ಬರಸಂಕಷ್ಟಕ್ಕೆ ಸ್ಪಂದಿಸಿ

ಬರ
Published on

ರಾಜ್ಯದಲ್ಲಿ ಭೀಕರ ಬರಗಾಲದ ಪರಿಣಾಮಗಳು ಈಗ ಒಂದೊಂದಾಗಿ ಗೋಚರಿಸಲು ಆರಂಭಿಸಿವೆ. ಆರಂಭದಲ್ಲೇ ಗಂಭೀರ ಸಂಕಷ್ಟ ಪರಿಸ್ಥಿತಿ ಇದೆ. ಒಂದೆಡೆ ಜನರಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಜಲಮೂಲಗಳು ಬತ್ತಿರುವುದರಿಂದ ಟ್ಯಾಂಕರ್ ಅವಲಂಬಿತ ಗ್ರಾಮಗಳ ಸಂಖ್ಯೆ ಹೆಚ್ಚಿದೆ. ಇನ್ನೊಂದೆಡೆ ಗ್ರಾಮೀಣ ಭಾಗದ ಜನರು ಬೇರೆ ರಾಜ್ಯ ಅಥವಾ ಕರ್ನಾಟಕದ ದೊಡ್ಡ ನಗರಗಳಿಗೆ ಗುಳೆ ಹೋಗತೊಡಗಿದ್ದಾರೆ. ಕುಟುಂಬ ಸಮೇತರಾಗಿ ಗುಳೆ ಹೋದ ಕಾರಣ ಹಳ್ಳಿಗಳಲ್ಲಿ ಬೀಗ ಹಾಕಿರುವ ಮನೆಗಳೇ ಹೆಚ್ಚು ಕಾಣುತ್ತವೆ. ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಗುಳೆ ಹೋಗುವವರ ಸಂಖ್ಯೆ ದುಪ್ಪಟ್ಟಾಗಿದೆ. ಕೆಲಸ ಹುಡುಕಿಕೊಂಡು ನಿತ್ಯ ಸಾವಿರಾರು ಜನರು ಗೋವಾ, ಉಡುಪಿ, ಮಂಗಳೂರು ಕಡೆಗೆ ವಲಸೆ ಹೋಗುತ್ತಿರುವುದು ಬರ ಪರಿಸ್ಥಿತಿಯ ತೀವ್ರತೆಗೆ ಸಾಕ್ಷಿಯಾಗಿದೆ.

ಬಾಗಲಕೋಟೆ ವಿಭಾಗ ವೊಂದರಿಂದಲೇ ಪ್ರತಿ ದಿನ ಮಂಗಳೂರು ಮತ್ತು ಗೋವಾಕ್ಕೆ ಹೋಗಿ ಬರುವ ಕೂಲಿ ಕಾರ್ವಿುಕರ ಸಂಖ್ಯೆ ಅಂದಾಜು 3500 ರಿಂದ 4 ಸಾವಿರ ಇದೆ. ಬೇಸಿಗೆಯ ಬೇಗೆಯಲ್ಲಿ ಸ್ಥಳೀಯವಾಗಿ ಎಲ್ಲೂ ಉದ್ಯೋಗ ದೊರೆಯದಿರುವುದು ರೈತರ, ಕೃಷಿಕಾರ್ವಿುಕರ ಸಂಕಷ್ಟವನ್ನು ಹೆಚ್ಚಿಸಿದೆ.

ಗ್ಯಾರಂಟಿ ಯೋಜನೆಗಳಿಂದಲೂ ಜನರ ಬದುಕಿನ ಬವಣೆಯನ್ನು ನೀಗಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂಬುದು ಇದರಿಂದ ಸ್ಪಷ್ಟ. ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯವಾಗಿ ಕೆಲಸದ ದಿನಗಳನ್ನು ಹೆಚ್ಚಿಸಲು ಮತ್ತು ಇತರ ಪೂರಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗುಳೆಯನ್ನು ತಪ್ಪಿಸಲು ಅಥವಾ ಪ್ರಮಾಣವನ್ನು ಕಡಿಮೆ ಮಾಡಲು ಸರ್ಕಾರ ಅವಶ್ಯಕ ಹೆಜ್ಜೆ ಇರಿಸಬೇಕಿದೆ. ಅಲ್ಲದೆ, ನರೇಗಾ ಯೋಜನೆಯಡಿ ಕೂಲಿಯನ್ನು ಕೂಡ ಸಕಾಲದಲ್ಲಿ ಪಾವತಿಸದಿರುವುದು ಗುಳೆ ಪ್ರಮಾಣವನ್ನು ಹೆಚ್ಚಿಸಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 25 ಕೋಟಿ ರೂ.ಗೂ ಅಧಿಕ ಕೂಲಿ ಪಾವತಿಯಾಗಬೇಕಿದೆ. ಸರಿಯಾದ ಸಮಯಕ್ಕೆ ಕೂಲಿ ನೀಡಿದರೆ, ಕಾರ್ವಿುಕರು ಗ್ರಾಮಗಳನ್ನು ತೊರೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಸರ್ಕಾರ ಇನ್ನಾದರೂ ಕಾರ್ವಿುಕರಿಗೆ ಅವರ ದುಡಿದ ಹಣವನ್ನು ವಿಳಂಬವಿಲ್ಲದೆ ಪಾವತಿಸಲಿ.

ಲೋಕಸಭಾ ಚುನಾವಣೆ ಸಮೀಪಿಸಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಆದರೆ, ಚುನಾವಣೆಯ ಸಿದ್ಧತೆ ಮತ್ತು ಇತರ ರಾಜಕೀಯ ತುರ್ತಗಳಿಗಿಂತ ಜನರ ದೈನಂದಿನ ಬದುಕನ್ನು ಸಹನೀಯಗೊಳಿಸುವುದು ಮುಖ್ಯ ಎಂಬುದನ್ನು ರಾಜಕಾರಣಿಗಳು ಅರಿತುಕೊಳ್ಳಬೇಕು. ಸ್ಥಳೀಯ ಜನಪ್ರತಿನಿಧಿಗಳು ಕೂಡ ಈ ಕಷ್ಟಕಾಲದಲ್ಲಿ ಜನರೊಂದಿಗೆ ನಿಲ್ಲಬೇಕು, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ ಉದ್ಯೋಗಸೃಷ್ಟಿಯ ದಾರಿಗಳನ್ನೂ ಹುಡುಕುವುದು ಈಗಿನ ತುರ್ತು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net