

ಪ್ರಾದೇಶಿಕ ಅಸಮತೋಲನದ ಶಾಪದಿಂದ ಉತ್ತರ ಕರ್ನಾಟಕ ಇನ್ನೂ ಮುಕ್ತವಾಗಿಲ್ಲ. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವಕಾಶವಂಚಿತವಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳು ಇರುವುದು ಈ ಭಾಗದಲ್ಲೇ ಎಂಬುದು ಗೊತ್ತಿರುವಂಥದ್ದೇ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನವು ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ದನಿ ಒದಗಿಸಲು ಪ್ರಯತ್ನಿಸುತ್ತಿರುವುದು ಶ್ಲಾಘನಾರ್ಹ. ಕಳೆದ ಎರಡು ದಿನಗಳಿಂದ ಶಾಸಕರು ಈ ಭಾಗದ ಸಮಸ್ಯೆಗಳ ಬಗ್ಗೆ ಮಾತನಾಡಿ, ಸರ್ಕಾರದ ಗಮನ ಸೆಳೆದಿದ್ದಾರೆ. ಹಲವು ಪ್ರಮುಖ ವಿಷಯಗಳು ಪ್ರಸ್ತಾಪವಾಗಿದ್ದು, ಸಮಸ್ಯೆಗಳ ಸ್ವರೂಪವೂ ವಿಭಿನ್ನ. ಅನುದಾನದ ಕೊರತೆ, ಅರ್ಧಕ್ಕೆ ಉಳಿದಿರುವ ಕಾಮಗಾರಿಗಳು, ಕುಡಿಯುವ ನೀರಿಗೆ ಪರದಾಟ, ಗ್ರಾಮೀಣ ಭಾಗದ ಶೋಚನೀಯ ಸ್ಥಿತಿ ಹೀಗೆ ಹಲವು ಸಮಸ್ಯೆಗಳು ಅನಾವರಣಗೊಂಡಿವೆ.
‘ಉತ್ತರ ಕರ್ನಾಟಕವು ರಾಜ್ಯದ ರಾಜಧಾನಿಯಿಂದ ದೂರ ಇರುವುದರಿಂದ ಶಾಸಕರು ಸೇರಿದಂತೆ ಜನಸಾಮಾನ್ಯರು ತಮ್ಮ ಕೆಲಸಕಾರ್ಯಗಳಿಗೆ ಬೆಂಗಳೂರಿಗೆ ತೆರಳಲು ಸಾಧ್ಯವಾಗದೆ ಅನೇಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಸಚಿವಾಲಯ ಮತ್ತು ನಿರ್ದೇಶನಾಲಯಗಳಲ್ಲಿ ಈ ಭಾಗದ ಅಧಿಕಾರಿಗಳು, ಸಿಬ್ಬಂದಿ ಇಲ್ಲದ ಕಾರಣ ಸೌಲಭ್ಯಗಳು ದೊರೆಯುತ್ತಿಲ್ಲ. ಹೀಗಾಗಿ ಈ ಎರಡು ಕಚೇರಿಗಳಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಸಿಬ್ಬಂದಿ-ಅಧಿಕಾರಿಗಳನ್ನು ಮೀಸಲು ಸೌಲಭ್ಯದ ಮೇಲೆ ನೇಮಕಾತಿ ಮಾಡಬೇಕು’ ಎಂದು ಸಲಹೆ ನೀಡಿರುವ ಆಳಂದ ಶಾಸಕ ಬಿ.ಆರ್.ಪಾಟೀಲ್, ರಾಜ್ಯದಲ್ಲಿ ಅಂತರ್ಜಲ ಕಾಪಾಡಲು ಕೇಂದ್ರ ಸರ್ಕಾರದ ಮಾದರಿಯಲ್ಲಿ ‘ಅಂತರ್ಜಲ ಬಳಕೆ ನಿಯಂತ್ರಣ ಕಾಯ್ದೆ’ ತರಬೇಕು ಎಂದಿದ್ದಾರೆ.
ಭೀಕರ ಬರಗಾಲದ ಸ್ಥಿತಿಯ ಬಗ್ಗೆಯೂ ಹಲವು ಶಾಸಕರು ಮಾತನಾಡಿದ್ದಾರೆ. ಮೇವು, ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಬೆಳೆಹಾನಿಯಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಅಲ್ಲದೆ, ಕೃಷ್ಣ ಮೇಲ್ದಂಡೆ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕಿದೆ. ಗೋದಾವರಿ, ಅಮರ್ಜಾ, ಬೆಣ್ಣೆತೊರಾ, ಭೀಮಾ ನೀರಾವರಿ ಯೋಜನೆಗಳಿಂದ ರೈತರಿಗೆ ಸೂಕ್ತವಾಗಿ ನೀರು ದೊರೆಯುವಂತಾಗಬೇಕಿದೆ ಎಂಬಂಥ ಗಂಭೀರ ಸಲಹೆಗಳು, ಬೇಡಿಕೆಗಳು ಈ ಸಂದರ್ಭದಲ್ಲಿ ಹೊರಹೊಮ್ಮಿವೆ.
ಇವು ಚರ್ಚೆಗೆ ಸೀಮಿತವಾಗಿ ಉಳಿದರೆ ಪ್ರಯೋಜನವಿಲ್ಲ. ಸರ್ಕಾರ ಶಾಸಕರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅನುಷ್ಠಾನ ಸಾಧ್ಯವಾದ ಸಲಹೆಗಳನ್ನು ವಿಳಂಬ ಮಾಡದೆ ಜಾರಿಗೆ ತರಬೇಕು. ಉತ್ತರ ಕರ್ನಾಟಕ ಭಾಗಕ್ಕೆ ಮುಂಚೆಯಿಂದಲೂ ಭರವಸೆಗಳು ಹೇರಳವಾಗಿ ಸಿಕ್ಕಿವೆ; ಆದರೆ ಅವುಗಳ ಪೈಕಿ ಈಡೇರಿರುವುದು ಕೆಲವೇ ಕೆಲವು. ಉತ್ತರ ಕರ್ನಾಟಕದ ನೋವಿನ ಕೂಗಿಗೆ ಸರ್ಕಾರ ಪರಿಣಾಮಕಾರಿಯಾಗಿ ಸ್ಪಂದಿಸಲಿ, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲಿ.