ಸೋಲಿಸಿದವರಿಗೆ ಗೆಲ್ಲಿಸುವ ಹೊಣೆ!; ಮಿನಿಮತ ಸಮರದ ಸ್ವಾರಸ್ಯ

Election symbol
Published on

ಬೆಂಗಳೂರು: ಚುನಾವಣೆ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ, ಸ್ವಾರಸ್ಯ ಸಾಮಾನ್ಯ. ರಾಜಕೀಯ ನಾಯಕರು ತಮ್ಮ ಮಾತು ಮತ್ತು ನಡವಳಿಕೆಯಿಂದ ಅನೇಕ ವೈರುಧ್ಯವನ್ನು ಎದುರಿಸುವುದು ಸಹಜ. ಈ ಬಾರಿ ಉಪ ಚುನಾವಣೆಯಲ್ಲೂ ಅಂತಹ ಒಂದು ಪ್ರಸಂಗವಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದರು. ಎಚ್.ಡಿ.ಕುಮಾರಸ್ವಾಮಿ ಈ ಚುನಾವಣೆಯನ್ನು ತಮ್ಮ ಪುತ್ರನ ರಾಜಕೀಯ ಪ್ರವೇಶಕ್ಕೆ ಲಾಂಚ್ ಪ್ಯಾಡ್ ಆಗಿ ಬಳಸಿದ್ದರು. ಅವರ ಎದುರಾಳಿಯಾಗಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ. ಅವರ ಬೆನ್ನಿಗೆ ಬಿಜೆಪಿ ಬಲವಾಗಿ ನಿಂತಿತ್ತು. ಬಿ.ಎಸ್.ಯಡಿಯೂರಪ್ಪ ಆದಿಯಾಗಿ ಪ್ರಮುಖ ನಾಯಕರೆಲ್ಲ ನಿಖಿಲ್ ಸೋಲಿಸಲು ಇನ್ನಿಲ್ಲದ ಸಾಹಸ ಪಟ್ಟಿದ್ದರು. ಸುಮಲತಾ ಗೆಲುವಿನಲ್ಲಿ ಬಿಜೆಪಿ ನಾಯಕರ ಶ್ರಮವೂ ಇತ್ತು.

ಆದರಿಂದು ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ನಿಖಿಲ್ ಅವರನ್ನು ಗೆಲ್ಲಿಸುವ ಹೊಣೆ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರ ಮೇಲಿದೆ. ಅಂದು ನಿಖಿಲ್ ಬೆನ್ನಿಗೆ ನಿಂತವರು ಇಂದು ಸೋಲಿಸಲು ಟೊಂಕ ಕಟ್ಟಿದ್ದಾರೆ.

ಅದೇ ರೀತಿ 2024ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಶ್ರಮಿಸಿದವರಲ್ಲಿ ಸಿ.ಪಿ.ಯೋಗೇಶ್ವರ್ ಕೂಡ ಒಬ್ಬರು. ಈ ಬಾರಿ ಉಪ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಅವರನ್ನು ಗೆಲ್ಲಿಸಿಕೊಳ್ಳುವ ದಂಡ ನಾಯಕರ ಪೈಕಿ ಡಿ.ಕೆ.ಸುರೇಶ್ ಮುಂಚೂಣಿಯಲ್ಲಿದ್ದಾರೆಂಬುದು ವಿಶೇಷ.

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ‘ಡಿಕೆಶಿ ನೋಟು ಡಾ.ಮಂಜುನಾಥ್‌ಗೆ ಓಟು’ ಎಂಬ ಸಿ.ಪಿ.ಯೋಗೇಶ್ವರ್ ಕಾಯಿನ್ ಮಾಡಿದ್ದ ೋಷಣೆ ಅಂದಿಗೆ ಟ್ರೆಂಡ್ ಆಗಿತ್ತು. ಇಂದು ಡಿ.ಕೆ.ಶಿವಕುಮಾರ್ ಸಾರಥ್ಯದ ರಥದಲ್ಲಿ ಸಿ.ಪಿ.ಯೋಗೇಶ್ವರ್ ಉತ್ಸವಮೂರ್ತಿ ಎಂಬುದು ಗಮನಾರ್ಹ ಸಂಗತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net