ಜನರ ಸಮಸ್ಯೆಗಳ ದರ್ಶನ, ಅಹವಾಲಿಗೆ ಸ್ಪಂದನ

vidhanasoudha
Published on

ಬೆಂಗಳೂರು: ಮನೆ ಬಾಗಿಲಿಗೆ ಆಡಳಿತವನ್ನು ಕೊಂಡೊಯ್ದು ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಜಿಲ್ಲಾ ಮಟ್ಟದ ಜನತಾ ದರ್ಶನ ಅಭೂತಪೂರ್ವ ಯಶಸ್ಸು ಕಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಮೊಟ್ಟ ಮೊದಲ ಬಾರಿಗೆ ರಾಜ್ಯಾದ್ಯಂತ ಏಕ್ಕಾಲಕ್ಕೆ ಎಲ್ಲ ಜಿಲ್ಲೆಗಳಲ್ಲಿ ನಡೆದ ಜನತಾ ದರ್ಶನಕ್ಕೆ ಸಾರ್ವಜನಿಕರು ಮತ್ತು ಅಧಿಕಾರಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲೂ ಜನತಾದರ್ಶನ ನಡೆದಿದೆ.

ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಎಸ್ಪಿಗಳ ಸಮ್ಮುಖದಲ್ಲಿ ಜನತಾದರ್ಶನ ನಡೆಯಿತು. ಖುದ್ದು ಮುಖ್ಯಮಂತ್ರಿಗಳನ್ನು ಕಾಣಲು ಬರುತ್ತಿದ್ದವರಿಗೆ ಜಿಲ್ಲಾ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಿತು. ಜಿಲ್ಲಾ ಸಚಿವರನ್ನು ಭೇಟಿ ಮಾಡಲು ಸಾರ್ವಜನಿಕರಿಗೆ ಇದೊಂದು ಸದಾವಕಾಶವಾಗಿತ್ತು.

ಮೊದಲೆಲ್ಲ ರಾಜ್ಯಮಟ್ಟದಲ್ಲಿ ಸಿಎಂ ಜನತಾ ದರ್ಶನ ನಡೆಸುತ್ತಿದ್ದರು. ಕೆಲವು ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದಲ್ಲಿ, ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಜನತಾ ದರ್ಶನ ನಡೆಸುತ್ತಿದ್ದರು. ಆದರೆ ಇಡೀ ರಾಜ್ಯಾದ್ಯಂತ ಏಕ ಕಾಲಕ್ಕೆ ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ನಡೆದದ್ದು ಇದೇ ಮೊದಲು. ರಾಜ್ಯಾದ್ಯಂತ 6,684 ಅಹವಾಲು ಮತ್ತು ಮನವಿಗಳು ಸ್ವೀಕೃತಗೊಂಡು 21ಕ್ಕೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ. ಉಳಿದಂತೆ 6,663 ಅರ್ಜಿ, ಅಹವಾಲುಗಳು ದಾಖಲಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ರವಾನೆಯಾಗಿವೆ. (ಇದರಲ್ಲಿ ಮೌಖಿಕ ದೂರುಗಳು ಮತ್ತು ಪರಿಹಾರಗಳು ದಾಖಲಾಗಿಲ್ಲ).

ಕಂದಾಯ ಇಲಾಖೆ ಅಹವಾಲೇ ಹೆಚ್ಚು

ಸ್ವೀಕರಿಸಲಾಗಿರುವ ಅಹವಾಲುಗಳಲ್ಲಿ ಕಂದಾಯ ಇಲಾಖೆಯದ್ದೇ ಸಿಂಹಪಾಲು ಆಗಿವೆ. 2,100 ಕ್ಕೂ ಹೆಚ್ಚು ಅಹವಾಲುಗಳು ಕಂದಾಯ ಇಲಾಖೆಗೆ ಸೇರಿದ್ದಾಗಿವೆ. ನಂತರದ ಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿದ ಅಹವಾಲುಗಳಿವೆ. ಸಾವಿರಕ್ಕೂ ಅಧಿಕ ಅಹವಾಲುಗಳು ಈ ಇಲಾಖೆಗೆ ಸಂಬಂಧಿಸಿದ್ದಾಗಿವೆ. ಮೂರನೇ ಅತಿ ಹೆಚ್ಚು ಅಹವಾಲುಗಳು ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದಾಗಿವೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಎದುರಿಗೆ ಅತಿ ಹೆಚ್ಚು ಸಮಸ್ಯೆಗಳು ಮತ್ತು ಅಹವಾಲುಗಳು ಸಲ್ಲಿಕೆಯಾಗಿವೆ. ಉಳಿದಂತೆ ಜಿಲ್ಲಾಧಿಕಾರಿಗಳ ಮುಂದೆ ಸಲ್ಲಿಕೆಯಾದವುಗಳಾಗಿವೆ. ಜಿಲ್ಲಾ ರಕ್ಷಣಾಧಿಗಳ ಎದುರಿಗೆ ಕೆಲವು ಜಿಲ್ಲೆಗಳನ್ನು ಹೊರತು ಪಡಿಸಿದರೆ ಹೆಚ್ಚಿನ ಕಡೆ ಅತಿ ಕಡಿಮೆ ಅಹವಾಲುಗಳು ಸಲ್ಲಿಕೆ ಆಗಿರುವುದು ಆಶ್ಚರ್ಯದ ಸಂಗತಿಯಾಗಿದೆ.

ಅಹವಾಲು ಮೊದಲ ಮೂರು ಜಿಲ್ಲೆ ಯಾವುವು?

ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಹವಾಲುಗಳು ದಾಖಲಾಗಿವೆ. 774 ಅಹವಾಲುಗಳ ಮೂಲಕ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, 432 ಅಹವಾಲುಗಳ ಮೂಲಕ ಹಾಸನ ಎರಡನೇ ಸ್ಥಾನದಲ್ಲಿ, 423 ಅಹವಾಲುಗಳ ಮೂಲಕ ಕೋಲಾರ ಜಿಲ್ಲೆ ಮೂರನೇ ಸ್ಥಾನದಲ್ಲಿದೆ.

ಒಟ್ಟು ಅರ್ಜಿ ರೂಪದಲ್ಲಿ ಬಂದ ಅಹವಾಲುಗಳನ್ನು ದಾಖಲಿಸಿಕೊಳ್ಳುವ ಮತ್ತು ಸ್ಥಳದಲ್ಲೇ ಪರಿಹಾರಕ್ಕೆ ಪ್ರಯತ್ನಿಸುವ ಪ್ರಕ್ರಿಯೆ ಒಂದು ಕಡೆ ನಡೆದಿದೆ. ಮತ್ತೊಂದು ಕಡೆ ಅರ್ಜಿ ಇಲ್ಲದೆ ಮೌಖಿಕವಾಗಿ ಬಂದ ಅಹವಾಲುಗಳನ್ನೂ ದಾಖಲಿಸಿಕೊಳ್ಳುವ ಜತೆಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ.

ಮೌಖಿಕ ದೂರುಗಳಿಗೆ ಲಿಖಿತ ರೂಪ

ಮೌಖಿಕವಾಗಿ ದೂರು ಕೊಡಲು ಬಂದವರನ್ನು ಕುಳ್ಳಿರಿಸಿ ಅಧಿಕಾರಿ ಮತ್ತು ಸಿಬ್ಬಂದಿಯೇ ಅಹವಾಲುಗಳನ್ನು ಬರೆದು, ಬಳಿಕ ಅದನ್ನು ಓದಿಹೇಳಿ ಅರ್ಜಿದಾರರಿಂದ ಸಹಿ ಪಡೆದು ದಾಖಲಿಸಿಕೊಳ್ಳುವ ಪ್ರಯತ್ನಗಳೂ ನಡೆದಿವೆ.

ಜನತಾ ದರ್ಶನಕ್ಕೆ ಅಭೂತಪೂರ್ವ ಸ್ಪಂದನೆ

ರಾಜ್ಯಾದ್ಯಂತ ಏಕ ಕಾಲಕ್ಕೆ ನಡೆಸಿದ ಜನತಾ ದರ್ಶನ ನಮಗೂ ಮೊದಲ ಅನುಭವ. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ರೀತಿಯ ಪ್ರತಿಕ್ರಿಯೆ ಸಾರ್ವಜನಿಕರಿಂದ ಸಿಕ್ಕಿದೆ. ಅಧಿಕಾರಿಗಳ ಸ್ಪಂದನೆ ಕೂಡ ಸಮಾಧಾನಕರವಾಗಿದೆ. ಇವತ್ತಿನ ಅನುಭವದ ಹಿನ್ನೆಲೆಯಲ್ಲಿ ಮುಂದಿನ್ ಜನತಾ ದರ್ಶನದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನ ಮಾಡುತ್ತೇವೆ ಎನ್ನುವ ಅಭಿಪ್ರಾಯಗಳು ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳಿಂದ ವ್ಯಕ್ತವಾಗಿದೆ.

ಇತರೆ ಮುಖ್ಯಾಂಶಗಳು

-ಅನಿವಾರ್ಯ ಕಾರಣಗಳಿಂದ ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಜನತಾ ದರ್ಶನ ನಡೆಯಲಿಲ್ಲ. ಬೆಳಗಾವಿಯಲ್ಲಿ ಮಂಗಳವಾರ ನಡೆಯಲಿದೆ.

-ಮೈಸೂರು ಜಿಲ್ಲೆಯ ಜನತಾ ದರ್ಶನದಲ್ಲಿನ ಕುಂದುಕೊರತೆ ಮನವಿಗಳನ್ನು ಐಪಿಜಿಆರ್‌ಎಸ್‌ನಲ್ಲಿ ಅಪ್ ಲೊಡ್ ಮಾಡುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ.

-ಎಲ್ಲ ಅರ್ಜಿಗಳನ್ನು ಮ್ಯಾನುವಲ್ ಆಗಿ ಸ್ವೀಕರಿಸಲಾಗಿದ್ದು ಬಳಿಕ ಅಪ್‌ಲೋಡ್ ಮಾಡಲಾಗಿದೆ.

-ಹಾವೇರಿ ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರದ ಸಂಬಂಧ ಸಾವಿರಾರು ಅರ್ಜಿಗಳು ಬಂದಿವೆ. ಸ್ವೀಕರಿಸುವ ವೇಳೆ ಕೆಲವು ಅನಾನುಕೂಲಗಳು ಸಂಭವಿಸಿದ್ದರಿಂದ ಅವುಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗಿಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net