ್ಶಿಗೆ ರವಾನಿಸಿದ್ದ ಸಿಎಂ ಪರಿಶೀಲಿಸಿ ಜರೂರು ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ನಿರೀಕ್ಷೆಯಂತೆ ಸಂಪುಟ ಸಭೆಯ ಅಜೆಂಡಾದಲ್ಲಿ ಖಾಸಗಿ ಸಂಘ, ಸಂಸ್ಥೆಗಳು/ ಸಂಘಟನೆಗಳಿಗೆ ಸರ್ಕಾರಿ ಜಾಗ ಬಳಕೆ ವಿಷಯವಿತ್ತು, ಆರ್ಎಸ್ಎಸ್ ಹೆಸರು ಉಲ್ಲೇಖಿಸಿರಲಿಲ್ಲ. ಆದರೆ ಚರ್ಚೆಯ ಕಾಲಕ್ಕೆ ಸಿಎಂ ಆದಿಯಾಗಿ ಎಲ್ಲ ಸಚಿವರು ಆರ್ಎಸ್ಎಸ್ ಪ್ರಸ್ತಾಪಿಸಿದರು ಎಂದು ಮೂಲಗಳು ತಿಳಿಸಿವೆ.
ಕಾರ್ಯನೀತಿ ಮುಖ್ಯಾಂಶ: ಖಾಸಗಿ ಸಂಘ-ಸಂಸ್ಥೆಗಳು/ ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ಕಾನೂನು ಬದ್ಧವಾಗಿ ನಡೆಸಲು ಅನುಮತಿ ಪಡೆಯುವುದು ಕಾರ್ಯನೀತಿ ಮುಖ್ಯಾಂಶವಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಸಭೆಯ ಬಳಿಕ ಮಾತನಾಡಿ ಪ್ರಸ್ತುತ ಸಂದರ್ಭ, ಸನ್ನಿವೇಶಗಳು ಇಂತಹದೊಂದು ನಿರ್ಧಾರಕ್ಕೆ ಕಾರಣವಾಗಿದೆ ಎಂಬ ಸಮಜಾಯಿಷಿ ನೀಡಿದರು. ಸರ್ಕಾರಿ ಜಾಗದಲ್ಲಿ ಅತಿಕ್ರಮ ಪ್ರವೇಶ, ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗದಂತೆ ತಡೆಯುವುದು ಈ ನಿರ್ಧಾರದ ಮುಖ್ಯ ಉದ್ದೇಶವೆಂದರು.
ಹಲವಾರು ಖಾಸಗಿ ಸಂಸ್ಥೆಗಳು, ಸಂಘಗಳು ತಮ್ಮ ಚಟುವಟಿಕೆಗಳು, ಪ್ರಚಾರ, ತರಬೇತಿ, ಉತ್ಸವಗಳು, ಸದಸ್ಯರು, ಬೆಂಬಲಿಗರ ಸಭೆ ನಡೆಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳು/ ಸರ್ಕಾರ ಆಸ್ತಿ, ಜಮೀನು, ಆಟದ ಮೈದಾನ, ಸಾರ್ವಜನಿಕ ರಸ್ತೆ, ಉದ್ಯಾನವನ ಬಳಕೆ ಮಾಡುತ್ತವೆ. ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯದೆ, ಅನೇಕ ಸಂದರ್ಭಗಳಲ್ಲಿ ಮಾಹಿತಿ ನೀಡದೆ ಬಳಸಿಕೊಳ್ಳುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ನಿಯಂತ್ರಿಸುವ ಸಲುವಾಗಿ ಪೂರ್ವಾನುಮತಿ ಪಡೆದು, ಬಳಸಿಕೊಳ್ಳಬೇಕೆಂಬ ಪ್ರಸ್ತಾವನೆಯನ್ನು ಗೃಹ ಇಲಾಖೆ ಮುಂದೆ ಮಂಡಿಸಿತ್ತು ಎಂದೂ ಹೇಳಿದರು. ಸಾರ್ವಜನಿಕ ಸ್ಥಳಗಳ ವ್ಯಾಪ್ತಿಗೆ ಮುಜರಾಯಿ ಇಲಾಖೆ ದೇವಸ್ಥಾನಗಳು, ಉದ್ಯಾನವನಗಳು, ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಜಾಗಗಳು ಒಳಪಡುತ್ತವೆ ಎಂದು ಸ್ಪಷ್ಟಪಡಿಸಿದರು.
ವಿಸ್ತೃತ ಆದೇಶ: ಚಾಲ್ತಿ ಆದೇಶ, ನಿಯಮಗಳಿಗೆ ಮತ್ತಷ್ಟು ವಿವರ ಸೇರಿಸಲಾಗುತ್ತದೆ. ಕಾನೂನು, ನಿಯಮಗಳ ಬಗ್ಗೆ ಸ್ಪಷ್ಟತೆ ನೀಡಿ ಸಂಬಂಧಿಸಿದ ಇಲಾಖೆಗಳು ಮಾರ್ಗಸೂಚಿ ಸಹಿತ ವಿಸõತ ಆದೇಶ ಹೊರಡಿಸಲು ಸಚಿವ ಸಂಪುಟ ನಿರ್ದೇಶಿಸಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸರ್ಕಾರ ಕೊಟ್ಟ ಕಾರಣ: ಸಾರ್ವಜನಿಕರು ಬಳಸಲು ಯಾವುದೇ ಅಡಚಣೆ, ಬೆದರಿಕೆಗಳು ಉದ್ಭವಿಸದಂತೆ ಕ್ರಮವಹಿಸುವುದು ಅಗತ್ಯವಾಗಿದೆ. ಅಲ್ಲದೆ, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ, ಸಾರ್ವಜನಿಕರ ಅಸಮಾಧಾನ ನಿವಾರಿಸುವ ದೃಷ್ಟಿಯಿಂದಲೂ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಟೀಲ ಸಮರ್ಥಿಸಿಕೊಂಡರು. ತಮಿಳುನಾಡು ಮಾದರಿಯಲ್ಲಿ ಆರ್ಎಸ್ಎಸ್ ನಿರ್ಬಂಧ ಬಗ್ಗೆ ಸಿಎಂ ಹೇಳಿದ ವಿಚಾರ ಪ್ರಸ್ತಾಪವಾಯಿತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲಿಲ್ಲ.
ಸಂಪುಟ ಸಮಚಿತ್ತದ ನಿಲುವು: ಸರ್ಕಾರಿ ಸ್ಥಳ ಬಳಕೆ ವಿಚಾರದಲ್ಲಿ ಭಾವಾವೇಶ, ಉದ್ವೇಗ, ಆತುರದ ನಿರ್ಧಾರಗಳು ಸರಿಯಲ್ಲ. ಸೈದ್ಧಾಂತಿಕ, ರಾಜಕೀಯವಾಗಿ ವಿಚಾರಗಳು ಭಿನ್ನವಾಗಿದ್ದರೂ ಸರ್ಕಾರ ನಡೆಸುತ್ತಿದ್ದೇವೆ ಎಂಬುದನ್ನು ಮರೆಯಬಾರದು ಎಂಬ ಸಮಚಿತ್ತದ ನಿಲುವು ಸಂಪುಟ ತಳೆದಿದೆ. ಆರ್ಎಸ್ಎಸ್ಗೆ ನಿರ್ಬಂಧ ವಿಧಿಸುವ ಮಸೂದೆ ಬಗ್ಗೆ ಸಚಿವರೊಬ್ಬರು ಪ್ರಸ್ತಾಪಿಸಿದರು. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಸಿಎಂ ಸಿದ್ದರಾಮಯ್ಯ ಎಲ್ಲ ಸಚಿವರಿಗೆ ಮುಕ್ತ ಅವಕಾಶ ಕೊಟ್ಟರು ಎಂದು ತಿಳಿದಿದೆ. ‘ಯೋಚನೆ ಮಾಡಿ, ಅವಸರ ಬೇಡ, ಅಧಿಕಾರ ಶಾಶ್ವತವಲ್ಲ’ ಎಂದು ಪ್ರಮುಖ ಸಚಿವರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು. ಏನಾದರೂ ಕ್ರಮಕೈಗೊಂಡರೆ ಸೈದ್ಧಾಂತಿಕವಾಗಿ ಅವರಿಗೆ ಅನುಕೂಲವಾಗುತ್ತದೆ (ಅಡ್ವಾಂಟೇಜ್) ಆಗುತ್ತದೆ, ಇಷ್ಟರ ಮೇಲೆ ನಿರ್ಧಾರ ನಿಮಗೆ ಬಿಟ್ಟದ್ದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು ಎನ್ನಲಾಗಿದೆ. ನಂತರ ಸಿದ್ದರಾಮಯ್ಯ ಮಾತನಾಡಿ ಹಾಗೆಲ್ಲ ಆರ್ಎಸ್ಎಸ್ ಮೇಲೆ ನಿರ್ಬಂಧ ಹೇರುವ ಕಾನೂನು ಮಾಡಲು ಬರುವುದಿಲ್ಲ. ಕಾನೂನು, ನಿಯಮ, ತಾಂತ್ರಿಕ ಸಮಸ್ಯೆ ಎದುರಾಗಲಿವೆ ಎಂದು ಬಿಲ್ ಬಗ್ಗೆ ಪ್ರಸ್ತಾಪಿಸಿದ ಸಚಿವರಿಗೆ ಸಮಾಧಾನಪಡಿಸಿದರು. ಜತೆಗೆ ಚಾಲ್ತಿ ಕಾನೂನು, ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ ನೀಡೋಣವೆಂಬ ಸಿಎಂ ಮಾತಿಗೆ ಸಂಪುಟ ಸಮ್ಮತಿ ನೀಡಿತು ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳು, ಸಂಘಟನೆಗಳು ನಡೆಸುವ ಚಟುವಟಿಕೆಗಳಿಗೆ ಅನುಮತಿ ನೀಡುವ ಸಂಬಂಧ ಮಾಲೀಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳಿಗೆ ಪರಿಶೀಲನೆ ಜವಾಬ್ದಾರಿ ನೀಡಲಾಗಿದೆ.
ಸಂಪುಟ ಸಭೆಯ ನಿರ್ಣಯ1. ಪಾಲಿಕೆ, ಪುರಸಭೆ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ವಿುಸಿರುವ ವಾಸದ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ(ಒಸಿ) ಪಡೆಯುವುದರಿಂದ ವಿನಾಯಿತಿ ನೀಡಲು ನಿರ್ಧಾರ2. ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ ಹೆಚ್ಚಳ, ಮಾನವೀಯ ನೆಲೆಯಲ್ಲಿ ಮಾನದಂಡ ಬದಿಗಿಟ್ಟು ತೀರ್ಮಾನ3. ಮೈಸೂರು, ಕಲಬುರಗಿಯಲ್ಲಿ ತಲಾ 100 ಕೋಟಿ ರೂ. ವೆಚ್ಚದಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಸ್ಥಾಪನೆಗೆ ಒಪ್ಪಿಗೆ4. ಬೆಂಗಳೂರಿನಲ್ಲಿ 80 ಸಾವಿರ ವೀಕ್ಷಕರ ಸಾಮರ್ಥ್ಯ ಇರುವ ಅಂ.ರಾ. ಕ್ರಿಕೆಟ್ ಸ್ಟೇಡಿಯಂ, ಕ್ರೀಡಾಂಗಣ ಸಂಕೀರ್ಣದ ಯೋಜನೆಗೆ ತಾತ್ವಿಕ ಅನುಮೋದನೆ.5. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಗೆ ಎರಡು ಸೀರೆ ನೀಡಲು ಅನುಮತಿಯಾವ ಸ್ಥಳಕ್ಕೆ ಅನ್ವಯ..?
ಸರ್ಕಾರಿ, ಶಾಲಾ-ಕಾಲೇಜು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನ, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು, ತೆರೆದ ಸ್ಥಳಗಳು ಮತ್ತಿತರ ಆಸ್ತಿಗಳು ನಾಗರಿಕರ ಸದ್ಬಳಕೆಗೆ ನಿರ್ದಿಷ್ಟಪಡಿಸಿದ ಜಾಗಗಳಾಗಿವೆ. ಈ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಇನ್ನು ಕಡ್ಡಾಯ
ಕೆಲವು ಗ್ರಾಮ ಆಡಳಿತಾಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಗಣವೇಷಧಾರಿಗಳಾಗಿ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಹಿತಿಯಿದ್ದು, ಸೇವಾ ನಿಯಮ ಉಲ್ಲಂಘನೆಗೆ ಶಿಸ್ತುಕ್ರಮದ ಶಿಕ್ಷೆ ಕಾದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇರುವ ನಿಯಮಗಳ ಪಾಲನೆಗೆ ಕೋರಿದ್ದು, ಹೊಸದಾಗಿ ನಿಯಮಗಳನ್ನು ಮಾಡಿ ಎಂದಿಲ್ಲ. 2013ರ ಫೆಬ್ರವರಿಯಲ್ಲಿ ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರ ಶಾಲೆಗಳಲ್ಲಿ ಪಠ್ಯ ಬಿಟ್ಟು ಬೇರೆ ಯಾವುದೇ ಚಟುವಟಿಕೆ ನಡೆಸಕೂಡದು ಎಂಬ ಹೊರಡಿಸಿದ್ದ ಸುತ್ತೋಲೆ ಬಗ್ಗೆ ಪತ್ರ ಬರೆದು ಸಿಎಂ ಗಮನಕ್ಕೆ ತರಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.