ವಿಜಯವಾಣಿ ಸಂಪಾದಕೀಯ: ರೈತರ ಸಂಕಷ್ಟಗಳಿಗೆ ಸ್ಪಂದಿಸಿ

farmers
Published on

ಕೃಷಿರಂಗವೇ ಹಾಗೇ. ಸಮತೋಲನದಲ್ಲಿ ಇದ್ದರೆ ಸುಗಮ. ಮಳೆ ಕಡಿಮೆಯಾದರೂ, ಹೆಚ್ಚಾದರೂ ಸಂಕಷ್ಟ ತಪ್ಪಿದ್ದಲ್ಲ. ಕರೊನಾ ಸೋಂಕು ಸೃಷ್ಟಿಸಿದ ಸ್ಥಿತ್ಯಂತರದಿಂದ ಕಳೆದ ಹದಿನೆಂಟು ತಿಂಗಳಿಂದ ಕೃಷಿಕ್ಷೇತ್ರ ಅನುಭವಿಸಿದ ಹಾನಿಯೂ ಅಗಾಧ. ಆದರೆ, ಈ ಬಾರಿ ಮುಂಗಾರು ಉತ್ತಮವಾಗಿದ್ದರಿಂದ ರೈತರಲ್ಲಿ ಸಂತಸ ಮನೆಮಾಡಿತ್ತು. ಅದರಂತೆ, ಬಿತ್ತನೆಯೂ ನಿರೀಕ್ಷಿತ ಪ್ರಮಾಣದಲ್ಲಿ ನಡೆಯಿತು. ಈ ಬಾರಿಯಾದರೂ ಒಂದಿಷ್ಟು ಆದಾಯ ದಕ್ಕಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದರು ಬೆಳೆಗಾರರು. ಆದರೆ, ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಮತ್ತು ಅಕ್ಟೋಬರ್​ನಲ್ಲಿ ಸುರಿದ ಅಕಾಲಿಕ ಹಾಗೂ ಭಾರಿ ಮಳೆ ರೈತರಿಗೆ ಭಾರಿ ಆಘಾತ ನೀಡಿದೆ. ಅಧಿಕ ಮಳೆಗೆ ಬಹುತೇಕ ಎಲ್ಲ ಬಗೆಯ ಬೆಳೆಗಳು ಆಹುತಿಯಾಗಿವೆ. ಫಸಲು ಕೈಗೆ ಸೇರುವ ಕೆಲ ದಿನಗಳ ಮುನ್ನ ಸಂಭವಿಸಿರುವ ಈ ನಷ್ಟದಿಂದ ರೈತರು ಚೇತರಿಸಿಕೊಳ್ಳುವುದಾದರೂ ಹೇಗೆ? ಆಹಾರಧಾನ್ಯಗಳು, ವಾಣಿಜ್ಯ ಬೆಳೆಗಳು, ತೋಟಗಾರಿಕೆ ಉತ್ಪನ್ನಗಳು ಹೀಗೆ ಎಲ್ಲ ಬಗೆಯ ಬೆಳೆಗಳನ್ನು ವರ್ಷಾಘಾತ ಆಹುತಿ ಪಡೆದಿದೆ.

ಮಳೆಯ ಆರ್ಭಟ ಅಪಾರ ಹಾನಿ ಸಂಭವಿಸಿದ ಬೆನ್ನಲ್ಲೇ ರಾಜ್ಯಕ್ಕೆ ಹಿಂಗಾರು ಪ್ರವೇಶಿಸುತ್ತಿರುವುದರಿಂದ ರೈತರಲ್ಲಿ ಆತಂಕ ಮತ್ತಷ್ಟು ಹೆಚ್ಚಿದೆ. ಅಕ್ಟೋಬರ್ 25 ಅಥವಾ 26ರಂದು ಹಿಂಗಾರು ಪ್ರವೇಶಿಸಲಿದ್ದು, ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆ, ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂಬುದು ಹವಾಮಾನ ಇಲಾಖೆಯ ಅಂದಾಜು. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮುಂದಿನ ನಾಲ್ಕು ದಿನ ಕರ್ನಾಟಕದಲ್ಲಿ ಭಾರಿ ಮಳೆಯಾಗಲಿದೆ. ಕೇರಳ, ಉತ್ತರಾಖಂಡ ರಾಜ್ಯಗಳು ಪ್ರವಾಹದಿಂದ ತತ್ತರಿಸಿರುವ ಪರಿ, ಸಂಭವಿಸಿರುವ ಹಾನಿಯೇ ಪರಿಸ್ಥಿತಿಯ ತೀವ್ರತೆಗೆ ಸಾಕ್ಷಿ. ಕರ್ನಾಟಕದಲ್ಲೂ ಮಳೆಸಂಬಂಧಿ ಅವಘಡಗಳು ವರದಿಯಾಗುತ್ತಲೇ ಇವೆ. ರಾಜಧಾನಿ ಬೆಂಗಳೂರಿನಲ್ಲಿ ಅಕ್ಟೋಬರ್ 1ರಿಂದ 20ರವರೆಗೆ ವಾಡಿಕೆಯ 109 ಮಿಮೀ ಬದಲಾಗಿ 209 ಮಿಮೀ ಮಳೆ ಸುರಿದಿದೆ. ಪರಿಣಾಮ, ಕಟ್ಟಡ ಕುಸಿತದ ಸರಣಿ ದುರಂತಗಳು ಸಂಭವಿಸಿವೆ.

ಇನ್ನು, ಈ ಹಾನಿಯಿಂದ ಜನಸಾಮಾನ್ಯರು ಅದರಲ್ಲೂ ಕೃಷಿಕರು ಚೇತರಿಸಿಕೊಳ್ಳುವ ಮುನ್ನವೇ ಹಿಂಗಾರು ಪ್ರವೇಶವಾಗುತ್ತಿದೆ. ಇನ್ನೂ ಮಳೆ ಸುರಿದರೆ ಯಾವುದೇ ಬೆಳೆ ರೈತರ ಕೈಗೆ ಸಿಗುವುದಿಲ್ಲ. ರಾಜಕೀಯ ಪಕ್ಷಗಳು ಉಪಚುನಾವಣೆ ಪ್ರಚಾರದ ಭರಾಟೆಯಲ್ಲಿ ಮುಳುಗಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ಮೈಮರೆತಿವೆ. ಈ ರಾಜಕೀಯ ಗುದ್ದಾಟದ ನಡುವೆ ರೈತರ ಸಮಸ್ಯೆ ಗೌಣವಾಗಬಾರದು. ಈಗಾಗಲೇ ಹಲವು ಸಂಕಷ್ಟಗಳನ್ನು ಎದುರಿಸಿರುವ ರೈತವರ್ಗಕ್ಕೆ ಸೂಕ್ತ ಭರವಸೆ, ಆತ್ಮಸ್ಥೈರ್ಯದ ಜತೆಗೆ ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಲಾಭವನ್ನು ಪರಿಣಾಮಕಾರಿಯಾಗಿ ತಲುಪಿಸಬೇಕಿದೆ. ಬೆಳೆವಿಮೆಯನ್ನು ಪಾರದರ್ಶಕ ಪದ್ಧತಿಯಲ್ಲಿ ಹಾನಿ ಅನುಭವಿಸಿದ ರೈತರಿಗೆ ತಲುಪಿಸಬೇಕಿದೆ. ಪರಿಹಾರ ವಿತರಣೆ ನಿಟ್ಟಿನಲ್ಲೂ ವೈಜ್ಞಾನಿಕ ನೀತಿ ಅಳವಡಿಸಿಕೊಂಡು, ಮುಂದಡಿ ಇಡಬೇಕು. ಬೆಳೆ ನಾಶದ ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸಿ, ಪರಿಹಾರ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net